ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸಚಿವ ಶಿವರಾಜ ತಂಗಡಗಿ ವಿರುದ್ಧ ಬಿಜೆಪಿ ಪ್ರತಿಭಟನೆ

Published 28 ಮಾರ್ಚ್ 2024, 4:26 IST
Last Updated 28 ಮಾರ್ಚ್ 2024, 4:26 IST
ಅಕ್ಷರ ಗಾತ್ರ

ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಪ್ರಧಾನಿ ಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಜಿಲ್ಲಾ ಯುವ ಮೋರ್ಚಾದ ಆಶ್ರಯದಲ್ಲಿ ಪದಾಧಿಕಾರಿಗಳು ಬಿಜೆಪಿ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. 

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸೇರಿದ ಪ್ರತಿಭಟನಕಾರರು ಮೋದಿ ಪರ ಜೈಕಾರ ಕೂಗುತ್ತಾ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಅಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ, ಶಿವರಾಜ್ ತಂಗಡಗಿ ವಿರುದ್ದ ಘೋಷಣೆಗಳನ್ನು ಕೂಗಿದರು. ತಂಗಡಗಿ ಭಾವಚಿತ್ರಕ್ಕೆ ಬೆಂಕಿ ಹಾಕಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದು ಫೆಕ್ಸ್ ಅನ್ನು ಪಡೆದುಕೊಂಡರು. 

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸೂರ್ಯ ಕುಮಾರ್‌ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕಾಂಗ್ರೆಸ್‌ನವರು ಸಹಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರಧಾನಿಯವರ ಬಗ್ಗೆ ಹೀನ ಪದಗಳನ್ನು ಬಳಸಿ ಅವಮಾನ ಮಾಡುತ್ತಿದ್ದಾರೆ. ಇದು ಸಚಿವ ತಂಗಡಗಿಯವರಿಂದ ಬಂದ ಹೇಳಿಕೆಯಲ್ಲ. ‘ಮೋದಿ ಎಂದು ಹೇಳುವವರ ಕಪಾಳಕ್ಕೆ ಹೊಡೆಯಿರಿ’ ಎಂಬ ಅವರ ಹೇಳಿಕೆ ಕಾಂಗ್ರೆಸ್‌ನವರ ಮನಃಸ್ಥಿತಿ ಮತ್ತು ಹತಾಶೆಯನ್ನು ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಶಿವರಾಜ ತಂಗಡಗಿಯವರಿಂದ ರಾಜೀನಾಮೆ ಪಡೆದುಕೊಳ್ಳಬೇಕು. ಸಚಿವರು ಜನರ ಕ್ಷಮೆಯಾಚಿಸಬೇಕು. ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದ ಪ್ರಧಾನಿ ಮೋದಿ ದೇಶದ ಭವಿಷ್ಯಕ್ಕಾಗಿ ಪ್ರಧಾನಿಯಾಗಿದ್ಧಾರೆ. ಹತ್ತು ವರ್ಷಗಳಿಂದ ಅವರು ಮಾಡಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ಸಹಿಸದ ಕಾಂಗ್ರೆಸ್‌ನವರು ಇಲ್ಲಸಲ್ಲ ಸುಳ್ಳುಗಳನ್ನು ಹೇಳುತ್ತಿದ್ದಾರೆ’ ಎಂದು ದೂರಿದರು. 

‘ಭ್ರಷ್ಟಾಷಾರ ರಹಿತ ಆಡಳಿತ ನೀಡಿರುವ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ದೇಶದ ಯುವ ಸಮುದಾಯ ಕಾತುರವಾಗಿದೆ. ಹೀಗಾಗಿ ಹೋದ ಕಡೆ ಎಲ್ಲ ಮೋದಿ, ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ಇದನ್ನು ಸಹಿಸದ ರಾಜ್ಯದ ಕಾಂಗ್ರೆಸ್ ಮುಖಂಡರು ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಸೂರ್ಯಕುಮಾರ್‌ ಹೇಳಿದರು. 

ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಭಗೀರಥ, ಸಾಗಡೆ ಗುರು, ಯಳಂದೂರು ರುದ್ರ, ಪ್ರಮೋದ್, ಕೋಟಂಬಳ್ಳಿ ಕುಮಾರ್,ಕೊತ್ತಲವಾಡಿ ಮಹದೇವಸ್ವಾಮಿ, ಗುರುಪ್ರಸಾದ್, ಪ್ರವೀಣ್, ಬುಲೆಟ್ ಚಂದ್ರು, ಮಹದೇವಪ್ರಸಾದ್, ಮಹೇಶ್‌ನಾಯಕ, ಬೂದಂಬಳ್ಳಿ ರಾಜೇಶ್, ಕೇಬಲ್ ರಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ವಿರಾಟ್ ಶಿವು, ಜಿಲ್ಲಾ ಸಹ ವಕ್ತಾರ ಮಂಜುನಾಥ್, ಕೂಸಣ್ಣ ಇತರರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT