ಬುಧವಾರ, ಆಗಸ್ಟ್ 10, 2022
24 °C
ಕೆರೆಗೆ ನೀರು ತುಂಬಿಸುವ ವಿಚಾರ: ರೈತನೊಂದಿಗಿನ ಸಂಭಾಷಣೆಯ ಆಡಿಯೊ ವೈರಲ್‌

ಉಸ್ತುವಾರಿ ಸಚಿವರ ನಿಂದಿಸಿದರೇ ಶಾಸಕ ಪುಟ್ಟರಂಗಶೆಟ್ಟಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಹುತ್ತೂರು ಕೆರೆಯಿಂದ ಮೂರನೇ ಹಂತದ ಕೆರೆಗಳಿಗೆ ನೀರು ತುಂಬಿಸದೆ ನಾಲ್ಕನೇ ಹಂತದ ವಡ್ಡಗೆರೆ ಕೆರೆಗೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್, ಗುಂಡ್ಲುಪೇಟೆ ಶಾಸಕ ನಿರಂಜನ ಕುಮಾರ್‌‌ ಅವರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾದ ಆಡಿಯೊ ತುಣುಕು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದೆ. 

4.22 ನಿಮಿಷಗಳ ಆಡಿಯೊ ಒಂದೆರಡು ತಿಂಗಳು ಹಳೆಯದು ಎಂದು ಹೇಳಲಾಗುತ್ತಿದೆ. ಹುತ್ತೂರು ಕೆರೆಯಿಂದ ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಭಾಗದ ಕೆರೆಗಳಿಗೆ ನೀರು ಹರಿಸದೆ, ವಡ್ಡೆಗೆರೆ ಕೆರೆ ನೀರು ಬಿಡುತ್ತಿರುವ ವಿಚಾರ ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್ ಅವರೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ನಿಯಮಾನುಸಾರವಾಗಿ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆ ಸಂದರ್ಭದಲ್ಲಿ ನಡೆದಿರುವ ಸಂಭಾಷಣೆಯ ತುಣುಕು ಇದು ಎನ್ನಲಾಗಿದೆ. 

ತಾಲ್ಲೂಕಿನ ಕಿಲಗೆರೆಯ ರೈತರೊಬ್ಬರು ಕರೆ ಮಾಡಿ, ಮೂರನೇ ಹಂತದ ಕೆರೆಗಳಿಗೆ ನೀರು ಹರಿಸದೆ ನಾಲ್ಕನೇ ಹಂತದ ಯೋಜನೆಯಲ್ಲಿ ಬರುವ ವಡ್ಡಗೆರೆ ಕೆರೆಗೆ ನೀರು ಹರಿಸಲಾಗುತ್ತಿದೆ ಎಂದು ಪುಟ್ಟರಂಗಶೆಟ್ಟಿ ಅವರಿಗೆ ದೂರು ಕೊಟ್ಟಾಗ ಈ ರೀತಿ ಬೈದಿದ್ದಾರೆ ಎನ್ನಲಾಗಿದೆ. 

ನಿರಂಜನ ಕುಮಾರ್‌, ಸುರೇಶ್‌ ಕುಮಾರ್‌ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಹೀನಾಮಾನವಾಗಿ ಬೈಯುವುದು, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಏಕವಚನದಲ್ಲಿ ಸಂಭೋದಿಸುವುದೂ ಕೇಳಿಸುತ್ತದೆ.

‘ನಿಮ್ಮ ಕೆರೆಗಳಿಗೆ ನೀರು ಹರಿಯಬೇಕಾದರೆ ಪ್ರತಿಭಟನೆ ನಡೆಸಿ, ಹುತ್ತೂರಿಗೆ ಹೋಗಿ ನೀರು ಹರಿಯುತ್ತಿರುವುದನ್ನು ತಡೆಯಿರಿ’ ಎಂದು ಹೇಳುವುದೂ ಆಡಿಯೊ ತುಣುಕಿನಲ್ಲಿದೆ. 

‘ವಡ್ಡಗೆರೆ ಕೆರೆ ಕಡೆಯವರು ಪ್ರತಿಭಟನೆ ಮಾಡಿದ್ದಾರೆ. ಅದಕ್ಕೆ ನೀರು ಹರಿಸುತ್ತಾರೆ. ನೀವು ನೀರು ಕೇಳುತ್ತಿಲ್ಲ. ಪ್ರತಿಭಟನೆಯೂ ಮಾಡುವುದಿಲ್ಲ. ಒಂದು ದಿನ ವಡ್ಡಗೆರೆ ಕೆರೆಗೆ ಹರಿಯುವ ನೀರನ್ನು ತಡೆಯಿರಿ. ಆಗ ಎಂಜಿನಿಯರ್‌ ಬರುತ್ತಾರೆ. ಕ್ಯಾಕರಿಸಿ ಉಗಿದು, ಹಂತದ ಪ್ರಕಾರವಾಗಿ ನೀರು ಹರಿಸುವಂತೆ ಹೇಳಿ. ಅಲ್ಲಿನ ಕೆರೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ಹರಿಸುವಂತೆ ನಿರಂಜನ್‌ಕುಮಾರ್‌ಗೆ ಹೇಳಿದೆ. ಅವನು ಕೇಳಲಿಲ್ಲ. ಬಂದಿದ್ದ ₹8 ಕೋಟಿಯೂ ವಾಪಸ್‌ ಹೋಯಿತು. ಪೈಪ್‌ ಇಲ್ಲದೇ ನೀರು ಹರಿದು ಕೆರೆ ತುಂಬಲು ಸಾಧ್ಯವೇ? ಕಲ್ಕಟ್ಟ ಕೆರೆ 750 ಎಕರೆ ಇದೆ. ಅದನ್ನು ತುಂಬಿಸುವುದಕ್ಕೆ ಇವನಿಗೆ ಸಾಧ್ಯವಿದೆಯೇ? ಇನ್ನು ನಿಮಗೆಲ್ಲಿ ನೀರು ಬರುತ್ತದೆ’ ಎಂದು ಪುಟ್ಟರಂಗಶೆಟ್ಟಿ ಪ್ರಶ್ನಿಸುವುದು ತುಣುಕಿನಲ್ಲಿ ಕೇಳಿಸುತ್ತದೆ. 

‘ನಾಲ್ಕನೇ ಹಂತದ ಕೆರೆಗಳಿಗೆ ನೀರು ಬಿಟ್ಟದ್ದು ಯಾಕೆ ಎಂದು ಪ್ರತಿಭಟನೆ ಮಾಡಿ, ಆ ನಂತರ ಡಿಸಿ ಹತ್ತಿರ ಬನ್ನಿ. ಡಿಸಿಗೂ ಏನೂ ಮಾಡುವುದಕ್ಕಾಗುವುದಿಲ್ಲ. ಉಸ್ತುವಾರಿ ಸಚಿವರನ್ನು ಕೇಳುತ್ತಾರೆ. ಉಸ್ತುವಾರಿ ಸಚಿವನೇ ಇದನ್ನೆಲ್ಲ ಮಾಡಿರುವುದು. ನಿರಂಜನಕುಮಾರ್‌ ಮಾತನ್ನು ಕೇಳಿ ಈ ರೀತಿ ಮಾಡಿದ್ದಾನೆ’ ಎಂಬ ಮಾತುಗಳು ನಿಮಿಷದ ತುಣುಕಿನಲ್ಲಿ ಇವೆ.

ಈ ಬಗ್ಗೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ‘ಅವರು ಏನು ಕಲಿತಿದ್ದಾರೋ ಆ ರೀತಿ ಮಾತನಾಡಿದ್ದಾರೆ. ಅವರು ಬೆಳೆದು ಬಂದ ರೀತಿಯಲ್ಲಿ ಮಾತನಾಡಿದ್ದಾರೆ. ಆಡಿಯೊ ಕೆಟ್ಟದಾಗಿದೆ ಎಂದು ಸ್ನೇಹಿತರು ಹೇಳಿದ್ದಾರೆ. ನಾನು ಕೇಳಿಲ್ಲ’ ಎಂದಷ್ಟೇ ಹೇಳಿದರು. 

ಪುಟ್ಟರಂಗಶೆಟ್ಟಿ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಪ್ರತಿಕ್ರಿಯೆ ನೀಡದೆ ಕೋಪಿಸಿಕೊಂಡು ಹೋದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು