ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂ ಸ್ಟೇ ನೋಂದಣಿ, ಭೂಪರಿವರ್ತನೆ ಆದೇಶ ರದ್ದು

ಬಂಡೀಪುರ: 10 ದಿನಗಳಲ್ಲಿ ಕಟ್ಟಡ ತೆರವುಗೊಳಿಸಲು ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಸೂಚನೆ
Last Updated 2 ಜೂನ್ 2020, 15:50 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪ‍ಟ್ಟ ಪ್ರದೇಶಗಳಲ್ಲಿ ಮೂರು ಹೋಂ ಸ್ಟೇಗಳಿಗೆ ನೀಡಿದ್ದ ನೋಂದಣಿಯನ್ನು ಹಾಗೂ ಮೂರು ಪ್ರಕರಣಗಳಲ್ಲಿ ಭೂ ಪರಿವರ್ತನೆ ಆದೇಶವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಅಕ್ರಮವೆಂದು ಸಾಬೀತಾಗಿ ಬೀಗ ಮುದ್ರೆ ಹಾಕಿದ್ದ ಹೋಂ ಸ್ಟೇಯನ್ನು (ಹಂಗಳ ಹೋಬಳಿ ಮಂಗಲ ಗ್ರಾಮದ ಸರ್ವೆ ನಂ 56/2) ಮತ್ತೆ ತೆರದು ದುರಸ್ತಿ ಕಾರ್ಯ ನಡೆಸುತ್ತಿದ್ದ ಕಟ್ಟಡವನ್ನು 10 ದಿನಗಳ ಒಳಗಾಗಿ ತೆರವುಗೊಳಿಸುವಂತೆಯೂ ಅವರು ಗುಂಡ್ಲುಪೇಟೆಯ ತಹಶೀಲ್ದಾರ್‌ ನಂಜುಂಡಯ್ಯ ಅವರಿಗೆ ಸೂಚಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಕಣಿಯನಪುರ ಗ್ರಾಮದ ಸರ್ವೆ ನಂ. 56ರಲ್ಲಿ ಹೋಂ ಸ್ಟೇ ನಡೆಸಲು ಕಾರ್ತಿಕ್‌ ದವೆ ಎಂಬುವವರಿಗೆ, ಮಂಗಲ ಗ್ರಾಮದ ಸರ್ವೆ ನಂ. 146ರಲ್ಲಿ ಎನ್.ಕೆ ಕಾರ್ತಿಕ್ ಎಂಬುವವರಿಗೆ ಹಾಗೂ ಅದೇ ಗ್ರಾಮದ ಸರ್ವೆ ನಂಬರ್‌ 517ರಲ್ಲಿ ಹೋಮ್ ಸ್ಟೇ ನಡೆಸಲು ವಿ. ಸೋಮಶೇಖರ್ ಅವರಿಗೆ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡಿತ್ತು.

ಪ‍ರಿಸರ ಸೂಕ್ಷ್ಮ ವಲಯದಲ್ಲಿ ವಸತಿ ಉದ್ದೇಶಕ್ಕೆ ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಕಟ್ಟಡ ನಿರ್ಮಿಸಲು ಅವಕಾಶ ಇಲ್ಲ. ಹೋಂ ಸ್ಟೇ ನಡೆಸುವ ಮೂಲಕಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಸೂಚನೆಯನ್ನು ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಮೂರೂ ಹೋಂ ಸ್ಟೇಗಳಿಗೆ ನೀಡಲಾಗಿರುವ ನೋಂದಣಿ ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಕಟ್ಟಡಗಳನ್ನು10 ದಿನಗಳೊಳಗೆ ತೆರವುಗೊಳಿಸುವಂತೆ ತಹಶಿಲ್ದಾರರಿಗೆ ಅವರಿಗೆ ಸೂಚಿಸಿದ್ದಾರೆ.

ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ 2012ರ ಅಕ್ಟೋಬರ್‌ 4ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಕರಡು ಅಧಿಸೂಚನೆಯನ್ನು 2010ರ ಆಗಸ್ಟ್‌ 31ರಂದು ಹೊರಡಿಸಿತ್ತು.

ಅಧಿಸೂಚನೆ ನಿಯಮ ಉಲ್ಲಂಘನೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಯಲ್ಲಿ ಬರುವ ಹಂಗಳ ಹೋಬಳಿಯ ಲೊಕ್ಕೆರೆ ಗ್ರಾಮ ಹಾಗೂ ಮಂಗಲ ಗ್ರಾಮದ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳಲ್ಲಿ ಭೂ ಪರಿವರ್ತನೆಯಾಗಿದ್ದ ಆದೇಶವನ್ನೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ರದ್ದುಪಡಿಸಿದ್ದಾರೆ.

ಲೊಕ್ಕೆರೆ ಗ್ರಾಮದ ಸರ್ವೇ ನಂ 2/1ರಲ್ಲಿ ಎರಡು ಎಕರೆ 35 ಗುಂಟೆ ಪೈಕಿ 3 ಗುಂಟೆ ಜಮೀನನ್ನು ವಾಸದ ಮನೆ ಉದ್ದೇಶಕ್ಕೆ ಆರ್. ಪ್ರತಾಪ್ ರೆಡ್ಡಿ ಬಿನ್ ಎಸ್.ಎಸ್.ರೆಡ್ಡಿ ಅವರಿಗೆ ದಿನಾಂಕ 2012ರ ಜನವರಿ 3ರಂದು, ಮಂಗಲ ಗ್ರಾಮದ ಸರ್ವೆ ನಂ. 46/1 ರಲ್ಲಿ 3 ಎಕರೆ ಜಮೀನಿನ ಪೈಕಿ ಒಂದು ಗುಂಟೆ ಜಮೀನನ್ನು ವಾಸದ ಮನೆ ಉದ್ದೇಶಕ್ಕೆ ವಿ.ಎ. ನಾಗೇಂದ್ರ ಬಿನ್ ವಿ.ಎನ್. ಅನಂತರಾಮನ್ ಅವರಿಗೆ ದಿನಾಂಕ 2010ರ ಡಿಸೆಂಬರ್‌ 27ರಂದು ಮತ್ತು ಗ್ರಾಮದ ಸರ್ವೇ ನಂ 97/1 ಮತ್ತು 97/2ರಲ್ಲಿ 3 ಗುಂಟೆ ಜಮೀನನ್ನು ಗೆಸ್ಟ್‌ಹೌಸ್ ಉದ್ದೇಶಕ್ಕೆ ಸಾದ್‌ಬಿನ್‌ಜಂಗ್ ಬಿನ್ ಬಷೀರ್‌ಜಂಗ್ ಅವರಿಗೆ ದಿನಾಂಕ 2010ರ ಡಿಸೆಂಬರ್‌ 27ರಂದು ಭೂ ಪರಿವರ್ತನೆ ಮಾಡಿ ಆದೇಶ ಹೊರಡಿಸಲಾಗಿತ್ತು.

‘ಕೇಂದ್ರ ಸರ್ಕಾರವು ಕರಡು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಸತಿ ಉದ್ದೇಶಕ್ಕೆ ಬಿಟ್ಟು ವಾಣಜ್ಯ ಚಟುವಟಿಕೆಗಳಿಗೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಆ ನಂತರ ಭೂಪರಿವರ್ತನೆ ಮಾಡುವುದಕ್ಕೂ ಅವಕಾಶ ಇಲ್ಲ. ಬಂಡೀಪುರದಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಹಾಗಾಗಿ ಕ್ರಮ ಅನಿವಾರ್ಯ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

––

ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ. ಅಕ್ರಮ ಕಟ್ಟಡಗಳ ತೆರವಿಗೆ ಸೂಚಿಸಲಾಗಿದೆ
ಡಾ.ಎಂ.ಆರ್‌.ರವಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT