ಸೋಮವಾರ, ಮೇ 10, 2021
25 °C
ಚಾಮರಾಜನಗರ: ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಮಾವೇಶ

ಕಾಂಗ್ರೆಸ್‌ ದುರಾಡಳಿತದಿಂದ ಬಿಜೆಪಿಗೆ ಅಧಿಕಾರ:ಕೃಷ್ಣಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಜನ್ಮ ನೀಡಿರುವುದು ಕಾಂಗ್ರೆಸ್‌. ಅದರ ದುರಾಡಳಿತದಿಂದ ಬಿಜೆಪಿಗೆ ಅಧಿಕಾರ ಸಿಕ್ಕಿದೆ’ ಎಂದು ಬಹುಜನ ಸಮಾಜಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು ಭಾನುವಾರ ವಾಗ್ದಾಳಿ ನಡೆಸಿದರು. 

ಪಕ್ಷದ ಚಾಮರಾಜನಗರ ವಿಧಾನಸಭಾ ಕ್ಷೇತ್ರ ಸಮಿತಿಯು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪಕ್ಷದ ಸಂಸ್ಥಾಪಕ ಕಾನ್ಶಿರಾಂ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಧಿಕಾರದೆಡೆಗೆ ಬಹುಜನರ ನಡಿಗೆ, ಸ್ವಾಭಿಮಾನಿ ಬಹುಜನರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಹಾಗೂ ಬಿಜೆಪಿಗಳು ದೇಶದಲ್ಲಿ ಆಡಳಿತ ನಡೆಸಿ, ರಾಷ್ಟ್ರದ ಆಸ್ತಿ ಮತ್ತು ಸಂಪತ್ತನ್ನು ಶ್ರೀಮಂತರಿಗೆ ಸೇರುವಂತೆ ಮಾಡಿಬೆ. ಬಡವರನ್ನು ಬಡವರನ್ನಾಗಿಯೇ ಉಳಿಸಿವೆ. ಇದೇ ಕಾಂಗ್ರೆಸ್‌ ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವನ್ನು 100 ಬಾರಿ ತಿದ್ದುಪಡಿ ಮಾಡಿ ದುರ್ಬಲಗೊಳಿಸಿದೆ’ ಎಂದು ಆರೋಪಿಸಿದರು.  

ಸುಳ್ಳು ಲಸಿಕೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್‌ ಪರಿಸ್ಥಿತಿಯನ್ನು ನಿರ್ವಹಿಸಿರುವ ರೀತಿಯನ್ನು ಟೀಕಿಸಿದ ಕೃಷ್ಣಮೂರ್ತಿ ಅವರು, ‘ಕೋವಿಡ್‌ ಆತಂಕದಿಂದ ದೇಶದ ಜನರು ನರಳುತ್ತಿದ್ದಾರೆ. ಕಳೆದ ವರ್ಷ ಮಾರ್ಚ್ 24ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ಮಾಡಿ, ‘21 ದಿನಗಳಲ್ಲಿ ಇಡೀ ದೇಶ ರಕ್ಷಣೆ ಮಾಡುತ್ತೇವೆ. ಕೋವಿಡ್‌ನಿಂದ ಜನರನ್ನು ಕಾಪಾಡುತ್ತೇನೆ‌’ ಎಂದು ಸಮಯ ತೆಗೆದುಕೊಂಡವರು. ಅಲ್ಲದೆ ಲಕ್ಷ ಲಕ್ಷ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಕೋವಿಡ್‌ ಚಿಕಿತ್ಸೆಗಾಗಿ ಬಿಡುಗಡೆ ಮಾಡಿದೆ. ಈಗ ಕೋವಿಡ್‌ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಲಸಿಕೆ ಪಡೆದಿರುವವರಿಗೂ ಕೋವಿಡ್‌ ಬಂದಿದೆ ಎಂದರೆ, ಲಸಿಕೆ ಪಡೆದಿರುವವರಿಗೂ ಕೋವಿಡ್‌ ಬಂದಿದೆ ಎಂದರೆ ಲಸಿಕೆ ಸುಳ್ಳು ಎಂದಾಯಿತು. ಈ ಲಸಿಕೆಯಿಂದ ಕೋವಿಡ್‌ ನಿಯಂತ್ರಣ ಮಾಡುವುದಾದರೂ ಹೇಗೆ? ಎಂದು ಪ್ರಶ್ನಿಸಿದರು. 

ಹಣ ಎಲ್ಲಿ ಹೋಯಿತು?: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಆರೋಗ್ಯಕ್ಕೆ ಸಿಂಹಪಾಲು ಅನುದಾನ ಮೀಸಲಿಟ್ಟಿರುವುದಾಗಿ ಹೇಳಿದ್ದರು. ಆದರೆ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ. ಹಾಗಿದ್ದರೆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. 

‘ರಾಜ್ಯದಲ್ಲಿ ಸಾರಿಗೆ ನೌಕರರು ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ. ಸೌಜನ್ಯಕ್ಕಾದರೂ ಸರ್ಕಾರ ಅವರ ಜತೆ ಮಾತುಕತೆ ಆಡಿಲ್ಲ.  ಕೇಂದ್ರ, ರಾಜ್ಯ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಮನುವಾದಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗಳಿಗೆ ತಕ್ಕಪಾಠ ಕಲಿಸಿ ಮುಂಬರುವ ಚುನಾವಣೆಯಲ್ಲಿ ಸಂವಿಧಾನದ ಆಶಯಗಳನ್ನು ತನ್ನ ಪ್ರಣಾಳಿಕೆ ಮಾಡಿಕೊಂಡಿರುವ ಬಹುಜನ ಸಮಾಜಪಕ್ಷವನ್ನು ಬೆಂಬಲಿಸಿ ದೇಶ, ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಬೆಂಬಲಿಸಬೇಕು’ ಎಂದು ಕೃಷ್ಣಮೂರ್ತಿ ಅವರು  ಮನವಿ ಮಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಅವರು ಮಾತನಾಡಿ, ‘ಕೋವಿಡ್ ಸಂಕಷ್ಠದಲ್ಲಿ ಸಂದರ್ಭದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗೆ ಆಸರೆಯಾಗದೆ ಕೋವಿಡ್ ಚಿಕಿತ್ಸೆ ಕೊಡುವ ನೆಪದಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ ಆಳುವ ಪಕ್ಷಕ್ಕಿಂತ  ವಿರೋಧಪಕ್ಷಗಳಿಗೆ ಹೆಚ್ಚಿನ ಮಹತ್ವ, ಜವಾಬ್ದಾರಿ ಇದೆ. ಆದರೆ ವಿರೋಧ ಪಕ್ಷ ಕಾಂಗ್ರೆಸ್ ಆಳುವ ಬಿಜೆಪಿ ದುರಾಡಳಿತ ವಿರುದ್ಧ ಮೌನವಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ’ ಎಂದರು. 

ತಾಲ್ಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಬಸವಣ್ಣ ಬ್ಯಾಡಮೂಡ್ಲು, ಜಿಲ್ಲಾ ಕಾರ್ಯದರ್ಶಿ ಶಿವಣ್ಣ ದೇವಾಲಾಪುರ, ಖಜಾಂಚಿ ರಾಜೇಂದ್ರ, ಮುಖಂಡ ದೌಲತ್‌ಪಾಷ, ಕ್ಷೇತ್ರ ಉಸ್ತುವಾರಿ ರಾಜಶೇಖರ್ ಚಂದಕವಾಡಿ, ತಾಲ್ಲೂಕು ಸಂಯೋಜಕ ಎಸ್.ಪಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್, ಖಜಾಂಚಿ ಸಿದ್ದೇಶ್‌ವಡ್ಡರಹಳ್ಳಿ, ಮಹಿಳಾ ಘಟಕದ ರಾಮಸಮುದ್ರ ಸುಶೀಲ, ಬಿವಿಎಫ್ ರವಿಮೌರ್ಯ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು