ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ದಯಾನಿಧಿ ಉಚ್ಚಾಟನೆ; ಮೋಂಬತ್ತಿ ಮೆರವಣಿಗೆ

ಬಿಜೆಪಿ ಜಿಲ್ಲಾ ಘಟಕದ ವಿರುದ್ಧ ಕಾರ್ಯಕರ್ತರ ಆಕ್ರೋಶ, ಸರ್ವಾಧಿಕಾರಿ ಧೋರಣೆ–ಆರೋಪ
Last Updated 6 ಜುಲೈ 2022, 16:08 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಎನ್‌.ದಯಾನಿಧಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿರುವ ಜಿಲ್ಲಾ ಬಿಜೆಪಿ ಘಟಕದ ನಡೆಯನ್ನುಖಂಡಿಸಿ ಪಕ್ಷದ ಕಾರ್ಯಕರ್ತರು ಹಾಗೂ ದಯಾನಿಧಿ ಅವರ ಬೆಂಬಲಿಗರು ಬುಧವಾರ ರಾತ್ರಿ ನಗರದಲ್ಲಿ ಮೋಂಬತ್ತಿ ಮೆರವಣಿಗೆ ನಡೆಸಿದರು.

ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಆವರಣದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು, ಅಲ್ಲಿಂದ ತ್ಯಾಗರಾಜ ರಸ್ತೆ, ನಗರಸಭೆ ಕಚೇರಿ ವೃತ್ತ, ಅಗ್ರಹಾರ ಬೀದಿ, ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ವಾಪಸ್‌ ಉದ್ಯಾನದ ಆವರಣಕ್ಕೆ ಬಂದರು.

‘ಜಿಲ್ಲಾ ಬಿಜೆಪಿ ಕಮಿಟಿ ಹಟಾವೋ, ಬಿಜೆಪಿ ಬಚಾವೋ’ ಎಂಬ ಬ್ಯಾನರ್‌ ಹಿಡಿದಿದ್ದ ಪ‍್ರತಿಭಟನಕಾರರು, ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಚಿಕ್ಕಕೂಸಪ್ಪ ಮಾತನಾಡಿ, ‘ಜಿಲ್ಲಾ ಬಿಜೆಪಿ ಘಟಕವು ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದೆ. ಪ್ರಾಮಾಣಿಕ ಕಾರ್ಯಕರ್ತರಿಗೆ ಉಳಿಗಾಲವಿಲ್ಲ. ಜಿಲ್ಲಾ ಸಮಿತಿಯು ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತಿದೆ. ಇದೇ ಸಮಿತಿ ಮುಂದುವರಿದರೆ ಜಿಲ್ಲೆಯಲ್ಲಿ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಬಳಗ ಎಂದು ತಾರತಮ್ಯ ಮಾಡುವುದರ ಜೊತೆಗೆ, ಅವರ ಬೆಂಬಲಿಗರನ್ನೇ ಪಕ್ಷದಿಂದ ಉಚ್ಚಾಟನೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ದಯಾನಿಧಿ ಅವರ ಉಚ್ಚಾಟನೆಯೇ ಸಾಕ್ಷಿ’ ಎಂದು ದೂರಿದರು. ಗಿರೀಶ್ ಪುಣಜನೂರು ಮಾತನಾಡಿ, ‘ನಿಷ್ಠಾವಂತ ಕಾರ್ಯಕರ್ತರು ಜಿಲ್ಲಾ ಸಮಿತಿಯ ವಿರುದ್ಧ ಇದ್ದಾರೆ. ಮುಖಂಡರ ಬಗ್ಗೆ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದೆ. ಇದೇ ಕಾರಣಕ್ಕೆ ಚುನಾವಣೆಗಳಲ್ಲಿ ಹಿನ್ನಡೆಯಾಗುತ್ತಿದೆ. ಚಾಮುಲ್‌ನಲ್ಲಿ ಅಧ್ಯಕ್ಷ ಅಭ್ಯರ್ಥಿ ಆಯ್ಕೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ದಯಾನಿಧಿ ಅವರನ್ನು ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಉಚ್ಚಾಟನೆ ಮಾಡಿದ್ದಾರೆ. ಅದು ಕೂಡ ಪತ್ರಿಕಾ ಪ್ರಕಟಣೆಯ ಮೂಲಕ ಆದೇಶಿಸಿದ್ದಾರೆ. ನಮ್ಮದು ಶಿಸ್ತಿನ ಪಕ್ಷ. ಜಿಲ್ಲಾ ಘಟಕದ ಅಧ್ಯಕ್ಷರು ದಯಾನಿಧಿ ಅವರನ್ನು ಕರೆದು ಮಾತನಾಡಬಹುದಿತ್ತು. ಒಳ್ಳೆಯ ಸಂಘಟನೆ ಇರುವುದನ್ನು ಹಾಳು ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್‌ ಗೆಲುವಿಗೆ ಸಹಾಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಈಗಿನ ಜಿಲ್ಲಾ ಘಟಕವನ್ನು ವಿಸರ್ಜಿಸಿ, ಹೊಸ ಪದಾಧಿಕಾರಿಗಳನ್ನು ನೇಮಿಸಬೇಕು ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ಕಾರ್ಯಕರ್ತರಾದ ರಮೇಶ್ ಬಾಬು, ಸುಪ್ರೀತ್ ವೀರನಪುರ, ಚೆಲುವರಾಜ್, ಶಶಿ, ಪ್ರಜ್ವಲ್ ನಾಯಕ, ಪ್ರವೀಣ್, , ಮಹೇಶ್, ಮಾಧುಮಂಗಲ, ದೇವರಾಜ್, ರಾಜಪ್ಪಮಂಗಲ, ಶಿವರುದ್ರಸ್ವಾಮಿ,‌ಕುಮಾರ್, ರವಿ, ನಾಗಶೆಟ್ಡಿ ಗುರುಪ್ರಸಾದ್ ಸೋಮವಾರಪೇಟೆ, ರಾಜ್ ಮಲ್ಲು, ಗಿರೀಶ್, ಅಭಿಷೇಕ್, ಸಂತೋಷ್ ಹೆಬ್ಬಸೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಭಿನ್ನಮತ ಇಲ್ಲ: ಸೋಮಣ್ಣ

ಪಕ್ಷದಲ್ಲಿ ನಡೆದಿರುವ ಬೆಳವಣಿಗೆಯ ಬಗ್ಗೆ ಬಿಳಿಗಿರಿರಂಗನಬೆಟ್ಟದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ‘ಯಾವ ಭಿನ್ನ ಮತವೂ ಇಲ್ಲ.ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಪಕ್ಷದಲ್ಲಿ ಎಲ್ಲಕ್ಕಿಂತ ಶಿಸ್ತು ದೊಡ್ಡದು. ಶಿಸ್ತು ಉಲ್ಲಂಘಿಸಿದವರ ವಿರುದ್ಧ ಜಿಲ್ಲಾಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಏನಾದರೂ ಆಕ್ಷೇಪ ಇದ್ದರೆ ಅವರು ದೊಡ್ಡವರನ್ನು ಹೋಗಿ ನೋಡಲಿ. ಪಕ್ಷದಲ್ಲಿ ಶಿಸ್ತು ಬರಬೇಕಾಗಿದೆ. ಶಿಸ್ತನ್ನು ಕಾಪಾಡಲು ಜಿಲ್ಲಾಧ್ಯಕ್ಷರು ಒಳ್ಳೆಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT