ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ: ಜ.15ರಿಂದ ಅಭಿಯಾನ

ಚಾಮರಾಜನಗರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಸಂಬಂಧ ಜಿಲ್ಲೆಯಾದ್ಯಂತ, ವಿಶ್ವ ಹಿಂದೂ ಪರಿಷತ್ನ ನೇತೃತ್ವದಲ್ಲಿ ಇದೇ 15ರಿಂದ ಫೆ.5ರವರೆಗೆ ಶ್ರೀರಾಮನಿಧಿ ಸಮರ್ಪಣಾ ಅಭಿಯಾನ ನಡೆಯಲಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಜಿಲ್ಲಾ ಪ್ರಮುಖ ಹಾಗೂ ವಿಶ್ವ ಹಿಂದೂ ಪರಿಷತ್ನ ಮೈಸೂರು ವಿಭಾಗದ ಸಹ ಕಾರ್ಯದರ್ಶಿ ರಾ.ಸತೀಶ್ ಕುಮಾರ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
‘ಶ್ರೀರಾಮ ಮಂದಿರ ನಿರ್ಮಾಣಕ್ಕೆ ₹500 ಕೋಟಿ ವೆಚ್ಚವಾಗಲಿದ್ದು, ಸರ್ಕಾರದಿಂದ ನೆರವು ಪಡೆಯದೇ ನಿರ್ಮಿಸಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಹಲವು ಉದ್ಯಮಿಗಳು ದೇಣಿಗೆ ನೀಡಲು ಮುಂದೆ ಮಂದಿದ್ದಾರೆ. ಆದರೆ, ಮಂದಿರದಲ್ಲಿ ಜನಸಾಮಾನ್ಯರ ಪಾಲೂ ಇರಬೇಕು ಎಂಬ ಆಶಯ ಟ್ರಸ್ಟ್ನದ್ದು. ಹಾಗಾಗಿ ಜನರಿಂದ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದೆ’ ಎಂದರು.
‘ಜಿಲ್ಲೆಯ 133 ಮಂಡಲಗಳ ವ್ಯಾಪ್ತಿಯಲ್ಲಿ ಬರುವ 550 ಪಂಚಾಯಿತಿಗಳಲ್ಲಿ ದೇಣಿಗೆ ಸಂಗ್ರಹಿಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮಾತೃ ಶಕ್ತಿ ಸಮಾವೇಶ ನಡೆಸಲಾಗಿದೆ. ಇದೇ 15ರಿಂದ ಫೆ.5ರ ಅವಧಿಯಲ್ಲಿ ನಮ್ಮ ಕಾರ್ಯಕರ್ತರು ಜಿಲ್ಲೆಯ ಎಲ್ಲ ಮನೆಗಳಿಗೂ ಭೇಟಿ ನೀಡಲಿದ್ದಾರೆ. ಯಾರನ್ನೂ ಒತ್ತಾಯ ಮಾಡುವುದಿಲ್ಲ. ಜನರು ತಮ್ಮ ಯಥಾನುಶಕ್ತಿ ದೇಣಿಗೆಯನ್ನು ನೀಡಬಹುದು. ₹2,000ಕ್ಕಿಂತ ಹೆಚ್ಚು ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ’ ಎಂದು ಸತೀಶ್ ಕುಮಾರ್ ಅವರು ಹೇಳಿದರು.
12ರಂದು ಸಮಾವೇಶ: ಇದೇ ವಿಚಾರವಾಗಿ ಇದೇ 12ರಂದು ನಗರದ ವಿರಕ್ತಮಠದಲ್ಲಿ ಸಾಧು ಸಂತರ ಸಮಾವೇಶ ಏರ್ಪಡಿಸಲಾಗಿದೆ. 80ಕ್ಕೂ ಹೆಚ್ಚು ಮಠಾಧೀಶರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಟ್ರಸ್ಟ್ನ ಜಿಲ್ಲಾ ಪ್ರಮುಖರಾದ ಬಿ.ಎಂ.ಮಂಜುನಾಥ್, ಶಾಂತಮೂರ್ತಿ ಕುಲಗಾಣ, ಮಂಗಳಮ್ಮ, ವೃಷಬೇಂದ್ರಪ್ಪ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.