ಮಹದೇಶ್ವರ ಬೆಟ್ಟ: ಯುಗಾದಿ ಜಾತ್ರೆಯ ಅಂಗವಾಗಿ ಇಲ್ಲಿನ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಅಮಾವಾಸ್ಯೆಯ ವಿಶೇಷ ಪೂಜೆ, ಉತ್ಸವ ಜರುಗಿದವು.
ಇದೇ 19ರಿಂದಲೇ ಯುಗಾದಿ ಜಾತ್ರೆ ಆರಂಭವಾಗಿದ್ದು, ಬುಧವಾರ (ಮಾರ್ಚ್ 22) ಬ್ರಹ್ಮರಥೋತ್ಸವದ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಮಂಗಳವಾರ ಅಮಾವಾಸ್ಯೆ ಅಂಗವಾಗಿ ಬೆಳಿಗ್ಗೆ 8ರಿಂದ 9 ಗಂಟೆವರೆಗೆ, ರಾತ್ರಿ 7.30ರಿಂದ 8.30ರವರೆಗೆ ದೇವಾಲಯದಲ್ಲಿ ಮಹದೇಶ್ವರಸ್ವಾಮಿಗೆ ಅಮಾವಾಸ್ಯೆಯ ವಿಶೇಷ ಪೂಜೆ ನಡೆದವು.
ತಮಿಳುನಾಡಿನಿಂದ ಹೆಚ್ಚು ಭಕ್ತರು: ಚಂದ್ರಮಾನ ಯುಗಾದಿ ಜಾತ್ರೆಗೆ ರಾಜ್ಯ ಅಲ್ಲದೆ ನೆರೆಯ ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಡೆಂಕಣಿಕೋಟೆ, ಧರ್ಮಪುರಿ, ಸೇಲಂ ಹಾಗೂ ಕೊಯಮತ್ತೂರು ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಮೂರು ದಿನಗಳಿಂದ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ಮಾದಪ್ಪನ ದರ್ಶನ ಪಡೆಯುತ್ತಿದ್ದಾರೆ. ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಬಂದಿರುವ ಸಾವಿರಾರು ಭಕ್ತರು, ದೇವಾಲಯ ಪ್ರಾಂಗಣ, ರಂಗಮಂದಿರ, ಬಸ್ ನಿಲ್ದಾಣ, ರಾಜಗೋಪುರದ ಎಡ-ಬಲ ಬದಿಯ ಆವರಣ, ದಾಸೋಹ, ಮಹದೇಶ್ವರ ಕಲ್ಯಾಣ ಮಂಟಪ ಬಳಿ, ಸಾಲೂರು ಮಠದ ಆವರಣ
ಸೇರಿದಂತೆ ವಿವಿಧ ಕಡೆಗಳಲ್ಲಿ ಬಿಡಾರ ಹೂಡಿದ್ದಾರೆ.
ಯುಗಾದಿ ಸಮಯದಲ್ಲಿ ತಮಿಳುನಾಡಿನಿಂದ ಬರುವ ಭಕ್ತರು ಮಹಾರಥೋತ್ಸವದಲ್ಲಿ ಪಾಲ್ಗೊಂಡು ವಿಶೇಷವಾಗಿ ಆಲಂಬಾಡಿ ಬಸವೇಶ್ವರ ಹಾಗೂ ಬೆಳ್ಳಿ ಬಸವ ವಾಹನ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಯುಗಾದಿ ಹಬ್ಬದ ದಿನ ಬೆಳಿಗ್ಗೆ ಮಹದೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದ್ದು, ಬೇಡಗಂಪಣ ಅರ್ಚಕರು ತೇರನ್ನು ಸಿದ್ಧಗೊಳಿಸಿದ್ದಾರೆ.
ಪ್ರತಿ ವರ್ಷ ದೊಡ್ಡತೇರಿಗೆ ಸಂಪೂರ್ಣವಾಗಿ ಹಸಿ ಬಿದಿರು ಬಳಕೆ ಮಾಡಲಾಗುತ್ತದೆ. ಬಿದಿರು ಹಾಗೂ ಹುರಿಯ ಹಗ್ಗಗಳಿಂದ 72 ಮೊಳ ಎತ್ತರದಲ್ಲಿ ರಥ ಇರಲಿದೆ. 52 ಅಡಿ ತೇರಿನಲ್ಲಿ 4 ಚೌಕೃತ ಪೆಟ್ಟಿಗೆ ನಿರ್ಮಾಣವಾಗಲಿದೆ. ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗಿದ್ದು, ತಳಿರು ತೋರಣಗಳಿಂದ ರಥ ಕಂಗೊಳಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.