ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರರಣೆ: ಬಂಡೀಪುರ, ಬಿಆರ್‌ಟಿಯ ವಸತಿಗೃಹಗಳು ಬಂದ್‌

ಪ್ರಖರ ಬೆಳಕು, ಡಿಜೆ ಪಾರ್ಟಿ ನಡೆಸದಂತೆ ಖಾಸಗಿ ರೆಸಾರ್ಟ್‌, ಹೋಂ ಸ್ಟೇಗಳಿಗೆ ಅರಣ್ಯ ಇಲಾಖೆ ಸೂಚನೆ
Last Updated 24 ಡಿಸೆಂಬರ್ 2020, 13:18 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರವಾಸಿಗರಿಗೆ ತನ್ನ ವಸತಿಗೃಹಗಳನ್ನು ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಹಾಗಾಗಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಡಿಸೆಂಬರ್‌ 31 ಮತ್ತು ಜನವರಿ 1ರಂದು ಇಲಾಖೆಗೆ ಸೇರಿದ ವಸತಿಗೃಹಗಳು, ಕಾಟೇಜ್‌ಗಳು ಪ್ರವಾಸಿಗರಿಗೆ ಲಭ್ಯವಿಲ್ಲ.

ಹೊಸ ವರ್ಷದ ದಿನ ಸಾಮಾನ್ಯವಾಗಿ ಮೋಜು ಮಸ್ತಿ ಹೆಚ್ಚಾಗಿರುತ್ತದೆ. ಇದರಿಂದ ಪ್ರಾಣಿಗಳ ಸಹಜ ಜೀವನಕ್ಕೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಬಂಡೀಪುರದಲ್ಲಿ ಪ್ರತಿ ವರ್ಷ ಡಿ.31ರಂದು ಮಾತ್ರ ವಸತಿಗೃಹಗಳನ್ನು ನೀಡಲಾಗುತ್ತಿರಲಿಲ್ಲ. ಕೋವಿಡ್‌ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಎರಡು ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ.

ಹೊಸ ವರ್ಷಾಚರಣೆ ಎಂದುಕೊಂಡು ಹೆಚ್ಚು ಶಬ್ದ ಮಾಡಬಾರದು, ಲೈಟಿಂಗ್ಸ್ ಬಳಸಬಾರದು, ಡಿಜೆ ಬಳಸುವಂತಿಲ್ಲ ಎಂದು ಕಾಡಂಚಿನ ಪ್ರದೇಶಗಳಲ್ಲಿರುವಖಾಸಗಿ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳಿಗೆ ಇಲಾಖೆಯು ಕಟ್ಟು ನಿಟ್ಟಿನ ಸೂಚನೆ ನೀಡಿದೆ.

‘ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಬಂಡೀಪುರದ ವಸತಿ ಗೃಹಗಳನ್ನು ಕಾಯ್ದಿರಿಸಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಅರಣ್ಯದ ‌ಅಂಚಿನಲ್ಲಿರುವ ಖಾಸಗಿ ರೆಸಾರ್ಟ್‌ಗಳು, ಹೋಂ ಸ್ಟೇಗಳಿಗೂ ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಫಾರಿ ಇದೆ: ವಸತಿ ಗೃಹಗಳನ್ನು ನೀಡದಿದ್ದರೂ, ಬಂಡೀಪುರ ಹಾಗೂ ಬಿಆರ್‌ಟಿಯ ಕೆ.ಗುಡಿಯಲ್ಲಿ ಸಫಾರಿ ಸೌಲಭ್ಯ ಎಂದಿನಂತೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಮ್ಮ ಅತಿಥಿಗೃಹಗಳನ್ನು ನಾವು ಯಾರಿಗೂ ನೀಡುತ್ತಿಲ್ಲ. ಆದರೆ ಕೆ.ಗುಡಿ ಸಫಾರಿ ವ್ಯವಸ್ಥೆ ಲಭ್ಯವಿರುತ್ತದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆ.ಗುಡಿಯಲ್ಲಿ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಸ್ಟ್‌ಗೆ (ಜೆಎಲ್‌ಆರ್‌) ಸೇರಿದ ಕಾಟೇಜ್‌ಗಳಿದ್ದು, ಇವುಗಳು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಅವುಗಳು ಪ್ರವಾಸಿಗರಿಗೆ ಲಭ್ಯವಾಗಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

‘ಜೆಎಲ್‌ಆರ್‌ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದರ ಆಡಳಿತವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು’ ಎಂದು ಸಂತೋಷ್‌ ಕುಮಾರ್‌ ಅವರು ತಿಳಿಸಿದರು.

ಬಂಡೀಪುರದಲ್ಲಿರುವ ಜೆಎಲ್‌ಆರ್‌‌ನ ವಸತಿಗೃಹಗಳು ಅರಣ್ಯ ಪ್ರದೇಶದಿಂದ ಹೊರಗಡೆ ಇದೆ. ಹೀಗಾಗಿ ಹೊಸ ವರ್ಷದ ಸಂದರ್ಭದಲ್ಲಿಯೂ ತೆರೆದಿರಲಿವೆ.

ಮಿಸ್ಟ್ರಿ ಟ್ರೇಲ್‌ ಕ್ಯಾಂಪ್‌ ಮೂರು ದಿನ ಬಂದ್‌:ಹನೂರು ತಾಲ್ಲೂಕಿನ ಗೋಪಿನಾಥಂನಲ್ಲಿ ಕಾವೇರಿ ವನ್ಯಧಾಮದಲ್ಲಿರುವ ಮಿಸ್ಟ್ರಿ ಟ್ರೇಲ್‌ ಕ್ಯಾಂಪ್‌ ಕೂಡ ಹೊಸ ವರ್ಷದ ಸಂದರ್ಭದಲ್ಲಿ ಮೂರು ದಿನಗಳ ಕಾಲ ಬಂದ್‌ ಆಗಲಿದೆ.

ಡಿ.30,31 ಮತ್ತು ಜನವರಿ ಒಂದರಂದು ಪ್ರವಾಸಿಗರಿಗೆ ನೀಡದಿರಲು ಕಾವೇರಿ ವನ್ಯಧಾಮದ ಆಡಳಿತ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT