ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಜಾತ್ರೆ: ಮಾದಪ್ಪನಿಗೆ ಅಮಾವಾಸ್ಯೆ ಪೂಜೆ

Published 12 ನವೆಂಬರ್ 2023, 16:02 IST
Last Updated 12 ನವೆಂಬರ್ 2023, 16:02 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದೀಪಾವಳಿ ಜಾತ್ರೆ ಅಂಗವಾಗಿ ಅಮಾವಾಸ್ಯೆ ದಿನವಾದ ಭಾನುವಾರ ವಿಶೇಷ ಪೂಜಾ ಪುನಸ್ಕಾರ, ವಿವಿಧ ಸೇವೆಗಳು ಜರುಗಿದವು.  

ಭಾನುವಾರ ನುಸುಕಿನಲ್ಲೇ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಮಹಾಮಂಗಳಾರತಿ, ಗಂದಾಭಿಷೇಕ ಬಿಲ್ವಾರ್ಚನೆ, ಪುಷ್ಪಾರ್ಚನೆ ಗಂಧಾಭಿಷೇಕ ಇನ್ನಿತರ ಸೇವೆಗಳನ್ನು ನೆರವೇರಿಸಿದ ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ದೇವಾಲಯಕ್ಕೆ ಬಂದಿದ್ದ ಭಕ್ತರು ದೇವರ ದರ್ಶನವನ್ನು ಮಾಡಿ ಉರುಳುಸೇವೆ, ಪಂಜಿನ ಸೇವೆ, ಧೂಪದ ಸೇವೆ, ರುದ್ರಾಕ್ಷಿ ವಾಹನ, ಬಸವ ವಾಹನ, ಹುಲಿ ವಾಹನ ಸೇವೆಗಳನ್ನು ಮಾಡಿದರು. ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರಿಗೆ ಪ್ರಾಧಿಕಾರದ ವತಿಯಿಂದ ನೆರಳಿನ ವ್ಯವಸ್ಥೆ, ಧರ್ಮ ದರ್ಶನವಲ್ಲದೆ ವಿಶೇಷ ₹100, ₹200, ₹300 ಮತ್ತು ₹500 ಶುಲ್ಕದ ಸರದಿ ಸಾಲಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ತಮ್ಮ ಗ್ರಾಮಗಳ ವತಿಯಿಂದ ಮಾದೇಶ್ವರ ಸ್ವಾಮಿಗೆ ವಿಶೇಷ ಪರು (ಊಟದ ವ್ಯವಸ್ಥೆ) ಸೇವೆಯನ್ನು ನೆರವೇರಿಸಿದರು.

ಗ್ರಾಮಸ್ಥರು ತಮ್ಮ ಗ್ರಾಮಗಳಿಂದ ದೇಣಿಗೆಯನ್ನು ಪಡೆದು ಮಹದೇಶ್ವರ ಸನ್ನಿಧಿಯಲ್ಲಿಸಾಮೂಹಿಕವಾಗಿ ಅಡುಗೆ ಮಾಡಿ ಸಾಮೂಹಿಕವಾಗಿ ಊಟ ಮಾಡುವುದು ಈ ಆಚರಣೆಯ ವಿಶೇಷ.

ಪಂಕ್ತಿಯಲ್ಲಿ ಯಾರು ಊಟಕ್ಕೆ ಕುಳಿತರೂ ಅವರಿಗೆ ಊಟ ಬಡಿಸುವುದು ಈ ಪರು ಸೇವೆಯ ವಿಶೇಷ. ಪರು ಸೇವೆಗೂ ಮೊದಲು ತಾವು ಸಿದ್ಧಪಡಿಸಿದ ಆಹಾರಗಳನ್ನು ಒಂದೆಡೆ ಸಂಗ್ರಹಿಸಿ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಾಡಿ, ಅವನಿಗೆ ಮುಡಿಪಿಟ್ಟ ನಂತರ ಎಲ್ಲರಿಗೂ ಊಟವನ್ನು ಉಣಬಡಿಸುವುದು ವಾಡಿಕೆ. ನಂತರ ಮುಡಿಪಿಟ್ಟ ಪ್ರಸಾದವನ್ನು ಗ್ರಾಮದ ಮುಖ್ಯಸ್ಥರು ಸ್ವೀಕರಿಸುತ್ತಾರೆ. 

ಸಾವಿರಾರು ಭಕ್ತರು ಭಾಗಿ: ಭಾನುವಾರ ರಾತ್ರಿ ನಡೆದ ಸ್ವಾಮಿಯ ಚಿನ್ನದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 

ಹಾಲರುವೆ ಉತ್ಸವ ನಾಳೆ

ದೀಪಾವಳಿ ಜಾತ್ರೆಯ ಅಂಗವಾಗಿ ಬೇಡಗಂಪಣ ಸಮುದಾಯದ ಪುಟ್ಟ ಪುಟ್ಟ ಬಾಲೆಯರಿಂದ ಸೋಮವಾರ ಹಾಲರುವೆ ಉತ್ಸವ ನಡೆಯಲಿದೆ.  ಈ ಉತ್ಸವದಲ್ಲಿ 101 ಬಾಲಕಿಯರು ಭಾಗವಹಿಸುತ್ತದೆ. ಹೆಣ್ಣುಮಕ್ಕಳು ಉಪವಾಸವಿದ್ದು ಹಾಲರವೆ ಹಳ್ಳಕ್ಕೆ ತೆರಳಿ ಅಲ್ಲಿಂದ ಕಲಶದಲ್ಲಿ ಜಲವನ್ನು ತಂದು ಮಹದೇಶ್ವರ ಸ್ವಾಮಿಗೆ ಅರ್ಪಿಸುವುದು ಈ ಉತ್ಸವದ ವಿಶೇಷ.  ಕತ್ತಿ ಪವಾಡ: ಹೆಣ್ಣುಮಕ್ಕಳು ತರುವ ಹಾಲರುವೆಗೆ ಮಾರ್ಗ ಮಧ್ಯದಲ್ಲಿ  ಯಾವುದೇ ರೀತಿಯ ದುಷ್ಟ ಶಕ್ತಿಗಳು ತಾಗಿದ್ದರೂ ದೃಷ್ಠಿಯಾಗಬಾರದು ಎಂಬ ಉದ್ದೇಶದಿಂದ ಈ ಪವಾಡ  ನಡೆಯುತ್ತದೆ. ಊರಿನ ಪ್ರವೇಶ ದ್ವಾರದಲ್ಲಿ ಕತ್ತಿ ಪವಾಡ ನಡೆದ ನಂತರ ಹಾಲರುವೆ ಹೊತ್ತ ಹೆಣ್ಣು ಮಕ್ಕಳನ್ನು ಊರಿನ ಮುಖಾಂತರ ಮಂಗಳವಾದ್ಯಗಳ ಸಮೇತವಾಗಿ ದೇವಾಲಯಕ್ಕೆ ಕರೆತರಲಾಗುತ್ತದೆ.

ಭಾನುವಾರ ರಾತ್ರಿ ಮಹದೇಶ್ವರ ಬೆಟ್ಟದಲ್ಲಿ ನಡೆದ ಚಿನ್ನದ ರಥೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು
ಭಾನುವಾರ ರಾತ್ರಿ ಮಹದೇಶ್ವರ ಬೆಟ್ಟದಲ್ಲಿ ನಡೆದ ಚಿನ್ನದ ರಥೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT