ಚಾಮರಾಜನಗರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪಿಎಂ ವಿಶ್ವಕರ್ಮ ಹೊಸ ಯೋಜನೆಯಡಿ 18 ಚಟುವಟಿಕೆಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ವಿವಿಧ ಸವಲತ್ತು, ಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಿದೆ.
ವಿಶ್ವಕರ್ಮ ಜನಾಂಗದವರಿಗೆ ₹3 ಲಕ್ಷದವರೆಗೆ ಆಧಾರ ರಹಿತ ಸಾಲ, ₹15 ಸಾವಿರದವರೆಗಿನ ಟೂಲ್‌ಕಿಟ್, ಕೌಶಲ್ಯಾಭಿವೃದ್ದಿಗೆ ತರಬೇತಿ ಮತ್ತು ದೈನಂದಿನ ₹500 ಸಂಭಾವನೆ, ಸಂಪೂರ್ಣ ತಯಾರಾದ ಉತ್ಪನ್ನಗಳಿಗೆ ಗುಣಮಟ್ಟ ಪ್ರಮಾಣೀಕರಣ, ಬ್ರಾಂಡಿಂಗ್ ಮತ್ತು ಜಾಹೀರಾತು ಮಾದರಿಯಲ್ಲಿ ಮಾರ್ಕೆಟಿಂಗ್‌ಗೆ ನೆರವು ನೀಡಲಾಗುವುದು.
ಮರಕೆಲಸಗಾರರು, ದೋಣಿ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ, ಕಮ್ಮಾರ ಸುತ್ತಿಗೆ, ಟೂಲ್‌ಕಿಟ್ ತಯಾರಿ, ಬೀಗ ತಯಾರಿ, ಶಿಲ್ಪಕಲೆ ಕಲ್ಲುಪುಡಿ ತಯಾರಿಕೆ, ಬಂಗಾರದ ಆಭರಣ ತಯಾರಿಕೆ, ಕುಂಬಾರಿಕೆ, ಪಾದರಕ್ಷೆಗಳ ಚಮ್ಮಾರಿಕೆ ತಯಾರಿಕೆ, ಗೌಂಡಿ ತಯಾರಿಕೆ ಕೆಲಸಗಾರರು (ಮೇಸ್ತ್ರಿ), ಬ್ಯಾಸ್ಕೆಟ್, ಮ್ಯಾಟ್, ಬಿದಿರಿನ ಉತ್ಪನ್ನ ತಯಾರಿ, ತೆಂಗಿನನಾರಿನ ಉತ್ಪನ್ನ, ಗೊಂಬೆ ತಯಾರಿ, ಮೀನಿನ ಬಲೆಗಳ ತಯಾರಿ, ಕ್ಷೌರಿಕ, ಹೂ ಮಾಲೆ ತಯಾರಿ, ದೋಬಿ, ಟೈಲರ್ ಸೇರಿದಂತೆ 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಹುದ್ದೆಯಾಗಿರಬೇಕು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಒಂದು ಕುಟುಂಬಕ್ಕೆ ಒಬ್ಬರು ಮಾತ್ರ ಸೌಲಭ್ಯ ಪಡೆಯಲು ಅರ್ಹರು. ಕುಟುಂಬ ಸದಸ್ಯರು ಸರ್ಕಾರಿ ಕೆಲಸದಲ್ಲಿ ಇರಬಾರದು. ಕುಶಲಕರ್ಮಿಗಳು ಮುದ್ರಾ ಮತ್ತು ಸ್ವನಿಧಿ ಬಿಟ್ಟು ಬೇರೆ ಯಾವುದೇ ಸರ್ಕಾರಿ ಯೋಜನೆಯಲ್ಲಿ ಸಾಲ ಬಾಕಿ ಇರಬಾರದು.
ಆಸಕ್ತರು ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ, ಆಧಾರ್ ಜೋಡಿತ ಮೊಬೈಲ್ ಸಂಖ್ಯೆ, ರೇಷನ್‌ಕಾರ್ಡ್, ಕುಟುಂಬ ಸದಸ್ಯರ ಆಧಾರ್‌ಕಾರ್ಡ್ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ಯೋಜನೆ ಸೌಲಭ್ಯಕ್ಕೆ ತ್ವರಿತವಾಗಿ ನೋಂದಾಯಿಸಿಕೊಳ್ಳಬೇಕು.
ಮಾಹಿತಿಗಾಗಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ಮಾಡಬೇಕು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ನಿರಂಜನ್ ಪ್ರಸಾದ್ (ಮೊ.ಸಂ. 7217711733) ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.