ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡೋತ್ಸವದಲ್ಲಿ ಭಕ್ತ ಸಾಗರ

ಕೆಸ್ತೂರು: 70 ದಿನಗಳ ಗ್ರಾಮ ದೇವತೆ ಹಬ್ಬ ಸಂಪನ್ನ
Published 17 ಏಪ್ರಿಲ್ 2024, 14:38 IST
Last Updated 17 ಏಪ್ರಿಲ್ 2024, 14:38 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಕೆಸ್ತೂರು ಮಾರಮ್ಮ ಕೊಂಡೋತ್ಸವ ಮಂಗಳವಾರ ತಡರಾತ್ರಿ ಅಪಾರ ಭಕ್ತರ ಸಡಗರ ಸಂಭ್ರಮಗಳ ನಡುವೆ ಜರುಗಿತು.

ಚೈತ್ರ ಶುದ್ಧ ಅಷ್ಟಮಿಯಂದು ಮುಂಜಾನೆ ಊರ ಮಾರಿಗೆ ನೈವೇದ್ಯ ಸಲ್ಲಿಸಿ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು. ದೇಗುಲದ ಬಳಿ ಕೊಂಡಕ್ಕೆ ಸಂಜೆಯೇ ಅಗ್ನಿ ಸ್ಪರ್ಶ ನೆರವೇರಿತು. ನಿಗಿನಿಗಿ ಕೆಂಡ ಕಾಣುತ್ತಲೇ ಆಗಮಿಕರು ಹಣ್ಣು ಕಾಯಿ ಪೂಜೆ ಮಾಡಿದರು. ಸತ್ತಿಗೆ ಸೂರಿಪಾನಿ ಹೊತ್ತ ಯುವಕರು ದೇವಿಯ ಉದ್ಘೋಷ ಮೊಳಗಿಸುತ್ತಲೇ ಭಕ್ತರಲ್ಲಿ ದೇವರ ಆವಾಹನೆ ಆಯಿತು. ಮಂಗಳವಾದ್ಯದ ಸದ್ದು ಮೊಳಗುತ್ತಲೇ ಹತ್ತಾರು ದೈವಗಳು ಕೊಂಡದ ಸ್ಥಳಕ್ಕೆ ನಾಗಲೋಟದಲ್ಲಿ ಬಂದು ಕೊಂಡ ಸ್ಪರ್ಶ ಮಾಡಿದವು.

ಸಾವಿರಾರು ಸ್ತ್ರೀಯರು ಮತ್ತು ಮಕ್ಕಳು ಕೊಂಡೋತ್ಸವ ನೋಡಲು ಕಾತರದಿಂದ ಕಾಯ್ದಿದ್ದರು. ಕೆಲವರು ಮನೆ, ಮಂಟಪ ಏರಿ ಕೊಂಡೋತ್ಸವದ ದರ್ಶನ ಪಡೆದರು. ಯುವಕರು ದೇವರ ಸತ್ತಿಗೆ ಹೊತ್ತು ಕೊಂಡದ ಸುತ್ತ ಪ್ರದಕ್ಷಿಣೆ ಹಾಕಿ ಗ್ರಾಮದ ಉತ್ಸವಗಳನ್ನು ಸಂಪನ್ನಗೊಳಿಸಿದರು. ಈ ವೇಳೆ ನೆರದ ಮಂದಿ ಧೂಪ ತೂರಿ, ಕರ್ಪೂರ ಬೆಳಗಿ ಧನ್ಯತೆ ಮೆರೆದರು. ಹರಕೆ ಹೊತ್ತವರು ಹೂ ಮಾಲೆ ಹಾಕಿ ದೇವರನ್ನು ಸಂಪ್ರೀತಗೊಳಿಸಿದರು.

ಪ್ರತಿ 5 ವರ್ಷಗಳಿಗೆ ಒಮ್ಮೆ 70 ದಿನಗಳ ಕಾಲ ಜನಪದ ಜಾತ್ರೆ, ಆಚರಣೆ, ಸಂಪ್ರದಾಯ ಪೂಜೆಗಳು ನಡೆಯುತ್ತದೆ. ರಾತ್ರಿ ಸಮಯದಲ್ಲಿ ಮಾತ್ರ ಕೊಂಡ ಹಾಯುವ ಪರಂಪರೆ ಇಲ್ಲಿದೆ. ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಬಂದು ಅರ್ಚನೆ ನೆರವೇರಿಸಿ ಮಾರಮ್ಮನ ದರ್ಶನ ಪಡೆದರು. ಸಾಂಸ್ಕೃತಿಕ ವೈವಿಧ್ಯತೆಗಳನ್ನು ಕಣ್ತುಂಬಿಕೊಂಡರು. ಕೊಂಡೋತ್ಸವ ಹಬ್ಬಗಳ ಆಚರಣೆಗೆ ತೆರೆ ಎಳೆಯಿತು ಎಂದು ಗ್ರಾಮಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT