ಶುಕ್ರವಾರ, ಅಕ್ಟೋಬರ್ 7, 2022
25 °C

ಯಳಂದೂರು | ಪುರಾಣಿ ಪೋಡು: ಮಕ್ಕಳ ಜತೆ ಆಟವಾಡಿದ ಮರಿ ಕಾಡಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಪುರಾಣಿಪೋಡು ವಸತಿ ಶಾಲೆಗೆ ಭಾನುವಾರ ವಿಶೇಷ ಅತಿಥಿ ಬಂದಿತ್ತು.

ತಾಯಿಯಿಂದ ಬೇರ್ಪಟ್ಟ‌ ಗಂಡು ಮರಿಯಾನೆಯೊಂದು ವಸತಿ ಶಾಲೆಗೆ ಬಂದು, ಮಕ್ಕಳೊಂದಿಗೆ‌ ನಲಿದಾಡಿತು.

ಕಾನನದಲ್ಲಿದ್ದರೂ ಗಜ ರಾಜನ ಸಮೀಪದ ದರ್ಶನ ಮಾಡಲಾಗದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಕೋಡಿಗೆ ಬಂದ ಗಜ ರಾಜನ ಮರಿಯನ್ನು ಕಂಡು ಸಂಭ್ರಮಿಸಿದರು. ಮರಿಗೆ ಹಾಲು ನೀಡಿ ಸಂತೈಸಿದರು. ಆಹಾರ ನೀಡಿ ಮುದ್ದಾಡಿದರು. ಪ್ರಾಥಮಿಕ ಶಾಲೆಯ ಚಿಣ್ಣರು, 'ಆನೆ ಬಂತೊಂದಾನೆ, ಯಾವೂರ ಆನೆ' ಎಂದು ಹಾಡಿ ಮರಿಯೊಟ್ಟಿಗೆ ಕುಣಿದು ಕುಪ್ಪಳಿಸಿದರು.

'ತಾಯಿಯಿಂದ ಬೇರ್ಪಟ್ಟ ಮರಿಯಾನೆ ದಿಕ್ಕು ತಪ್ಪಿ ಪುರಾಣಿ ಪೋಡಿನ ಭಾಗಕ್ಕೆ ಬಂದಿದೆ. ದಿಕ್ಕು ಕಾಣದೆ ವಸತಿ ಶಾಲೆಯ ಬಳಿ ಓಡಾಡಿಕೊಂಡಿತ್ತು. ಸ್ಥಳದಲ್ಲೇ ಇದ್ದ ಮಕ್ಕಳು ಮತ್ತು ಗ್ರಾಮಸ್ಥರು ಶಾಲಾ ವಾರ್ಡನ್ ಗೆ ಸುದ್ದಿ ಮುಟ್ಟಿಸಿದರು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಆನೆಯನ್ನು ಮತ್ತೆ ಕಾಡಿಗೆ ಕಳುಹಿಸಲಾಯಿತು' ಎಂದು ಮುಖಂಡ ಬೊಮ್ಮಯ್ಯ ಹೇಳಿದರು.

ಅರಣ್ಯ ಇಲಾಖೆಯ ವೈದ್ಯರು ಮರಿಯಾನೆಯ ಆರೋಗ್ಯ ತಪಾಸಣೆ ಮಾಡಿ ಅರಣ್ಯ ಸಿಬ್ಬಂದಿ ನೆರವಿನೊಂದಿಗೆ ತಾಯಿಯ ಮಡಿಲು ಸೇರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಲಯ ಅರಣ್ಯಾಧಿಕಾರಿ ಲೋಕೇಶ ಮೂರ್ತಿ, 'ಮರಿಯಾನೆ ತಾಯಿಯಿಂದ ಬೇರ್ಪಟ್ಟು ದಾರಿತಪ್ಪಿ ಮರೆಯಾಗಿತ್ತು. ಗಸ್ತು ಪಡೆ ಸಂಚರಿಸುವಾಗ ತಾಯಿ ಆನೆ ಘೀಳಿಡುತ್ತಿರುವುದು ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ತಾಯಿಯು ಮರಿಗೆ ಹುಡುಕಾಟ ನಡೆಸುತ್ತಿರುವುದು ಗೊತ್ತಾಯಿತು. ಇದೇ ಸಂದರ್ಭದಲ್ಲಿ ಆನೆ ಪುರಾಣಿಪೋಡಿನ ವಸತಿ ಶಾಲೆಯ ಬಳಿ ಇರುವುದನ್ನು ಗ್ರಾಮಸ್ಥರು ತಿಳಿಸಿದ್ದರು. ಮರಿ ಆನೆಯನ್ನು ಪುರಾಣಿ ಫೋಡಿನಿಂದ ವಾಹನದಲ್ಲಿ ಕರೆತಂದು ಈರಣ್ಣ ಕಟ್ಟೆ ಪೋಡಿನ ಕಾಡಿನ ಬಳಿ ಬಿಡಲಾಯಿತು. ಮರಿಯಾನೆ ತಾಯಿಯನ್ನು ಸೇರಿದೆ’ ಎಂದರು.

‘ಆನೆಯನ್ನು ಎಂದೂ ಮುಟ್ಟಿರಲಿಲ್ಲ. ಗಜ ರಾಜ ನಮ್ಮೊಡನೆ ಆಟವಾಡಿರಲಿಲ್ಲ. ಕಾಡಿನಲ್ಲಿ ಇದ್ದರೂ ಪ್ರಾಣಿಯ ಮಾತೆಯ ಮಮತೆ ತಿಳಿದಿರಲಿಲ್ಲ. ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಗಜ ರಾಜನ ಜೊತೆ ಆಟವಾಡಿದ್ದು ಸ್ಮರಣೀಯ ಅನುಭವ ನೀಡಿತು' ಎಂದು ಮಕ್ಕಳು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು