ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಷಾ ಸಂಸ್ಥೆಯ ಸೇವೆ: ಮಾರ್ಟಳ್ಳಿಗೂ ಬಂತು ಆಂಬುಲೆನ್ಸ್‌

‘ಪ್ರಜಾವಾಣಿ' ವರದಿ ಪ್ರೇರಣೆ, ಗಡಿ ಪ್ರದೇಶದ ಜನರ ಬೇಡಿಕೆ ಈಡೇರಿಕೆ, ಸಾವಿರಾರು ಜನರಿಗೆ ಅನುಕೂಲ
Last Updated 28 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಜನರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ಸ್ವಯಂ ಸೇವಾ ಸಂಸ್ಥೆಯೊಂದು ಮಾಡಿದೆ.

ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಸಂಭವಿಸಿದ ವಿಷಪ್ರಸಾದ ದುರಂತದ ನಂತರ ಕೆಲವು ತಿಂಗಳ ಕಾಲ ವೆಂಟಿಲೇಟರ್‌ ಸಹಿತ ಆಂಬುಲೆನ್ಸ್‌ ನಿಯೋಜಿಸಿದ್ದ ಆರೋಗ್ಯ ಇಲಾಖೆ, ಆ ಬಳಿಕ ಅದನ್ನು ಬೇರೆ ಕಡೆಗೆ ನಿಯೋಜಿಸಿತ್ತು. ಮಾರ್ಟಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ ಸೌಲಭ್ಯ ಇಲ್ಲದೆ ಪರದಾಡುತ್ತಿದ್ದರು.

ಸಮೀಪದ ಕಡಬೂರು ಗ್ರಾಮದಲ್ಲಿರುವ ಸ್ವಯಂ ಸೇವಾ ಸಂಸ್ಥೆ ಅನಿಷಾ ಸಾವಯವ ಕೃಷಿ ಸಂಸ್ಥೆಯು ಆಂಬುಲೆನ್ಸ್‌ ವಾಹನ ಖರೀದಿಸಿ, ಸೇವೆ ನೀಡಲು ಆರಂಭಿಸಿದೆ. ಭಾನುವಾರ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.

ಹನೂರು ತಾಲ್ಲೂಕು ಹಾಗೂ ಮಾರ್ಟಳ್ಳಿ ಭಾಗದಲ್ಲಿ ವೆಂಟಿಲೇಟರ್‌ ಸಹಿತ ಆಂಬುಲೆನ್ಸ್‌ನ ಕೊರತೆಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ‘ಪ್ರಜಾವಾಣಿ’ಯ ಜನವರಿ 29ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಪ್ರೇರಣೆ ಪಡೆದು ಅನಿಷಾ ಸಂಸ್ಥೆಯ ಮುಖ್ಯಸ್ಥೆವಲ್ಲಿಯಮ್ಮಾಳ್ ಅವರು ಸಂಸ್ಥೆಯ ವತಿಯಿಂದ ಆಂಬುಲೆನ್ಸ್‌ ಸೇವೆ ಒದಗಿಸಿದ್ದಾರೆ.

ಮಾರ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಹಾಗೂ ಶಾಲಾ ಮಕ್ಕಳಿಗೆ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅನಿಷಾ ಸಂಸ್ಥೆ, ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ನಿರ್ಗತಿಕರಿಗೆ ಆರೋಗ್ಯ, ಶಿಕ್ಷಣ ಸೌಕರ್ಯ ಒದಗಿಸುತ್ತಿದೆ. ಶಾಲೆಗಳ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶೈಕ್ಷಣಿಕ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಮಾರ್ಟಳ್ಳಿಯ ಸೇಂಟ್‌ ಜೋಸೆಫ್‌ ಹೆಲ್ತ್‌ ಸೆಂಟರ್‌ನ ಸಹಕಾರದೊಂದಿಗೆ 4,000ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿತ್ತು. ಈ ಸಾಮಾಜಿಕ ಕಾರ್ಯದಿಂದಾಗಿ ಅವರು ಈ ವರ್ಷ ‘ಪ್ರಜಾವಾಣಿ ಸಾಧಕರು’ ಗೌರವಕ್ಕೂ ಪಾತ್ರರಾಗಿದ್ದರು.

ಜೋಸೆಫ್‌ ಹೆಲ್ತ್‌ ಸೆಂಟರ್‌ ಸಹಕಾರ: ಆಂಬುಲೆನ್ಸ್‌ ಸೇವೆಗೆ ಸೇಂಟ್‌ ಜೋಸೆಫ್‌ ಹೆಲ್ತ್‌ ಸೆಂಟರ್‌ ಸಹಕಾರ ನೀಡಲಿದೆ. ಆಸ್ಪತ್ರೆಯ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದರಲ್ಲಿ ವೆಂಟಿಲೇಟರ್‌ ವ್ಯವಸ್ಥೆ ಇಲ್ಲದಿದ್ದರೂ, ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ.

ಮಾರ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಹೂಗ್ಯಂ ಗ್ರಾಮಪಂಚಾಯಿತಿ ವ್ಯಾಪ್ತಿಯ ನೆಲ್ಲೂರು, ಹಂಚಿಪಾಳ್ಯ, ಪೆದ್ದನಪಾಳ್ಯ, ಕೂಡ್ಲೂರು, ಯರಂಬಾಡಿ ಹಾಗೂ ಜಲ್ಲಿಪಾಳ್ಯ ಗ್ರಾಮಗಳ ಜನರಿಗೆ ಈ ಆಂಬುಲೆನ್ಸ್‌ನ ಪ್ರಯೋಜನ ಸಿಗಲಿದೆ.

ನಮಗೆ ಅನುಕೂಲ: ‘ಕೃಷಿ ಚಟುವಟಿಕೆ ಜೊತೆಗೆ ಬಡಮಕ್ಕಳ ಶಿಕ್ಷಣಕ್ಕಾಗಿ ಸದಾ ಶ್ರಮಿಸುತ್ತಿರುವ ಅನಿಷಾ ಈಗ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಂಬುಲೆನ್ಸ್ ಸೇವೆಗೆ ಮುಂದಾಗಿರುವುದು ಶ್ಲಾಘನೀಯ. ಈ ಭಾಗದ ಜನರು ಸಾವಿರಾರು ರೂಪಾಯಿ ದುಡ್ಡು ಕೊಟ್ಟು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವುದಕ್ಕೆ ಕಷ್ಟವಾಗುತ್ತಿತ್ತು. ದುಡ್ಡು ಕೊಟ್ಟರೂ ಸರಿಯಾದ ಸಂದರ್ಭಕ್ಕೆ ವಾಹನ ಸಿಗುತ್ತಿರಲಿಲ್ಲ. ಹೀಗಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಕೆಲವರು ಮೃತಪಟ್ಟಿದ್ದಾರೆ. ಈಗ ಅನಿಷಾ ಸಂಸ್ಥೆ ಸೇವೆ ನೀಡಿರುವುದು ಮಾರ್ಟಳ್ಳಿ ಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದು ಮಾರ್ಟಳ್ಳಿಯ ಲೂಯಿಸ್ ನೇಯ್ಸನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಜಾವಾಣಿ’ ವರದಿ ಪ್ರೇರಣೆ: ವಲ್ಲಿಯಮ್ಮಾಳ್‌

ಹನೂರು ತಾಲ್ಲೂಕಿನಲ್ಲಿ ಆಂಬುಲೆನ್ಸ್‌ ಕೊರತೆ ಮತ್ತು ಅದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕೆಲವು ತಿಂಗಳ ಹಿಂದೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ನೋಡಿದ್ದ ನಾನು, ಇಲ್ಲಿನ ಜನರಿಗೆ ಆರೋಗ್ಯ ಸೇವೆ ಕಲ್ಪಿಸಿಕೊಡುವ ಉದ್ದೇಶದಿಂದ ಏನಾದರೊಂದು ಅನುಕೂಲ ಮಾಡಬೇಕು ಎಂದು ಚಿಂತಿಸಿದ್ದೆ. ಕೃಷಿ ಚಟುವಟಿಕೆ, ಕೈತೋಟ, ಮಕ್ಕಳ ಶಿಕ್ಷಣ ಇಷ್ಟಕ್ಕೆ ಸೀಮಿತವಾಗಿದ್ದ ನಮ್ಮ ಸಂಸ್ಥೆ ಇದನ್ನು ಬಿಟ್ಟು, ಸಾಮಾನ್ಯ ಜನರಿಗೆ ಇನ್ನೂ ಏನಾದರೂ ಸೇವೆ ನೀಡಬೇಕು ಎಂದು ಯೋಚಿಸಿ ಆಂಬುಲೆನ್ಸ್ ಸೇವೆ ಕಲ್ಪಿಸಿದ್ದೇವೆ’ ಎಂದು ಅನಿಷಾ ಸಾವಯವ ಕೃಷಿ ಸಂಸ್ಥೆಯ ಮುಖ್ಯಸ್ಥೆ ವಲ್ಲಿಯಮ್ಮಾಳ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಕ್ಸಿಜನ್, ಪಲ್ಸ್ ಆಕ್ಸಿಮೀಟರ್, ಅಸ್ತಮಾ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಆಂಬು ಲೆನ್ಸ್ ಕಲ್ಪಿಸಲಾಗಿದೆ. ಸೇಂಟ್ ಜೋಸೆಫ್ ಹೆಲ್ತ್‌ ಸೆಂಟರ್‌ನ ಸಿಬ್ಬಂದಿಯೂ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಮಾರ್ಟಳ್ಳಿ ಭಾಗದವರು ಮಾತ್ರವಲ್ಲದೇ, ಸುತ್ತಮುತ್ತಲ ಗ್ರಾಮಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸೇವಾ ದರವನ್ನು ಇನ್ನೂ ನಿಗದಿ ಮಾಡಿಲ್ಲ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ವಲ್ಲಿಯಮ್ಮಾಳ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT