ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಸೇವಾ ಪ್ರಶಸ್ತಿಗೆ ಅರಣ್ಯ ವೀಕ್ಷಕ ಫೈರೋಜ್‌ ಆಯ್ಕೆ

ಬಂಡೀಪುರದ ಮಾರಿಯಮ್ಮ ಟ್ರಸ್ಟ್‌ನ ಸುನಿತಾ ಧೈರ್ಯಂಗೂ ಗೌರವ
Last Updated 3 ನವೆಂಬರ್ 2022, 5:44 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ವೀಕ್ಷಕರಾಗಿ ಕೆಲಸ ಮಾಡುವ ಫೈರೋಜ್‌ ಅವರು ಕ್ರಿಕೆಟರ್ಸ್‌ ಫಾರ್‌ ವೈಲ್ಡ್‌ಲೈಫ್‌ ಕನ್ಸರ್ವೇಷನ್‌ ಸಂಸ್ಥೆ ನೀಡುವ ವನ್ಯಜೀವಿ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇವರಲ್ಲದೇ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮಾರಿಯಮ್ಮ ಟ್ರಸ್ಟ್‌ನ ಸುನಿತಾ ಧೈರ್ಯಂ, ಶಿವಮೊಗ್ಗದ ಪ‍ರಿಸರವಾದಿ ಅಖಿಲೇಶ್‌ ಚಿಪ್ಲಿ ಹಾಗೂ ಕೊಡಗಿನ ಕರ್ನಲ್‌ ಸಿ.ಎಂ.ಮುತ್ತಣ್ಣ ಅವರು ಕೂಡ ಆಯ್ಕೆಯಾಗಿದ್ದಾರೆ.

ಇದೇ 5ರಂದು ಬೆಂಗಳೂರಿನ ರಾಜ ರಾಜೇಶ್ವರಿನಗರದ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರದ ಹರವೆ ಭಾಗದಲ್ಲಿ ಅರಣ್ಯ ವೀಕ್ಷಕರಾಗಿ ನಿಯೋಜನೆಗೊಂಡಿರುವ ಫೈರೋಜ್‌ ಅವರ ಹೆಸರನ್ನು ಅರಣ್ಯ ಇಲಾಖೆ ಶಿಫಾರಸು ಮಾಡಿತ್ತು.

18 ಕಳ್ಳಬೇಟೆ ಪ್ರಕರಣಗಳನ್ನು ಭೇದಿಸುವಲ್ಲಿ ಫೈರೋಜ್‌ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. 15 ಚಿರತೆಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. 200ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ತಾಲ್ಲೂಕಿನ ಚಂದಕವಾಡಿಯವರಾದ ಫೈರೋಜ್ ಅವರು 9 ವರ್ಷಗಳಿಂದ ಅರಣ್ಯ ಸೇವೆಯಲ್ಲಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಫೈರೋಜ್‌, ‘ನಮ್ಮ ಕೆಲಸಗಳನ್ನು ಗುರುತಿಸಿರುವುದು ಖುಷಿ ಕೊಟ್ಟಿದೆ. ಅಧಿಕಾರಿಗಳು, ರೈತರು ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಶಸ್ತಿಗೆ ಆಯ್ಕೆಯಾಗಿರುವ ಸುನಿತಾ ಧೈರ್ಯಂ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾರಿಯಮ್ಮನ ಟ್ರಸ್ಟ್‌ ನಡೆಸುತ್ತಾ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ ಹುಲಿ, ಚಿರತೆಗಳು ಜಾನುವಾರುಗಳನ್ನು ಕೊಂದರೆ, ಜಾನುವಾರುಗಳ ಮಾಲೀಕರಿಗೆ ಟ್ರಸ್ಟ್‌ ಮೂಲಕ ಪರಿಹಾರ ವಿತರಿಸಿ, ಗ್ರಾಮಸ್ಥರು ಹುಲಿ, ಚಿರತೆಗಳಿಗೆ ಯಾವುದೇ ಹಾನಿ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT