ಮಂಗಳವಾರ, ಆಗಸ್ಟ್ 16, 2022
21 °C
ಚಾಮರಾಜನರಗರ: ರಜೆ, ಮಳೆಯ ಕಾರಣ ಜನಸಂಚಾರ ವಿರಳ, ಹಾಡಿಯಿಂದ ಹೊರಬರದ ಗಿರಿಜನ

ಮಂಜು, ಮಳೆ, ಚಳಿ: ಭೂರಮೆ ಮೇಲೆ ‘ಬುರೇವಿ’ ಪ್ರಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಯಳಂದೂರು: ಶ್ರೀಲಂಕಾ ಕರಾವಳಿಯಲ್ಲಿ ಸೃಷ್ಟಿಯಾಗಿ ತಮಿಳುನಾಡು ಕಡಲ ತೀರದ ಮೂಲಕ ಹಾದು ಹೋಗುತ್ತಿರುವ ‘ಬುರೇವಿ’ ಚಂಡಮಾರುತದ ಪ್ರಭಾವ ಗುರುವಾರ ಜಿಲ್ಲೆಯ ಮೇಲೂ ಆಗಿದೆ. 

ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ಮೋಡ ಕವಿದ ಹಾಗೂ ಶೀತ ವಾತಾವರಣ ಇತ್ತು. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಸೇರಿದಂತೆ ಹಲವು ಕಡೆಗಳಲ್ಲಿ ತುಂತುರು ಮಳೆಯಾಗಿದೆ. ದಟ್ಟೈಯಿಸಿದ ಮೋಡದಿಂದಾಗಿ ಸೂರ್ಯನ ಬೆಳಕು ಭೂಮಿಗೆ ಬಿದ್ದಿಲ್ಲ. ಇಡೀ ಜಿಲ್ಲೆಯಲ್ಲಿ ಮಲೆನಾಡಿನ ವಾತಾವರಣ ಕಂಡು ಬಂತು. 

ಹೆಚ್ಚಿದ ಚಳಿ: ಎರಡು ವಾರಗಳಿಂದೀಚೆಗೆ ಜಿಲ್ಲೆಯಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಗುರುವಾರ ಚಳಿಯೊಂದಿಗೆ ಮಳೆಯೂ ಇದ್ದುದರಿಂದ ಜನರಿಗೆ ಥಂಡಿ ಅನುಭವ ಹೆಚ್ಚಾಯಿತು. ಜನರು ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕಿದರು. ಮದುವೆ, ಗೃಹ ಪ್ರವೇಶ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಹೊರಗಡೆ ಹೋಗುವವರು ಚಳಿಯಿಂದ ತಪ್ಪಿಸಲು ಸ್ವೆಟರ್‌ ಮತ್ತಿತರ ಬೆಚ್ಚನೆಯ ಉಡುಪು ಧರಿಸಿ ಹೊರಟರು. 

ಕನಕ ದಾಸ ಜಯಂತಿ ಅಂಗವಾಗಿ ಸರ್ಕಾರಿ ರಜಾ ದಿನವಾಗಿದ್ದರಿಂದ ಹಾಗೂ ಮಳೆ ಮತ್ತು ಶೀತ ವಾತಾವರಣದಿಂದಾಗಿ ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟ ಕಡಿಮೆ ಇತ್ತು. 

ದಟ್ಟೈಸಿದ ಮಂಜು: ಜಿಲ್ಲೆಯ ಬೆಟ್ಟ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಬಿಳಿಗಿರಿ ರಂಗನಬೆಟ್ಟದಲ್ಲಿ ಗುರುವಾರ ದಿನಪೂರ್ತಿ ಆಗಸದಲ್ಲಿ ದಟ್ಟವಾದ ಮಂಜು ಕವಿದಿತ್ತು. ಜನರು ಹಾಡಿಯಿಂದ ಹೊರಬಾರದೆ ಬೆಂಕಿ ಕಾಯಿಸುತ್ತಾ ಕುಳಿತಿದ್ದರು. 

ಇ‘ಡೀ ಕಾನನವನ್ನು ಮಂಜಿನ ಹೊದಿಕೆ ಆವರಿಸಿದ್ದು, ಉಷ್ಣಾಂಶ 12 ಡಿಗ್ರಿಗೆ ಕುಸಿದಿತ್ತು. ಜನರ ಸಂಚಾರದಲ್ಲೂ ಇಳಿಕೆ ಕಂಡುಬಂದಿದ್ದು, ‘ಬುರೇವಿ’ ಪ್ರಭಾವ ಜನಜೀವನದ ಮೇಲೆ ಆಗಿದೆ ಎಂದು ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ನೌಕರ ಶೇಷಾದ್ರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಶುಕ್ರವಾರವೂ ಜಿಲ್ಲೆಯಲ್ಲಿ ಮೋಡ ಕವಿದ ಹಾಗೂ ಶೀತ ವಾತಾವರಣ ಮುಂದುವರಿಯಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು