ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ| ಕಿಡಿಗೇಡಿಗಳ ಮೇಲೆ ಡ್ರೋನ್‌, ಕ್ಯಾಮೆರಾ ನಿಗಾ

ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ, ತಾತ್ಕಾಲಿಕ 800 ವಾಚರ್‌ಗಳ ನೇಮಕ
Last Updated 24 ಡಿಸೆಂಬರ್ 2019, 16:23 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ವರ್ಷದ ಬೇಸಿಗೆಯಲ್ಲಿ ಸಂಭವಿಸಿದ ಕಾಳ್ಗಿಚ್ಚಿನಿಂದಾಗಿ ಟೀಕೆಗೆ ಗುರಿಯಾಗಿದ್ದ ಅರಣ್ಯ ಇಲಾಖೆ ಈ ಬಾರಿ, ಕಾಡಿಗೆ ಬೆಂಕಿ ಬೀಳುವುದನ್ನು ತಡೆಯುವುದಕ್ಕಾಗಿ ಈಗಾಗಲೇ ಹಲವು ಸಿದ್ಧತೆಗಳನ್ನು ಕೈಗೊಂಡಿದೆ.

ಬೆಂಕಿ ಹಚ್ಚುವ ಕಿಡಿಗೇಡಿಗಳ ಮೇಲೆ ನಿಗಾ ಇಡುವುದಾಗಿ ಆಧುನಿಕ ತಂತ್ರಜ್ಞಾನವನ್ನು ಮೊರೆ ಹೋಗಲು ಅಧಿಕಾರಿಗಳು ನಿರ್ಧರಿಸಿದ್ದು, ಇದಕ್ಕಾಗಿ ಡ್ರೋನ್‌ ಕ್ಯಾಮೆರಾಗಳು ಹಾಗೂ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಲಿದೆ.

ಕಳೆದ ವರ್ಷ ಬೆಂಕಿ ಬಿದ್ದಿದ್ದ ಕುಂದುಕೆರೆ, ಮದ್ದೂರು, ಗೋಪಾಲಸ್ವಾಮಿ ಬೆಟ್ಟ ಹಾಗೂ ಓಂಕಾರ ವಲಯಗಳ ಕಾಡಂಚಿನಲ್ಲಿ ನಾಲ್ಕು ಡ್ರೋನ್‌ ಕ್ಯಾಮೆರಾಗಳು ನಿಗಾ ಇಡಲಿವೆ. ಇವುಗಳ ಬಳಕೆಗಾಗಿ ಈಗಾಗಲೇ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದರ ಜೊತೆಗೆ ಅರಣ್ಯದ ವಿವಿಧ ಕಡೆಗಳಲ್ಲಿ ಒಟ್ಟು 700 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲು ಅಧಿಕಾರಿಗಳು ಯೋಚಿಸುತ್ತಿದ್ದಾರೆ.

‘ಕಾಡಿನೊಳಕ್ಕೆ ಅಕ್ರಮವಾಗಿ ನುಸುಳುವವರು ಹಾಗೂ ಹೊಗೆಯ ಆಧಾರದಲ್ಲಿ ಎಲ್ಲಿ ಬೆಂಕಿ ಬಿದ್ದಿದೆ ಎಂಬುದನ್ನು ಪತ್ತೆ ಹಚ್ಚಲು ಡ್ರೋನ್‌ಗಳನ್ನು ಬಳಸಲಾಗುವುದು. ಬಿರು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಇವುಗಳ ಕಾರ್ಯಾಚರಣೆ ಆರಂಭಿಸುತ್ತೇವೆ. ಅರಣ್ಯದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲೂ ಇವುಗಳಿಂದ ಅನುಕೂಲವಾಗಲಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

800 ವಾಚರ್‌ಗಳ ನೇಮಕ: ಈ ಮಧ್ಯೆ, ಕಾಳ್ಗಿಚ್ಚಿನ ಮೇಲೆ ನಿಗಾ ಇಡುವುದಕ್ಕಾಗಿ ತಾತ್ಕಾಲಿಕವಾಗಿ ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ವೀಕ್ಷಕರನ್ನು ನೇಮಿಸಲು (ವಾಚರ್‌)‍ಇಲಾಖೆ ನಿರ್ಧರಿಸಿದೆ. ಈಗಾಗಲೇ ಕೆಲವು ವಲಯಗಳಲ್ಲಿ ನೇಮಕ ಪ್ರಕ್ರಿಯೆ ಆರಂಭವಾಗಿದೆ.

‘13 ವಲಯಗಳಲ್ಲಿ ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ವಾಚರ್‌ಗಳನ್ನು ನೇಮಕಮಾಡಿಕೊಳ್ಳಲಾಗುವುದು. ಒಟ್ಟಾರೆ 800 ಮಂದಿಗೆ ಉದ್ಯೋಗ ನೀಡಲಿದ್ದೇವೆ. ಎರಡು ಪಾಳಿಗಳಲ್ಲಿ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದು ಬಾಲಚಂದ್ರ ಅವರು ಮಾಹಿತಿ ನೀಡಿದರು.

ಹುಲಿಗಳ ಮಾಹಿತಿ ಸಂಗ್ರಹ ಪ್ರಗತಿಯಲ್ಲಿ

ಈ ಮಧ್ಯೆ, ಬಂಡೀಪುರದಲ್ಲಿರುವ ಹುಲಿಗಳ ಸಂಖ್ಯೆಯನ್ನು ಲೆಕ್ಕ ಹಾಕುವ ಪ್ರಕ್ರಿಯೆ ಇಲಾಖಾ ಮಟ್ಟದಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಐದು ವಲಯಗಳಲ್ಲಿ ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ತಿಂಗಳ ಅಂತ್ಯದವರೆಗೆ ನಡೆಯಲಿದೆ.

ಹುಲಿಗಳ ಗಣತಿಗಾಗಿ ಕುಂದುಕೆರೆ, ಗೋಪಾಲಸ್ವಾಮಿ ಬೆಟ್ಟ, ಮೂಲೆಹೊಳೆ, ಮದ್ದೂರು ಮತ್ತು ಬಂಡೀಪುರ ವಲಯಗಳ ಎರಡು ಚದರ ಕಿ.ಮೀ ವ್ಯಾಪ್ತಿಯಲ್ಲಿ 750 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿ, ವ್ಯಾಘ್ರಗಳ ಚಲನವನಲಗಳನ್ನು ಗುರುತಿಸಲಾಗುತ್ತಿದೆ.

‘13 ವಲಯಗಳಲ್ಲೂ ಒಂದೇ ಸಲಕ್ಕೆ ಈ ಪ್ರಕ್ರಿಯೆ ನಡೆಸಲು 1,500 ಕ್ಯಾಮೆರಾಗಳು ಬೇಕು. ಈ ಐದು ವಲಯಗಳಲ್ಲಿ ಮಾಹಿತಿ ಕಲೆ ಹಾಕಿದ ನಂತರ ಉಳಿದ ವಲಯಗಳಿಗೆ ಈ ಪ್ರಕ್ರಿಯೆಯನ್ನು ವಿಸ್ತರಿಸಲಾಗುವುದು. ಈಗ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಚಿತ್ರಗಳನ್ನು ಆಧರಿಸಿ ದತ್ತಾಂಶವನ್ನು ಸಂಗ್ರಹಿಸಿಡುವ ಕೆಲಸ ನಡೆಯುತ್ತಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನು 15 ದಿನಗಳ ಒಳಗೆ ತೆಗೆದುಕೊಳ್ಳುತ್ತೇವೆ
ಟಿ.ಬಾಲಚಂದ್ರ, ಹುಲಿಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT