ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಆರ್‌ಟಿ: ಚಿಕ್ಕ ಮಲ್ಕಿ ಗುಡ್ಡಕ್ಕೆ ಬೆಂಕಿ

Published 9 ಮಾರ್ಚ್ 2024, 16:09 IST
Last Updated 9 ಮಾರ್ಚ್ 2024, 16:09 IST
ಅಕ್ಷರ ಗಾತ್ರ

ಯಳಂದೂರು: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವಲಯಕ್ಕೆ ಬರುವ ಬಿಳಿಗಿರಿರಂಗನಬೆಟ್ಟದ ಮುತ್ತುಗದಗದ್ದೆ ಪೋಡಿನ ಮುಂಭಾಗದ ಚಿಕ್ಕಮಲ್ಕಿ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, 30 ಎಕರೆಗೂ ಹೆಚ್ಚು ಅರಣ್ಯ ಸುಟ್ಟು ಹೋಗಿದೆ.

ಶುಕ್ರವಾರ ರಾತ್ರಿ ಹೊತ್ತಿಗೆ ಬೆಂಕಿ ಆರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 

‘ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಬಿದ್ದಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿ ಸಿಬ್ಬಂದಿ ಆರಿಸಿದ್ದಾರೆ. 25 ಎಕರೆಯಿಂದ 30 ಎಕರೆ ಪ್ರದೇಶ ಸುಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಕಿ ಕಾಣಿಸಿಕೊಂಡಿದ್ದ ಪ್ರದೇಶ ಬೆಟ್ಟವಾಗಿದ್ದು, ಹುಲ್ಲು, ಕುರುಚಲು ಗಿಡಗಳು ಮಾತ್ರ ಸುಟ್ಟಿವೆ’ ಎಂದು ಬಿಆರ್‌ಟಿ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಿಡಿಗೇಡಿಗಳು ಬೆಂಕಿ ಹಾಕಿರುವ ಸಾಧ್ಯತೆ ಇದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕೆಲವರ ಬಗ್ಗೆ ಅನುಮಾನ ಇದ್ದು, ಶೀಘ್ರದಲ್ಲಿ ಪತ್ತೆಹಚ್ಚಲಾಗುವುದು’ ಎಂದು ಹೇಳಿದರು.  

ಸಿಸಿಎಫ್‌ ಭೇಟಿ: ಈ ಮಧ್ಯೆ, ಚಾಮರಾಜನಗರ ಪ್ರಾದೇಶಿಕ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್‌ ಅವರು ಇತ್ತೀಚೆಗೆ ಬೆಂಕಿ ಕಾಣಿಸಿಕೊಂಡಿದ್ದ ಪುಣಜನೂರು ವಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವರದಿಗೆ ಸೂಚನೆ: ಈ ಮಧ್ಯೆ, ಬಿಆರ್‌ಟಿಯ ಪುರಾಣಿಪೋಡು, ಮುತ್ತುಗದ್ದೆ ಪೋಡಿನ ವ್ಯಾಪ್ತಿಯಲ್ಲಿ ಈ ಹಿಂದೆ ಸಂಭವಿಸಿದ್ದ ಕಾಳ್ಗಿಚ್ಚಿನಲ್ಲಿ ಎಷ್ಟು ಕಾಡು ಸುಟ್ಟುಹೋಗಿದೆ ಎಂಬ ಬಗ್ಗೆ ಸತ್ಯಾಸತ್ಯತೆ ಅರಿಯಲು ನೋಡೆಲ್‌ ಅಧಿಕಾರಿಯನ್ನು ಕಳಿಸಿ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪಿಸಿಸಿಎಫ್‌ ಅವರಿಗೆ ಸೂಚನೆ ಕೊಟ್ಟಿದ್ದಾರೆ. 

200 ಎಕರೆ ಕಾಡು ಸುಟ್ಟಿದೆ ಎಂದು ಸರ್ಕಾರಕ್ಕೆ ಮಾಹಿತಿ ಬಂದಿದೆ. ಆದರೆ, ಚಾಮರಾಜನಗರ ಸಿಸಿಎಫ್‌ 10 ಎಕರೆ ಮಾತ್ರ ಸುಟ್ಟಿದೆ ಎಂದು ವರದಿ ನೀಡಿದ್ದಾರೆ. ಈ ಬಗ್ಗೆ ಪರಾಮರ್ಶಿಸಿ ವರದಿ ನೀಡುವಂತೆ ಅವರು ಫೆ.29ರಂದು ಕಳುಹಿಸಿರುವ  ಟಿಪ್ಪಣಿಯಲ್ಲಿ ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT