ಸೋಮವಾರ, ಮಾರ್ಚ್ 8, 2021
27 °C

ಅರಕಲವಾಡಿ: ಸಾಧನೆಗೆ ಸಂದ ಪ್ರಶಸ್ತಿ

ರವಿ ಎನ್‌. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪರಿಶ್ರಮಿಸಿದ ಚಾಮರಾಜನಗರ ತಾಲ್ಲೂಕಿನ ಅರಕಲವಾಡಿ ಗ್ರಾಮ ಪಂಚಾಯಿತಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿ. 2015–16ರಲ್ಲಿ ಈ ಗೌರಕ್ಕೆ ಗ್ರಾಮ ಪಂಚಾಯಿತಿ ಪಾತ್ರವಾಗಿತ್ತು.

ಅರಕಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಅರಕಲವಾಡಿ, ಯಾನಗಹಳ್ಳಿ, ಮೂಡಲ ಹೊಸಹಳ್ಳಿ, ಮಂಚುಗುಂಡಿಪುರ ಹಾಗೂ ಲಿಂಗನಪುರ ಒಟ್ಟು 5 ಗ್ರಾಮಗಳು ಸೇರುತ್ತವೆ.

‘ಕಂದಾಯ ವಸೂಲಿಯಲ್ಲಿ ಶೇ 100ರಷ್ಟು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶೇ 90ಕ್ಕಿಂತ ಹೆಚ್ಚಿನ ಪ್ರಗತಿ ಸಾಧನೆ, ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆಯೂ ಮಾಡಲಾಗುತ್ತಿದೆ’ ಎಂದು ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ ‘ಪ್ರಜಾವಾಣಿ’ಗೆ ಹೇಳಿದರು.

‘ನೈರ್ಮಲ್ಯ ಗ್ರಾಮ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಎಲ್ಲ ಯೋಜನೆಗಳಲ್ಲೂ ಉತ್ತಮ ಸಾಧನೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಸಕಾಲಕ್ಕೆ ಗ್ರಾಮ ಸಭೆಗಳನ್ನು ಆಯೋಜಿಸಿ ಗ್ರಾಮಸ್ಥರೊಂದಿಗೆ ಉತ್ತಮ ಸಂಬಂಧವನ್ನು ಪಂಚಾಯಿತಿ ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿ ಹೊಂದಿದ್ದೇವೆ. ಈ ಕಾರಣಗಳಿಗಾಗಿ ಪ್ರಶಸ್ತಿಗೆ ನಮ್ಮ ಪಂಚಾಯಿತಿ ಆಯ್ಕೆಯಾಗಿದೆ’ ಎಂದು ಅವರು ಹೇಳಿದರು. 

‘ಗ್ರಾಮ ಸಭೆಯ ನಡಾವಳಿಗಳನ್ನು ಪಂಚತಂತ್ರ ತಂತ್ರಾಂಶಕ್ಕೆ ಅಳವಡಿಸಿರುವುದು ಕೂಡ ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಮುಖ್ಯ ಕಾರಣ’ ಎಂದು ಅವರು ವಿವರಿಸಿದರು.

‘ಗ್ರಾಮೀಣ ಜನರಿಗೆ ಗುಣಮಟ್ಟದ ಆಡಳಿತ ನೀಡಿ ಗ್ರಾಮವನ್ನು ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ನಿರಂತರ ಶ್ರಮವಹಿಸಿರುವ ಫಲವಾಗಿ 2ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸ ತಂದಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಫೈಝಲ್‌ ಉಲ್‌ರೆಹಮಾನ್‌ ಷರೀಫ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

***

ಪ್ರಸ್ತುತ ಜಲವರ್ಷ ಆಚರಣೆ ಮಾಡಲಾಗುತ್ತಿದೆ. ನೀರಿನ ಮಿತ ಬಳಕೆ ಉದ್ದೇಶದಿಂದ ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳಿಗೆ ಮೀಟರ್‌ ಸಹಿತ ನೆಲ್ಲಿ ಅಳವಡಿಕೆ ಮಾಡಲಾಗುವುದು.
- ಫೈಝಲ್‌ ಉಲ್‌ರೆಹಮಾನ್‌ ಷರೀಫ್‌, ಪಿಡಿಒ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು