ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಲಕ್ಷ ಜನರಿಗೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌

ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಒಟ್ಟು ಏಳು ಕೌಂಟರ್‌ಗಳಲ್ಲಿ ವಿತರಣೆ
Last Updated 10 ಜನವರಿ 2019, 13:53 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರ‌ದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಯಾದ ಆಯುಷ್ಮಾನ್‌ ಭಾರತ್‌ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಗಳ ಅಡಿಯಲ್ಲಿ ಜನರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭವಾಗಿದೆ.

ಆರೋಗ್ಯ ಇಲಾಖೆಯು ಜಿಲ್ಲೆಯ 10 ಲಕ್ಷ ಜನರಿಗೆ ಕಾರ್ಡ್‌ ವಿತರಿಸಲಿದೆ. ಯೋಜನೆಯ ಅಡಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಆರೋಗ್ಯ ಕಾರ್ಡ್‌ ಸಿಗಲಿದೆ.

ಕಾರ್ಡ್‌ ವಿತರಣೆಗಾಗಿ ಚಾಮರಾಜನಗರದ ಜಿಲ್ಲಾಸ್ಪ‍ತ್ರೆಯಲ್ಲಿ ನಾಲ್ಕು ಕೌಂಟರ್‌ಗಳನ್ನು ಹಾಗೂ ಕೊಳ್ಳೇಗಾಲ, ಯಳಂದೂರು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳ ಆಸ್ಪತ್ರೆಗಳಲ್ಲಿ ತಲಾ ಒಂದು ಕೌಂಟರ್‌ ತೆರೆಯಲಾಗಿದೆ. ಟೋಕನ್‌ ವ್ಯವಸ್ಥೆಯ ಮೂಲಕ ಕಾರ್ಡ್‌ ವಿತರಿಸಲಾಗುತ್ತಿದೆ.

ದಿನಕ್ಕೆ 100 ಮಂದಿ ನೋಂದಣಿ:

‘ಒಂದು ಕೌಂಟರ್‌ನಲ್ಲಿ ದಿನಕ್ಕೆ 100 ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳಬಹುದು. ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಕೌಂಟರ್‌ಗಳಿದ್ದು, ದಿನಂಪ್ರತಿ 400 ಜನರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಚ್.ಪ್ರಸಾದ್‌ ಅವರು‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಗೆ ಬರುವ ರೋಗಿಗಳಿಗೆ ಮೊದಲು ಈ ಕಾರ್ಡ್‌ ಕೊಡಬೇಕು ಎಂದು ನಮ್ಮ ಯೋಚನೆ ಇತ್ತು. ಈಗ ಜನರು ಕೂಡ ಬರುತ್ತಿದ್ದಾರೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಐದು ನಿಮಿಷಗಳಲ್ಲೇ ಕಾರ್ಡ್‌ ವಿತರಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಯಾರು ಅರ್ಹರು?: ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿ ಹೊಂದಿರುವವರೆಲ್ಲರೂ ಈ ಯೋಜನೆಯ ಅಡಿಯಲ್ಲಿ ಹೆಸರು ನೋಂದಾಯಿಸಲು ಅರ್ಹರು. ನೋಂದಾಯಿಸಿಕೊಳ್ಳಲು ಬರುವವರು ತಮ್ಮ ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಅನ್ನು ಸಲ್ಲಿಸಬೇಕು.

₹5 ಲಕ್ಷ ವೆಚ್ಚದವರೆಗೆ ಚಿಕಿತ್ಸೆ

ಕಾರ್ಡ್‌ ಹೊಂದಿರುವ ಫಲಾನುಭವಿಗಳು ಯೋಜನೆಯ ಅಡಿಯಲ್ಲಿ ವಾರ್ಷಿಕ ₹ 5 ಲಕ್ಷದವರೆಗಿನ ವೆಚ್ಚದ ಚಿಕಿತ್ಸೆಯನ್ನು ಸರ್ಕಾರಿ ಹಾಗೂ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು. ಬಿಪಿಎಲ್‌ ಕಾರ್ಡ್‌ದಾರರಿಗೆ ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗಲಿದೆ. ಎಪಿಎಲ್‌ ಕಾರ್ಡ್‌ದಾರರ ಚಿಕಿತ್ಸಾ ವೆಚ್ಚದಲ್ಲಿ ಸರ್ಕಾರ ಶೇ 30ರಷ್ಟನ್ನು ಭರಿಸಲಿದ್ದು, ಉಳಿದ ಶೇ 70ರಷ್ಟನ್ನು ಕಾರ್ಡ್‌ದಾರರು ಪಾವತಿಸಬೇಕಾಗುತ್ತದೆ.

ಆಯುಷ್ಮಾನ್‌ ಭಾರತ್‌ ಯೋಜನೆಯ ಅಡಿಯಲ್ಲಿ 1,614 ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ. ಖಾಸಗಿ ಆಸ್ಪತ್ರೆ‌ಗಳಲ್ಲಿ ಚಿಕಿತ್ಸೆ ಪಡೆಯಬೇಕಿದ್ದರೆ ಸರ್ಕಾರಿ ವೈದ್ಯರು ಶಿಫಾರಸು ಕಡ್ಡಾಯ. ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಇದರಿಂದ ವಿನಾಯಿತಿ ಇದೆ.

ಕಾರ್ಡ್‌ಗೆ ಹೆಸರು ನೋಂದಾಯಿಸಲು ಜನರು ₹10 ಶುಲ್ಕ ಪಾವತಿಸಬೇಕು.

ಅಂಚೆಯಲ್ಲಿ ಬರುತ್ತಿದೆ ಕಾರ್ಡ್‌

ಈ ಮಧ್ಯೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಫಲಾನುಭವಿಗಳಿಗೆ, ಅಂಚೆ ಮೂಲಕವೇ ಆಯುಷ್ಮಾನ್‌ ಕಾರ್ಡ್‌ ತಲುಪುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT