ಮಂಗಳವಾರ, ಫೆಬ್ರವರಿ 18, 2020
29 °C
ಸಿಎಎ, ಎನ್‍ಆರ್‌ಸಿ ಕಾಯ್ದೆ ವಿರೋಧಿಸಿ ಬೃಹತ್ ಸಮಾವೇಶದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಆರೋಪ

ದೇಶದ್ರೋಹಿಗಳಿಂದ ಸಂವಿಧಾನದ ಶೀಲ ಹಾಳು:ಜ್ಞಾನಪ್ರಕಾಶ ಸ್ವಾಮೀಜಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ‘ಸಂವಿಧಾನ ನಮ್ಮ ತಾಯಿಗೆ ಸಮಾನ ಎಂದು ಹೇಳಿ ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಹೋದವರು, ಇಂದು ತಾಯಿ ಸಮಾನವಾದ ಸಂವಿಧಾನದ ಶೀಲವನ್ನೇ ಹಾಳು ಮಾಡುವ ಮೂಲಕ ನಿಜವಾದ ದೇಶದ್ರೋಹಿಗಳಾಗಿದ್ದಾರೆ’ ಎಂದು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದಲಿತರು, ಹಿಂದುಳಿದವರು ಹಾಗೂ ಮುಸ್ಲಿಮರು ಕೇವಲ ದಾಖಲೆಗಳಿಂದ ಭಾರತೀಯರಲ್ಲ. ರಕ್ತದಲ್ಲೇ ಅವರಲ್ಲಿ ಭಾರತೀಯತೆ ಇದೆ. ಆಹಾರ, ಆಶ್ರಯ ಅರಸಿ ಹೊರಗಡೆಯಿಂದ ಬಂದ ಅನ್ಯರು ಇಂದು ಮೂಲನಿವಾಸಿಗಳ ದಾಖಲೆ ಕೇಳುತ್ತಿರುವುದು ದುರಂತ. ಇದಕ್ಕಾಗಿ ದೇಶದಾದ್ಯಂತ ಪ್ರತಿಭಟನೆ, ಹೋರಾಟಗಳು ನಡೆಯುತ್ತಿವೆ. ಮತವನ್ನು ಹಣ, ಮದ್ಯಕ್ಕೆ ಮಾರಿಕೊಂಡ ಫಲದಿಂದಾಗಿ ಇಂದು ಬಿಸಿಲಿನಲ್ಲಿ ಕುಳಿತು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಲ್ಲರಿಗೂ ಬದುಕುವ ಹಾಗೂ ಸಮಾನತೆಯ ಹಕ್ಕನ್ನು ನೀಡಿದ ಸಂವಿಧಾನದ ಆಶಯವು ಅವರಿಗೆ ಇಷ್ಟವಿಲ್ಲ. ಆದ್ದರಿಂದ ಮೂಲ ಆಶಯವನ್ನೇ ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಧರ್ಮದ ಆಧಾರದ ಮೇಲೆ ದೇಶ ಒಡೆಯುವ ದೇಶದ್ರೋಹದ ಕೆಲಸವನ್ನು ಮಾಡಲು ಹೊರಟಿದೆ. ಅವರನ್ನೇ ಹಿಂಬಾಲಿಸುತ್ತಿರುವ ಮಾಧ್ಯಮಗಳು ಇಂದು ಮಾನವೀಯತೆ ಕಳೆದುಕೊಂಡು ಮಲಿನಗೊಳ್ಳುತ್ತಿವೆ’ ಎಂದು ಕಿಡಿಕಾರಿದರು.

ಲೇಖಕಿ ಡಾ.ನಜ್ಮಾ ಮಾತನಾಡಿ, ‘ಮಂಟೇಸ್ವಾಮಿ, ಮಲೆಮಹದೇಶ್ವರರು ಜಾತಿ, ಧರ್ಮದ ಬಗ್ಗೆ ತಾರತಮ್ಯ ನೀತಿಯನ್ನು ಬಿತ್ತಲಿಲ್ಲ. ಅವರು ಒಳ್ಳೆಯ ಪರಂಪರೆಯನ್ನು ಹುಟ್ಟು ಹಾಕಿ ಹೋಗಿದ್ದಾರೆ. ಇಂತಹ ನೆಲದಲ್ಲಿ ಸಿಎಎ, ಎನ್‍ಆರ್‌ಸಿಯಂತಹ ಕಾಯ್ದೆ ಹೇಗೆ ಅನ್ವಯಗೊಳ್ಳಲಿದೆ? ಮುಸ್ಲಿಮರು ಡಾ.ಅಂಬೇಡ್ಕರ್ ಹಾಗೂ ಸಂವಿಧಾನ ಇಲ್ಲಿಯವರೆಗೆ ಗೊತ್ತಿರಲಿಲ್ಲ. ದಲಿತರನ್ನು ಅಪ್ಪಿಕೊಳ್ಳಲಿಲ್ಲ. ಅವರನ್ನು ಅರಿಯದ ಪರಿಣಾಮ ಇಂದು ಮುಸ್ಲೀಮರು ಬೀದಿಗೆ ಬಂದು ಬಂದಿದ್ದಾರೆ.

‘ಎದೆ ಸೀಳಿದರೆ ಒಂದಕ್ಷರ ಇಲ್ಲದವರು, ಪಂಕ್ಚರ್‌ ಹಾಕುವವರಿಂದ ಗಲಭೆ ಸೃಷ್ಟಿಯಾಗುತ್ತಿದೆ’ ಎಂದು ಹೇಳಿದ್ದ ಸಂಸದ ತೇಜಸ್ವಿ ಸೂರ್ಯ ಸೂರ್ಯನಲ್ಲ. ಬದಲಾಗಿ ತೇಜಸ್ಸು ಇಲ್ಲದ ತೇಜಸ್ವಿ ಸೂರ್ಯ ಎಂದು ವ್ಯಂಗ್ಯವಾಡಿದರು.

ಕುರಾನ್ ಗೌರವಿಸಿದಂತೆ, ಪಾಲಿಸಿದಂತೆ ಅಂಬೇಡ್ಕರ್‌ ಅವರ ಸಂವಿಧಾನವನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಆರ್‌ಎಂಸಿ ಆವರಣದಿಂದ ಮಹದೇಶ್ವರ ಕ್ರೀಡಾಂಗಣದವರೆಗೂ ಮೆರವಣಿಗೆ ನಡೆಸಲಾಯಿತು.

ಮುಳ್ಳೂರು ಶಿವಮಲ್ಲು, ಡಿಎಸ್‍ಎಸ್ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಎಸ್‍ಡಿಪಿಐ ಸಂಘಟನೆಯ ಅಬ್ರಾಹಂ, ತಾ.ಪಂ ಸದಸ್ಯ ಜವಾದ್‍ ಅಹಮ್ಮದ್ ಇದ್ದರು.

‘ನರೇಂದ್ರ ಮೋದಿ, ಶಾ ಜನರ ರಕ್ತ ಹೀರುವ ತಿಗಣೆಗಳಿದ್ದಂತೆ’

ದೇಶದಲ್ಲಿ ಜನತೆಯ ರಕ್ತ ಹೀರುತ್ತಿರುವ ತಿಗಣೆಗಳು ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ. ಅಷ್ಟಲ್ಲದೇ ಮೋದಿ ಸರ್ಕಾರ ರೈತರ ರಕ್ತವನ್ನು ಹೀರುವಂತಹ ಸರ್ಕಾರವಾಗಿದೆ. ಡಾ.ಅಂಬೇಡ್ಕರ್ ಹೇಳಿರುವಂತೆ ಸಂವಿಧಾನ ಉಳಿಯದೇ ಹೋದರೆ ಈ ದೇಶ ಮತ್ತೊಮ್ಮೆ ಗುಲಾಮ ರಾಷ್ಟ್ರವಾಗುತ್ತದೆ. ಹಿಂದೂ ರಾಷ್ಟ್ರ ಮಾಡಿದರೆ ದೇಶ ಚಿಂದಿಯಾಗುತ್ತದೆ. ಮುಸ್ಲಿಮರು, ದಲಿತರು ಹೋರಾಟಗಳಲ್ಲಿ ಭಾಗಿಯಾಗಬೇಕು. ಮಸೀದಿ, ಮನೆಗಳಲ್ಲಿ ಸಂವಿಧಾನದಲ್ಲಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜ್ಞಾನಪ್ರಕಾಶ ಸ್ವಾಮೀಜಿ  ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು