ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ಬಿದ್ದಾಗ ಸಿಗದ ನೀರು; ಅಡಿಕೆ ಇಳುವರಿ ಶೇ 50 ಕುಸಿತ

ಬಿಸಿಲಿನ ವಾತಾವರಣದಿಂದ ಬೆಳೆಗಾರರು, ವ್ಯಾಪಾರಿಗಳಿಗೆ ನಷ್ಟ
Last Updated 21 ಜನವರಿ 2020, 10:31 IST
ಅಕ್ಷರ ಗಾತ್ರ

ಚಾಮರಾಜನಗರ: ತೀವ್ರ ಬಿಸಿ ವಾತಾವರಣ ಹಾಗೂ ನೀರಿನ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಈ ವರ್ಷ ಅಡಿಕೆ ಇಳುವರಿ ಶೇ 40ರಿಂದ 50ರಷ್ಟು ಕುಂಠಿತವಾಗಿದೆ. ಇದರಿಂದಾಗಿ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ನಷ್ಟವಾಗಿದೆ.

ತೋಟಗಾರಿಕಾ ಬೆಳೆಯಾಗಿರುವ ಅಡಿಕೆಯನ್ನು ಜಿಲ್ಲೆಯಲ್ಲಿ 702 ಹೆಕ್ಟೇರ್‌ (1,755 ಎಕರೆ) ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಮಳೆ ಸಾಕಷ್ಟು ಬಂದರೂ ಕಳೆದ ವರ್ಷ ಬಿಸಿಲಿನ ವಾತಾವರಣ ಹೆಚ್ಚಿತ್ತು. ಹೀಚು ಅಡಿಕೆಗಳು ಭಾರಿ ಪ್ರಮಾಣದಲ್ಲಿ ಉದುರಿ ಹೋಗಿದ್ದವು. ಕೆಲವು ಕಡೆಗಳಲ್ಲಿ ನೀರಿನ ಕೊರತೆಯೂ ಕಂಡು ಬಂತು. ಭಾರಿ ಮಳೆಯಿಂದಾಗಿ ಯಳಂದೂರು ಭಾಗದಲ್ಲಿ ಕೊಳೆರೋಗವೂ ಕಂಡು ಬಂದಿತ್ತು. ಬೇರು ತಿನ್ನುವ ಹುಳುವಿನ ಬಾಧೆಯೂ ಅಲ್ಲಲ್ಲಿ ಕಂಡು ಬಂದಿತ್ತು. ಈ ಎಲ್ಲ ಕಾರಣಗಳಿಂದಾಗಿಫಸಲು ಕಡಿಮೆ ಎಂದು ಹೇಳುತ್ತಾರೆ ಬೆಳೆಗಾರರು ಹಾಗೂ ವ್ಯಾಪಾರಿಗಳು.

‘ಅಡಿಕೆಗೆ ತಂಪಾದ ಹವೆ ಇರಬೇಕು. ಸಿಂಗಾರದಲ್ಲಿ ಎಳೆ ಅಡಿಕೆಗಳು ಮೂಡುವ ಹೊತ್ತಿನಲ್ಲಿ ಜಿಲ್ಲೆಯಲ್ಲಿ ಬಿಸಿ ವಾತಾವರಣ ಇತ್ತು. ಇದರಿಂದ ಇಳುವರಿ ಕಡಿಮೆಯಾಗಿದೆ. ನನಗೆ ಶೇ 70ರಷ್ಟು ಫಸಲು ನಷ್ಟವಾಗಿದೆ’ ಎಂದು ಚಾಮರಾಜನಗರ ತಾಲ್ಲೂಕಿನ ಕೂಡ್ಳೂರಿನ ಬೆಳೆಗಾರ ಹಾಗೂ ವ್ಯಾಪಾರಿ ಎಂ.ಪಿ.ಶಂಕರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಅಡಿಕೆ ತೋಟವನ್ನು ವ್ಯಾಪಾರಿಯೊಬ್ಬರಿಗೆ ಗುತ್ತಿಗೆ ಕೊಟ್ಟಿದ್ದೆ. ₹ 1.80 ಲಕ್ಷಕ್ಕೆ ಮಾತಾಗಿತ್ತು. ತುಂಬ ನಷ್ಟವಾಗಿದೆ ಎಂದು ವ್ಯಾಪಾರಿ ₹ 1.5 ಲಕ್ಷ ಕೊಟ್ಟಿದ್ದಾನೆ. ಈ ವರ್ಷ ಅಡಿಕೆ ಬೆಳೆಗಾರರಿಗೆ ನಷ್ಟವಾಗಿದೆ’ ಎಂದು ಚಾಮರಾಜನಗರ ಬೆಳೆಗಾರ ಪ್ರಭುಸ್ವಾಮಿ ವಿವರಿಸಿದರು.

‘ಪ್ರತಿ ವರ್ಷ ಹಲವು ತೋಟಗಳನ್ನು ವಹಿಸಿಕೊಳ್ಳುತ್ತಿದ್ದೆ. ಫಸಲು ಚೆನ್ನಾಗಿತ್ತು. ಆದರೆ, ಈ ವರ್ಷ ಶೇ 40ರಷ್ಟು ಫಸಲು ಕಡಿಮೆಯಾಗಿದೆ. ಲಾಭ ಸಿಗುವುದಿಲ್ಲ. ಮಾಡಿರುವ ವೆಚ್ಚ, ಮಾಲೀಕರಿಗೆ ನೀಡಬೇಕಾದ ಹಣ ಸಿಕ್ಕಿದರೆ ಅದೇ ದೊಡ್ಡದು’ ಎಂದು ಕೋಡಿಮೋಳೆಯ ವ್ಯಾಪಾರಿ ಚಿನ್ನಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದರವೂ ಕಡಿಮೆ: ಫಸಲು ಮಾತ್ರವಲ್ಲ, ದರವೂ ಕಡಿಮೆಯಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

‘ಅಡಿಕೆಯನ್ನು ಬೇಯಿಸಿ ಪೋಡಿ, ಸರಕು, ರಾಶಿ (ಉಂಡೆ)... ಹೀಗೆ ವರ್ಗೀಕರಿಸಿ ಮಾರಾಟ ಮಾಡಲಾಗುತ್ತದೆ. ಪೋಡಿಗೆ ಕ್ವಿಂಟಲ್‌ಗೆ ₹ 50 ಸಾವಿರದವರೆಗೂ ದರ ಇತ್ತು. ಈ ವರ್ಷ ₹ 35 ಸಾವಿರದಿಂದ ₹ 40 ಸಾವಿರದವರೆಗೆ ಇದೆ. ಸರಕು, ರಾಶಿ ಬೆಲೆಯೂ ಕಡಿಮೆ ಇದೆ’ ಎಂದು ಚಿನ್ನಸ್ವಾಮಿ ಹೇಳಿದರು.

‘ಸರಕು, ರಾಶಿಗೆ ಕ್ವಿಂಟಲ್‌ಗೆ ₹ 32 ಸಾವಿರ– ₹ 33 ಸಾವಿರ ಬೆಲೆ ಇದೆ. ಹಣ್ಣು ಅಡಿಕೆಗಳನ್ನು ಒಣಗಿಸಿ ಸುಲಿಯದೆ ನೇರವಾಗಿ ಕೊಡುತ್ತೇವೆ. ಕ್ವಿಂಟಲ್‌ಗೆ ₹ 9,500–10,000ರ ವರೆಗೆ ಬೆಲೆ ಇದೆ’ ಎಂದು ಎಂ.ಪಿ.ಶಂಕರ್‌ ಅವರು ವಿವರಿಸಿದರು.

ಆಶಾದಾಯಕ: ‘ಅಡಿಕೆ ಮರಗಳು ಈಗ ಸಮೃದ್ಧವಾಗಿದ್ದು, ಮುಂದಿನ ವರ್ಷಕ್ಕೆ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ’ ಎಂದು ಅವರು ಮಾಹಿತಿ ನೀಡಿದರು.

ಕೆಂಪಡಿಕೆಯೇ ಹೆಚ್ಚು

ಹಣ್ಣು ಅಡಿಕೆಯನ್ನು ಒಣಗಿಸಿ, ಸುಲಿದು (ಚಾಲಿ) ಮಾರಾಟ ಮಾಡುವ ಪದ್ಧತಿ ಇಲ್ಲಿಲ್ಲ. ಹಸಿ ಅಡಿಕೆಯನ್ನು ಬೇಯಿಸಿ ಕೆಂಪಡಿಕೆಯನ್ನು ಗುಣಮಟ್ಟಕ್ಕೆ ಅನುಸಾರ ವಿವಿಧ ರೀತಿಯಲ್ಲಿ ವರ್ಗೀಕರಿಸಿ (ಪೋಡಿ, ಸರಕು, ರಾಶಿ ಇತ್ಯಾದಿ) ಮಾರಾಟ ಮಾಡಲಾಗುತ್ತದೆ. ಇದನ್ನು ಕೂಡ ಬೆಳೆಗಾರರು ಮಾಡುವುದಿಲ್ಲ. ವ್ಯಾಪಾರಿಗಳು ಮಾಡುತ್ತಾರೆ.

ಬೆಳೆಗಾರರು ತಮ್ಮ ತೋಟವನ್ನೂ ನಿರ್ದಿಷ್ಟ ಬೆಲೆಗೆ ವ್ಯಾಪಾರಿಗಳಿಗೆ ಗುತ್ತಿಗೆ ನೀಡುವುದೇ ಜಾಸ್ತಿ.

‘ಅಡಿಕೆಯನ್ನು ಬೇಯಿಸಿ, ಒಣಗಿಸುವುದಕ್ಕೆ ತುಂಬಾ ಕೆಲಸ ಹಿಡಿಯುತ್ತದೆ. ಜಿಲ್ಲೆಯಲ್ಲಿ ಆಲೂರು, ಕೂಡ್ಳೂರು, ಸರಗೂರು ಮೋಳೆ, ಕೋಡಿಮೋಳೆ, ಬೂದಿ ತಿಟ್ಟು, ಹಂಡರಕಳ್ಳಿಮೋಳೆಗಳಲ್ಲಿ ಮಾತ್ರ ಕೆಂಪಡಿಕೆ (ಬೇಯಿಸಿ, ಒಣಗಿಸುವುದು) ಮಾಡುವುದನ್ನು ಕಾಣಬಹುದು’ ಎಂದು ಚಿನ್ನಸ್ವಾಮಿ ಅವರು ಹೇಳಿದರು.

‘ಜಿಲ್ಲೆಯಲ್ಲಿ ಅಡಿಕೆ ಸೀಸನ್‌ ಮುಗಿಯಿತು. ಈಗ ಕೇರಳ, ತಮಿಳುನಾಡಿನಿಂದ ಹಸಿ ಅಡಿಕೆ ಬರುತ್ತಿವೆ. ಇಲ್ಲಿ ಬೇಯಿಸಿ ಒಣಗಿಸಿ ಪೋಡಿಯನ್ನು ತುಮಕೂರಿನಲ್ಲಿ ಮಾರಾಟ ಮಾಡುತ್ತೇವೆ. ಉಳಿದವುಗಳನ್ನು ಸ್ಥಳೀಯ ಕಾಂಪ್ಕೊಗೆ ಮಾರುತ್ತೇವೆ’ ಎಂದು ಅವರು ಹೇಳಿದರು.

ವ್ಯಾಪಾರಿಗಳ ನಡುವೆ ಹೆಚ್ಚಿದ ಪೈಪೋಟಿ

ಜಿಲ್ಲೆಯಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ವ್ಯಾಪಾರಿಗಳ ನಡುವೆಯೂ ಪೈಪೋಟಿ ಹೆಚ್ಚುತ್ತಿದೆ.

ಸ್ಥಳೀಯರಲ್ಲದೆ ಮಂಡ್ಯ, ಮೈಸೂರು ಗ್ರಾಮಾಂತರ, ಕೆ.ಆರ್. ನಗರ ಸೇರಿದಂತೆ ದೂರದೂರಿನ ವ್ಯಾಪಾರಿಗಳು ಕೂಡ ಜಿಲ್ಲೆಗೆ ಬಂದು ಅಡಿಕೆ ತೋಟಗಳನ್ನು ಗುತ್ತಿಗೆಗೆ ಪಡೆಯುತ್ತಿದ್ದಾರೆ.

‘ವ್ಯಾಪಾರಿಗಳ ನಡುವೆ ವರ್ಷದಿಂದ ವರ್ಷಕ್ಕೆ ಸ್ಪ‍ರ್ಧೆ ಹೆಚ್ಚುತ್ತಿದೆ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆತೋಟಗಳ ಮಾಲೀಕರು ಗುತ್ತಿಗೆ ಕೊಡುತ್ತಾರೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT