ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪಕ್ಷ ತಿರಸ್ಕರಿಸಿ: ಪರಿಶಿಷ್ಟರಿಗೆ ಸಿಮೆಂಟ್ ಮಂಜು ಕರೆ

ಬಿಜೆಪಿ ಎಸ್‌ಸಿ ಮೋರ್ಚಾದಿಂದ ಭೀಮ ಸಮಾವೇಶ, ಒಗ್ಗಟ್ಟು ಪ್ರದರ್ಶಿಸಿದ ದಲಿತ ಮುಖಂಡರು
Published 30 ಜನವರಿ 2024, 4:30 IST
Last Updated 30 ಜನವರಿ 2024, 4:30 IST
ಅಕ್ಷರ ಗಾತ್ರ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕಿರುವರೆಗೂ ಕಾಂಗ್ರೆಸ್‌ ಪಕ್ಷ ಅವರನ್ನು ಶೋಷಣೆ ಮಾಡಿತ್ತು. ಅವರು ನಿಧನರಾದ ಬಳಿಕವೂ ಶವ ಸಂಸ್ಕಾರಕ್ಕೆ ಜಾಗ ನೀಡde ಅಪಮಾನ ಮಾಡಿತ್ತು. ಅಂತಹ ಪಕ್ಷವನ್ನು ದಲಿತರು ತಿರಸ್ಕರಿಸುವ ಮೂಲಕ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಅಧ್ಯಕ್ಷ ಸಿಮೆಂಟ್ ಮಂಜು ಸೋಮವಾರ ಹೇಳಿದರು. 

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ  ಜಿಲ್ಲಾ ಎಸ್‌ಸಿ ಮೋರ್ಚಾದಿಂದ ನಡೆದ ‘ಬಲವರ್ಧನೆಗಾಗಿ ಭೀಮ ಸಮಾವೇಶ’ದಲ್ಲಿ  ಅವರು ಮಾತನಾಡಿದರು. 

‘ಪ್ರಧಾನಿ ನರೇಂದ್ರ ಮೋದಿ 10 ವರ್ಷಗಳ ಅವಧಿಯಲ್ಲಿ ದಲಿತ ಸಮುದಾಯದವರು ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅಂಬೇಡ್ಕರ್ ಅವರ  ಹುಟ್ಟಿದ ಊರು, ವ್ಯಾಸಂಗ ಮಾಡಿದ ಸ್ಥಳ, ಐಕ್ಯ ಮನೆ  ಹಾಗೂ ಅವರ ಸಮಾಧಿಯನ್ನು ಅಭಿವೃದ್ದಿ ಪಡಿಸುವ ಮೂಲಕ ತೀರ್ಥ ಸ್ಥಳವನ್ನಾಗಿ ಮಾಡಿ, ವಿಶ್ವ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ’ ಎಂದರು. 

ಕಾಂಗ್ರೆಸ್ ಉರಿಯುವ ಮನೆ. ನನ್ನ ಜನ ಅಲ್ಲಿಗೆ ಹೋದರೆ ಸುಟ್ಟು ಹೋಗುತ್ತೀರಿ ಎಂದು ಅಂಬೇಡ್ಕರ್‌ ಹೇಳಿದ್ದರು.  ಸಮುದಾಯದವರು ಈ ಪಕ್ಷವನ್ನೇ ಮತ ಹಾಕಿ ಗೆಲ್ಲಿಸುವ ಮೂಲಕ ಅಂಬೇಡ್ಕರ್‌ ಆಶಯಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಹೆಚ್ಚು ಮತಗಳನ್ನು ಹಾಕಿದ ಪರಿಣಾಮ ಕಾಂಗ್ರೆಸ್‌ 135 ಸ್ಥಾನ ಗಳಿಸಲು ಸಾಧ್ಯವಾಗಿದೆ’ ಎಂದರು. 

ದಲಿತ ವಿರೋಧಿ: ರಾಜ್ಯದ ಕಾಂಗ್ರೆಸ್‌ ಸರ್ಕಾರ ದಲಿತ ವಿರೋಧಿಯಾಗಿದೆ. ಗ್ಯಾರಂಟಿ ಯೋಜನೆ ನೆಪದಲ್ಲಿ ಪರಿಶಿಷ್ಟರ 11 ಸಾವಿರ ಕೋಟಿ ಅನುದಾನವನ್ನು ಬಳಸಿಕೊಂಡು ದಲಿತ ಮಕ್ಕಳು, ನಿರುದ್ಯೋಗಿ ಯುವಕರಿಗೆ ಅನ್ಯಾಯ ಮಾಡಿದೆ.  ರಾಜ್ಯದಾದ್ಯಂತ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ  ಭೀಮ ಸಮಾವೇಶ ಆಯೋಜಿಸುವ ಮೂಲಕಜಾಗೃತಿ ಮೂಡಿಸಲಾಗುತ್ತದೆ’ ಎಂದು ಮಂಜು ಹೇಳಿದರು.

ಮಾಜಿ ಶಾಸಕ ಎಸ್.ಬಾಲರಾಜ್‌ ಮಾತನಾಡಿ, ‘ಪ್ರಧಾನಿ ಮೋದಿಯವರು 10 ವರ್ಷಗಳಲ್ಲಿ ದೇಶದ ಅಭಿವೃದ್ದಿ ಹಾಗೂದೀನ ದಲಿತರ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಮಾಡಿ, ಸಾವಿರಾರು ಕೋಟಿ ಅನುದಾನ ನೀಡೊದ್ದಾರೆ. 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿರುವ ಕೆಲಸದ 10 ಪಟ್ಟು ಕೆಲಸವನ್ನು 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದೆ’ ಎಂದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ನಿರಂಜನ ಕುಮಾರ್  ಮಾತನಾಡಿದರು. 

ಕಾಂಪೊಸ್ಟ್ ನಿಗಮದ ಮಾಜಿ ಅಧ್ಯಕ್ಷ  ಎಸ್.ಮಹದೇವಯ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ರಾಜ್ಯಕಾರ್ಯದರ್ಶಿ ಪರಮಾನಂದ, ಮುಖಂಡರಾದ ರಾಜು, ವೆಂಕಟರಮಣಸ್ವಾಮಿ(ಪಾಪು), ಹನೂರು ವೆಂಕಟೇಶ್,    ಶಿವರಾಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್. ಬಾಲರಾಜು,  ಜಿಲ್ಲಾ ಬಿಜೆಪಿ ಎಸ್‌ ಮೋರ್ಚಾ ಅಧ್ಯಕ್ಷ  ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆರೆಹಳ್ಳಿ ಮಹದೇವಸ್ವಾಮಿ,  ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ನಲ್ಲೂರು ಪರಮೇಶ,  ಬಂಗಾರು,  ಕಾಳಿಚರಣ್, ಸಿದ್ದರಾಜು, ಛಲವಾದಿ ಮಹಾಸಭಾದ  ಹಂಸರಾಜು, ಭಾನುಪ್ರಕಾಶ್,  ಇತರರು ಇದ್ದರು. 

‘ದಲಿತರನ್ನು ತುಳಿಯುವ ಸಿದ್ದರಾಮಯ್ಯ’

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರು ‘ಕಾಂಗ್ರೆಸ್ ಪಕ್ಷವು ಬಲಗೈ ಸಮುದಾಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮೋಸ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ  ದಲಿತ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ ಅವರನ್ನು ತುಳಿದು  ಮುಖ್ಯಮಂತ್ರಿಯಾಗಿ ಈಗ ‘ನಾನು ಕೂಡ ದಲಿತ’ ಎಂದು ಹೇಳುತ್ತಿದ್ದಾರೆ’ ಎಂದು ದೂರಿದರು.  ‘ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಶೋಷಿತ ಮಹಿಳೆಯಾಗಿರುವ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರನ್ನು ಏಕ ವಚನದಲ್ಲಿ ಸಂಭೋದಿಸುವ ಮೂಲಕ ತಮ್ಮ ಸಂಸ್ಕೃತಿ ಏನು ಎಂಬುದನ್ನು ತೋರಿಸಿದ್ದಾರೆ.  ದಲಿತರಿಂದ ಮತ ಪಡೆದು ಮುಖ್ಯಮಂತ್ರಿಯಾಗಿರುವ  ಸಿದ್ದರಾಮಯ್ಯ  ಆ ವರ್ಗದ ನಾಯಕರನ್ನು ತುಳಿಯುತ್ತಿದ್ದಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT