ಶುಕ್ರವಾರ, ಡಿಸೆಂಬರ್ 3, 2021
27 °C
ಬಾಳೆ ಗಿಡ ಕಡಿದ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌

ಆಯುಧ ಪೂಜೆ ಸಂಭ್ರಮ, ಶ್ರದ್ಧಾಭಕ್ತಿಯ ವಿಜಯದಶಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಆಯುಧ ಪೂಜೆ, ಶುಕ್ರವಾರ ವಿಜಯದಶಮಿಯನ್ನು ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. 

ನವರಾತ್ರಿಯ ಮಹಾನವಮಿಯ ದಿನ ಆಚರಿಸುವ ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ಹಿಂದೂಗಳು ಪ್ರತಿ ಮನೆಯಲ್ಲೂ ಆಚರಿಸಿದರು. ವಿಜಯ ದಶಮಿಯಂದು ಮನೆಯಲ್ಲಿ ಏನೂ ವಿಶೇಷ ಕಾರ್ಯಕ್ರಮ ಇಲ್ಲದಿದ್ದರೂ; ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. 

ಗುರುವಾರದ ಆಯುಧ ಪೂಜೆಗೆ ಬುಧವಾರವೇ ಅಗತ್ಯ ವಸ್ತುಗಳನ್ನು ಖರೀದಿಸಿದ್ದರು. ಬೆಳಿಗ್ಗೆ ಮನೆಗಳ ಮುಂಭಾಗ ಮಹಿಳೆಯರು ಬಣ್ಣಬಣ್ಣದ ರಂಗೋಲಿ ಬಿಡಿಸಿ, ಮನೆಯನ್ನು ಬಾಳೆಕಂದು, ಮಾವಿನ ಸೊಪ್ಪಿನ ತೋರಣಗಳಿಂದ ಅಲಂಕರಿಸಿದ್ದರು. 

ಪುರುಷರು ವಾಹನ, ಯಂತ್ರೋಪಕರಣಗಳನ್ನು ಹಾಗೂ ಆಯುಧಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧಗೊಳಿಸಿದರು. ಬಾಳೆಕಂದು, ಹೂವಿನ ಹಾರಗಳಿಂದ ವಾಹನಗಳನ್ನು ಸಿಂಗರಿಸಿದ್ದರು. ವಾಹನಗಳಿಗೆ ವಿಭೂತಿ, ಕುಂಕಮ, ಅರಿಸಿನದಿಂದ ಹಚ್ಚಿ, ಹೂವಿನಿಂದ ಅರ್ಚಿಸಿ, ಮಂಗಳಾರತಿ ಎತ್ತಿ, ತೆಂಗಿನಕಾಯಿ ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರು.

ಬಳಿಕ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿದರು. ಹಬ್ಬದ ಅಡುಗೆ ಸಿದ್ಧಪಡಿಸಿ ಒಟ್ಟಾಗಿ ಸಿಹಿ ಭೋಜನ ಸವಿದರು. ಸ್ನೇಹಿತರು, ನೆಂಟರಿಷ್ಟರನ್ನು ಆಹ್ವಾನಿಸಿ ಹಬ್ಬವನ್ನು ಆಚರಿಸಿದರು.

ಎರಡ್ಮೂರು ದಿನ ರಜೆ ಇದ್ದುದರಿಂದ ಹಲವರು ಪೂಜೆಯ ಬಳಿಕ ಮಧ್ಯಾಹ್ನದ ಭೋಜನ ಸ್ವೀಕರಿಸಿ, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಹೊರಟರು.

ವಾಹನಗಳ ಮಾರಾಟ ಭರಾಟೆ: ಆಯುಧಪೂಜೆಯಂದು ಅಂಗಡಿಗಳಲ್ಲೂ ವಿಶೇಷ ಪೂಜೆ ನಡೆದವು. ವಾಹನಗಳ ಶೋರೂಂಗಳಲ್ಲಿ ವ್ಯಾಪಾರ ಜೋರಾಗಿತ್ತು. ಆಯುಧಪೂಜೆ ಹಾಗೂ ವಿಜಯ ದಶಮಿಯಂದು ವಾಹನಗಳನ್ನು ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ, ಅದೇ ದಿನಕ್ಕೆ ವಾಹನಗಳು ಲಭ್ಯವಿರುವಂತೆ ಮೊದಲೇ ಕಾಯ್ದಿರಿಸುವ ಪ್ರಕ್ರಿಯೆ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಗುರುವಾರ ನಗರದ ಎಲ್ಲ ಶೋರೂಂಗಳಲ್ಲಿ ವಾಹನಗಳ ಡೆಲಿವರಿ ಹೆಚ್ಚಾಗಿತ್ತು. ಶುಕ್ರವಾರ ಆ ಪ್ರಮಾಣದಲ್ಲಿ ಇರಲಿಲ್ಲ. 

ಪೊಲೀಸರಿಂದ ಪೂಜೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲೂ ಗುರುವಾರ ಆಯುಧ ಪೂಜೆ ಸಂಭ್ರಮ ಮನೆ ಮಾಡಿತ್ತು. ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಬಾಳೆ ಗಿಡವನ್ನು ಕಡಿದು, ಪೂಜೆ ನೆರವೇರಿಸಿದರು. ಬಂದೂಕು, ರಿವಾಲ್ವರ್‌ ಸೇರಿದಂತೆ ಇಲಾಖೆಯಲ್ಲಿರುವ ಶಸ್ತ್ರಾಸ್ತ್ರ ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. 

ಗಜೇಂದ್ರನಿಗೆ ವಿಶೇಷ ಅಲಂಕಾರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿರುವ ಸಾಕಾನೆ ಗಜೇಂದ್ರನಿಗೆ ಆಯುಧಪೂಜೆ ಅಂಗವಾಗಿ ಸಿಬ್ಬಂದಿ ವಿಶೇಷ ಅಲಂಕಾರ ಮಾಡಿದ್ದರು. ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಒಟ್ಟಾಗಿ ಗಜೇಂದ್ರ, ಇಲಾಖೆಯ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸಿದರು.

ವಿಶೇಷ ಪೂಜೆ, ಹೋಮ

ವಿಜಯದಶಮಿ ಅಂಗವಾಗಿ ಶುಕ್ರವಾರ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.

ತಾಲ್ಲೂಕಿನ ಹೆಬ್ಬಸೂರಿನಲ್ಲಿರುವ ಶೃಂಗೇರಿ ಮಠ ಸೇರಿದಂತೆ ವಿವಿಧ ಕಡೆಗಳಲ್ಲಿ ಹೋಮ ಹವನಗಳು ನಡೆದವು. ಜನರು ಕೂಡ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು