ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನ ಬೆಟ್ಟ: ವರುಣನ ಸ್ವಾಗತ

ಬಣ್ಣದ ಬೆಳಕಿನಲ್ಲಿ ರಂಗಪ್ಪನ ದೇವಳ ಝಗಮಗ: ರಾಷ್ಟ್ರಪತಿ ಸ್ವಾಗತಕ್ಕೆ ಶೃಂಗಾರ
Last Updated 7 ಅಕ್ಟೋಬರ್ 2021, 8:23 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟ ರಾಷ್ಟ್ರಪತಿ ಸ್ವಾಗತಕ್ಕಾಗಿ ಸಿಂಗಾರಗೊಂಡಿದೆ.

ಗುಡಿಯನ್ನು ಸ್ವಚ್ಛಗೊಳಿಸಿ ದೇವರ ಪೂಜೆಗೆ ಅಣಿಗೊಳಿಸಲಾಗಿದೆ. ಈ ನಡುವೆ ಎರಡು ದಿನದಿಂದ ಹಸಿರು ಗಿರಿಗೆ ಮೇಘಮಾಲೆ ಆವರಿಸಿಕೊಂಡಿದ್ದು, ಭೂಮಿ–ಬಾನು ಒಂದಾಗಿಸಿದೆ. ನಿರಂತರ ವರ್ಷಧಾರೆಯಿಂದ ಸಣ್ಣ ಜಲಧಾರೆಗಳು ಜಿನುಗುತ್ತಿವೆ. ಬುಧವಾರ ಮುಂಜಾನೆಯಿಂದಲೇ ಸುರಿಯುತ್ತಿರುವ ಮಳೆಗೆ ಜನ, ಜಾನುವಾರು ಅತ್ತಿತ್ತ ಸರಿಯದಂತೆ ಬನಗಳ ಸಾಲು ನಾಕಾಬಂದಿ ಹಾಕಿದೆ.

ರಾಷ್ಟ್ರಪತಿ ಕಾರು ಬಸ್ ನಿಲ್ದಾಣದಿಂದ ರಂಗನಾಥಸ್ವಾಮಿ ದೇವಸ್ಥಾನದ ರಾಜಗೋಪುರಕ್ಕೆ ತೆರಳಲು ರಸ್ತೆ ಸಿದ್ಧಪಡಿಸಲಾಗಿದೆ. ದೇವಳದ ಬಳಿ ಕೃತಕ ಟಾರ್ ರಸ್ತೆ ಮತ್ತು ಏರು ಹಾದಿ ನಿರ್ಮಿಸಿ, ಸುವ್ಯವಸ್ಥೆ ಮಾಡಲಾಗಿದೆ. ಕಾರು ಮೇಲೇರುವ ಅಣಕು ಕಾರ್ಯಾಚರಣೆಗಳನ್ನು ಮಂಗಳವಾರ ಅಧಿಕಾರಿಗಳು ನಡೆಸಿದರು. ನೂರಾರು ಕಾರ್ಮಿಕರು ಈ ದೃಶ್ಯವನ್ನು ಕಣ್ತುಂಬಿಕೊಂಡರು.

ಮಳೆ ಮುನ್ಸೂಚನೆ: ತಾಲ್ಲೂಕಿನಲ್ಲಿ ಅ.10ರ ತನಕ ಮೋಡ ಕವಿದ ವಾತಾವರಣ ಇರಲಿದೆ. ಸಾಮಾನ್ಯ ಮಳೆ ಬೀಳುವ ಸಾಧ್ಯತೆ ಇದ್ದು, ಉಷ್ಣಾಂಶ 24ರಿಂದ 16 ಡಿಗ್ರಿ ಸೆಲ್ಷಿಯಸ್‌ ಇರಲಿದೆ. ಗಾಳಿಯ ತೇವಾಂಶ ಶೇ 86ರಿಂದ 56 ಆಗಿದ್ದು, ಗಾಳಿಯೂ ಗಂಟೆಗೆ 7-16 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಾಲು–ತರಕಾರಿಗೆ ಕುತ್ತು: ಪ್ರತಿ ದಿನ ಬೆಟ್ಟಕ್ಕೆ ಪೂರೈಕೆ ಆಗುತ್ತಿದ್ದ ಹಾಲು, ತರಕಾರಿಯನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಮುಂಜಾನೆ ಖರೀದಿಗಾಗಿ ಬಂದಿದ್ದ ಬಹುತೇಕ ಸೋಲಿಗ ಮಹಿಳೆಯರು ನಿರಾಸೆಯಿಂದ ತೆರಳಿದರು.

ರಾಷ್ಟ್ರಪತಿ ಭೇಟಿಗಾಗಿ ಬುಧವಾರ, ಗುರುವಾರ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಪ್ರತಿ ದಿನವೂ ಯಳಂದೂರು ಪಟ್ಟಣದಿಂದ ಹಾಲು, ತರಕಾರಿ ಪೂರೈಸುತ್ತಿದ್ದ ವಾಹನಗಳು ಬೆಟ್ಟದತ್ತ ಬರಲಿಲ್ಲ. ಇದರಿಂದ ನೂರಾರು ಆದಿವಾಸಿ ಮಹಿಳೆಯರು, ಮಕ್ಕಳು ಹಾಲು–ತರಕಾರಿ ಸಿಗದೆ ಪರದಾಡಿದರು. ಸೋಲಿಗರಿಗೆ ದೈನಂದಿನ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೇತಮ್ಮ ಬೊಮ್ಮಯ್ಯ ಆಗ್ರಹಿಸಿದರು.

ಇಳೆಗೆ ತಂಪು ತುಂಬಿದ 'ಹಸ್ತಾ’ ಮಳೆ
ಯಳಂದೂರು ತಾಲ್ಲೂಕಿನಲ್ಲಿ ಬುಧವಾರ ‘ಹಸ್ತಾ’ ಮಳೆಯ ಕಣ್ಣಾಮುಚ್ಚಾಲೆಯಾಟ ನಡೆಯಿತು. ಮುಂಜಾನೆಯಿಂದಲೇ ದಟ್ಟ ಮೋಡಗಳು ಆವರಿಸಿದ್ದು, ಮಧ್ಯಾಹ್ನದ ತನಕ ಸೋನೆ ಮಳೆ ಸುರಿಯಿತು.

ಗ್ರಾಮೀಣ ಭಾಗದಲ್ಲಿ ಬಿಸಿಲು, ಮೋಡಗಳ ಚೆಲ್ಲಾಟ ನಡೆದಿತ್ತು.ಹಲವು ದಿನಗಳಿಂದ ಉಷ್ಣಾಂಶ ಏರಿಕೆಯಿಂದ ಪರಿತಪಿಸಿದ್ದ ಕೃಷಿಕರು ನಿಟ್ಟುಸಿರು ಬಿಟ್ಟರು.

ಮೂರು ದಿನಗಳಿಂದ ಮೋಡ ಮುಚ್ಚಿದ ವಾತಾವರಣವಿತ್ತು. ಈ ಬಾರಿ ಮಳೆ ನಿರೀಕ್ಷಿಸಿದಷ್ಟು ಸುರಿದಿಲ್ಲ. ಆದರೆ, ಒಣಗಿದ ಬೆಳೆಗಳಿಗೆ ಮರುಜೀವ ಬಂದಂತೆ ಆಗಿದೆ. ಬಾಳೆ, ಹುರುಳಿ, ಅಲಸಂದೆ ಬೆಳೆಗಳ ಚೇತರಿಕೆಗೆ ಕಾರಣವಾಗಿದೆ ಎಂದು ಕೃಷಿಕ ಅಂಬಳೆ ಶಿವಶಂಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT