ಗುರುವಾರ , ಆಗಸ್ಟ್ 6, 2020
28 °C
ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ

ಹಾಗಲಕಾಯಿ ಮೊರೆ ಹೋದ ರೈತರು

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಆನೆ, ಕಾಡು ಹಂದಿ, ಜಿಂಕೆಗಳು ಸೇರಿದಂತೆ ವಿವಿಧ ವನ್ಯಪ್ರಾಣಿಗಳ ಹಾವಳಿಯಿಂದ ಹೈರಾಣರಾಗಿರುವ ರೈತರು, ಈಗ ಹಾಗಲಕಾಯಿಯ ಮೊರೆ ಹೋಗುತ್ತಿದ್ದಾರೆ. 

ಹಾಗಲಕಾಯಿ ಕಹಿ ಇರುವುದರಿಂದ ಪ್ರಾಣಿಗಳು ತಿನ್ನುತ್ತಿಲ್ಲ. ಈ ಬೆಳೆಯನ್ನು ಪ್ರಾಣಿಗಳಿಂದ ಸುಲಭವಾಗಿ ರಕ್ಷಿಸಿ ಲಾಭದಾಯಕ ಕೃಷಿ ಮಾಡಬಹುದು ಎಂದುಕೊಂಡು ರೈತರು ಹಾಗಲಕಾಯಿಯನ್ನು ಹೆಚ್ಚು ಬೆಳೆಯಲು ಆರಂಭಿಸಿದ್ದಾರೆ. 

ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ಎಲ್ಚೆಟ್ಟಿ, ಮಂಗಲ, ಜಕ್ಕಹಳ್ಳಿ, ಮೇಲುಕಾಮನಹಳ್ಳಿ, ಮದ್ದೂರು, ಮದ್ದಯ್ಯನಹುಂಡಿ, ಉಪಕಾರ ಕಾಲೋನಿ, ಗೋಪಾಲಸ್ವಾಮಿ ಬೆಟ್ಟ ಭಾಗದ ಹಗ್ಗದಹಳ್ಳ, ಬೇರಾಂಬಾಡಿ, ಹೊಸಹಳ್ಳಿ ಕಾಲೋನಿಗಳಲ್ಲಿ ಹಾಗಲಕಾಯಿಯನ್ನು ಹೆಚ್ಚು ಬೆಳೆಯುತ್ತಿದ್ದಾರೆ.

ತರಕಾರಿ ಮಾರುಕಟ್ಟೆಯಲ್ಲಿ ಹಾಗಲಕಾಯಿಗೂ ಹೆಚ್ಚಿನ ಬೇಡಿಕೆ ಇರುವುದರಿಂದ ದಲ್ಲಾಳಿಗಳು, ಹಾಗಲಕಾಯಿ ಬೆಳೆದ ರೈತರನ್ನು ಹುಡುಕಿಕೊಂಡು ಹೋಗಿ ಖರೀದಿ ಮಾಡುತ್ತಿದ್ದಾರೆ. 

ಕೆಲವು ರೈತರು ವರ್ಷದಲ್ಲಿ ಒಂದು ಬಾರಿ ಮಾತ್ರ ಹಾಗಲಕಾಯಿಯನ್ನು ಬೆಳೆದು ಸುಮ್ಮನಾಗುತ್ತಾರೆ. ಬೇರೆ ಬೆಳೆಗಳನ್ನು ಬೆಳೆಯುವುದಕ್ಕೆ ಮುಂದಾಗುತ್ತಿಲ್ಲ. ಎರಡು ಮೂರು ವರ್ಷಗಳಿಂದ ಒಂದು ಬೆಳೆ ಬೆಳೆಯುವ ಸಂಪ್ರದಾಯ ಹೆಚ್ಚುತ್ತಿದೆ. 

‘ಹಾಗಲಕಾಯಿಗೆ ಬೇಡಿಕೆ ಇದೆ. ಖಂಡಿತ ಉತ್ತಮ ಬೆಲೆ ಸಿಗುತ್ತದೆ. ನಷ್ಟ ಉಂಟಾಗುವುದಿಲ್ಲ. ಮೂರು ತಿಂಗಳಿಗೆ ಕಾಯಿ ಬಿಡಲು ಶುರುವಾದರೆ ಆರು ತಿಂಗಳವರೆಗೆ ಕೊಯ್ಯಬಹುದು, ಮಾರುಕಟ್ಟೆಗಾಗಿ ಅಲೆಯಬೇಕಿಲ್ಲ, ಬೆಳೆದ ಜಾಗಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ’ ಎಂದು ಮೇಲುಕಾಮನಹಳ್ಳಿ ಗ್ರಾಮದ ಚಿಕ್ಕಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಬೆಳೆಯನ್ನು ಮೊದಲ ಸಲ ಬೆಳೆಯಲು ಮಾತ್ರ ಹೆಚ್ಚಿನ ಖರ್ಚು ಬೀಳುತ್ತದೆ. ಎರಡನೇ ಸಲಕ್ಕೆ ಮೊದಲು ಬಳಸಿದ್ದ ಮರ, ಹಗ್ಗಗಳನ್ನೇ ಬಳಸಬಹುದು. ಆರು ತಿಂಗಳು ಕಷ್ಟಪಟ್ಟು ದುಡಿದರೆ ಉತ್ತಮ ಸಂಪಾದನೆ ಆಗುತ್ತದೆ’ ಎಂದು ಅವರು ಹೇಳಿದರು. 

‘ಈ ಬೆಳೆಗೆ ಮರದ ಕಂಬಗಳ ಅವಶ್ಯಕತೆ ಇದೆ. ಒಮ್ಮೆ ಮರ ಖರೀದಿಸಿದರೆ ಮೂರು ವರ್ಷಕ್ಕೆ ಬಳಕೆ ಮಾಡಬಹುದು.  ಪ್ರಾಣಿಗಳ ಹಾವಳಿಯೂ ಇಲ್ಲ. ಸಕಾಲದಲ್ಲಿ ಔಷಧ ಮತ್ತು ಗೊಬ್ಬರ ನೀಡಿ ಆರೈಕೆ ಮಾಡಿದರೆ ಉತ್ತಮ ಇಳುವರಿ ಸಿಗುತ್ತದೆ‌’ ಎಂದು ಯುವ ರೈತ ಸುನೀಲ್ ತಿಳಿಸಿದರು.

ಪ್ರಾಣಿಗಳ ಹಾವಳಿ ಕುಂಠಿತ

‘ಕಾಡಂಚಿನಲ್ಲಿ ಭೂಮಿ ಇರುವುದರಿಂದ ಪ್ರತಿ ಬಾರಿ ಬೆಳೆದಿದ್ದ ಬೆಳೆ ಪ್ರಾಣಿಗಳಿಗೆ ಆಹಾರವಾಗುತ್ತಿತ್ತು. ಆದ್ದರಿಂದ ಕೃಷಿ ನಿಲ್ಲಿಸಿ ಕೂಲಿ ಮಾಡುತ್ತಿದ್ದೆ. ಎರಡು ವರ್ಷದ ನಂತರ ಹಾಗಲಕಾಯಿಯನ್ನು ಬೆಳೆಯ ತೊಡಗಿದಾಗ ಪ್ರಾಣಿಗಳು ಹಾವಳಿ ಕಡಿಮೆಯಾಯಿತು. ಹಂದಿಗಳನ್ನು ಬಾರದಿದ್ದ ಹಾಗೇ ತಂತಿ ಬೇಲಿ ಅಳವಡಿಸಿ, ನಿಯಂತ್ರಣ ಮಾಡಬೇಕು. ಹಾಗಲಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಉತ್ತಮ ಬೆಲೆಯೂ ಸಿಗುತ್ತದೆ’ ಎಂದು ಮಂಗಲ ಗ್ರಾಮ ಮಹೇಶ್ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು