ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಮೀಸಲು ಕ್ಷೇತ್ರ: ಕಾಣದ ತಾರಾ ಪ್ರಚಾರಕರ ಅಬ್ಬರ

ಚಾರಕ್ಕೆ ಬಾರದ ಕಾಂಗ್ರೆಸ್‌, ಬಿಜೆಪಿ ರಾಷ್ಟ್ರೀಯ ನಾಯಕರು
Published 1 ಮೇ 2024, 5:07 IST
Last Updated 1 ಮೇ 2024, 5:07 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿ ತಾರಾ ಪ್ರಚಾರಕರ ಅಬ್ಬರ ಕಾಣಲಿಲ್ಲ. 

2019ರ ಚುನಾವಣೆಗೆ ಹೋಲಿಸಿದರೆ, ಈ ಸಲ ಪಕ್ಷಗಳ ಪ್ರಚಾರ ಕೊಂಚ ಸಪ್ಪೆಯಾಗಿತ್ತು. ರಾಜ್ಯ ಮಟ್ಟದ ತಾರಾ ಪ್ರಚಾರಕರು ಕೂಡ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿಲ್ಲ. ಅಭ್ಯರ್ಥಿಗಳು ಕೂಡ ಹೋಬಳಿ ಅಥವಾ ದೊಡ್ಡ ಗ್ರಾಮ ಪಂಚಾಯಿತಿ ಮಟ್ಟದ ಪ್ರಚಾರಕ್ಕೆ ಸೀಮಿತವಾಗಿದ್ದರು.

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್.ಧ್ರುವನಾರಾಯಣ ಪರ ರಾಹುಲ್‌ ಗಾಂಧಿ ಅವರು ನಗರದಲ್ಲಿ ಪ್ರಚಾರ ನಡೆಸಿದ್ದರು. ಅದು ಬಿಟ್ಟರೆ ಬೇರೆ ಯಾರೂ ಬಂದಿರಲಿಲ್ಲ. ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಮುಖ ರಾಷ್ಟ್ರೀಯ ನಾಯಕರು ಬಂದಿರಲಿಲ್ಲ. ರಾಜ್ಯ, ಸ್ಥಳೀಯ ಮುಖಂಡರೇ ಪ್ರಚಾರದಲ್ಲಿ ಭಾಗವಹಿಸಿದ್ದರು. 

ಈ ಬಾರಿ ಎರಡೂ ‍ಪಕ್ಷಗಳ ರಾಷ್ಟ್ರೀಯ ಮಟ್ಟದ ನಾಯಕರು ಯಾರೂ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಲಿಲ್ಲ. 

ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ನಗರಕ್ಕೆ ಭೇಟಿ ನೀಡಿ ಪಕ್ಷದ ಪರವಾಗಿ ಸುದ್ದಿಗೋಷ್ಠಿ ನಡೆಸಿ, ಮುಖಂಡರೊಂದಿಗೆ ಸಭೆ ನಡೆಸಿದರೇ ವಿನಾ, ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿಲ್ಲ. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ ಅವರು ಕೂಡ ಪಕ್ಷದ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದು ಬಿಟ್ಟರೆ, ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ. 

ರಾಜ್ಯ ನಾಯಕರ ಭೇಟಿ: ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ರಾಜ್ಯ ಮಟ್ಟದ ಬೆರಳೆಣಿಕೆಯಷ್ಟು ನಾಯಕರು ಪ‍್ರಚಾರಕ್ಕೆ ಬಂದಿದ್ದರು. 

ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದರು. ಪಕ್ಷದ ಅಭ್ಯರ್ಥಿ ಸುನಿಲ್‌ ಬೋಸ್‌ ನಾಮಪತ್ರ ಸಲ್ಲಿಸುವ ದಿನ ರೋಡ್‌ ಶೋನಲ್ಲಿ ಭಾಗವಹಿಸಿದ್ದರು. ಆ ಬಳಿಕ ಕೊಳ್ಳೇಗಾಲದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನಾಮಪತ್ರ ಸಲ್ಲಿಸುವ ದಿನ ರೋಡ್‌ ಶೋನಲ್ಲಿ ಭಾಗವಹಿಸಿದ್ದರು. ಅದು ಬಿಟ್ಟರೆ ನಂತರ ಬರಲಿಲ್ಲ. 

ಸಚಿವ ಸತೀಶ ಜಾರಕಿ ಹೊಳಿ ಅವರು ನಾಮಪತ್ರ ಸಲ್ಲಿಸುವ ದಿನ ಮತ್ತು ಕೊಳ್ಳೇಗಾಲದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿ ಸುನಿಲ್‌ ಬೋಸ್‌ ತಮ್ಮ ಪುತ್ರನೇ ಆಗಿರುವುದರಿಂದ ಸಮಾಜ ಕಲ್ಯಾಣ ಸಚಿ‌ವ ಡಾ.ಎಚ್‌.ಸಿ.ಮಹದೇವಪ್ಪ ಅವರು ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರು ಕೂಡ ಎರಡು ಬಾರಿ ಜಿಲ್ಲೆಗೆ ಬಂದಿದ್ದರು. 

ಬಿಜೆಪಿಯಲ್ಲಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರು ಎನ್‌ಡಿಎ ಅಭ್ಯರ್ಥಿ ಅಭ್ಯರ್ಥಿ ಎಸ್‌.ಬಾಲರಾಜು ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಂದಿದ್ದರು. ರೋಡ್‌ ಶೋದಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ಕೇಂದ್ರ ಸಚಿವ ನಾರಾಯಣ ಸ್ವಾಮಿ, ಸಂಸದ ವಿ.ಸದಾನಂದಗೌಡ ಭಾಗವಹಿಸಿದ್ದರು. ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ಮತ್ತೊಮ್ಮೆ ಬಂದು, ಮಾದಿಗರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. 

ವಿಜಯೇಂದ್ರ ಅವರು ಮತ್ತೆ ಕೊಳ್ಳೇಗಾಲ ಮತ್ತು ಹನೂರಿನಲ್ಲೂ ರೋಡ್‌ ಶೋ ನಡೆಸಿ, ಮತಯಾಚಿಸಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಗುಂಡ್ಲುಪೇಟೆಯಲ್ಲಿ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಜೆಡಿಎಸ್‌ನ ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್‌ಗೌಡ ಅವರು ಮೈತ್ರಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದ್ದರು.

ಪ್ರಧಾನಿ ಮೋದಿ ಅವರು ಮೈಸೂರಿಗೆ ಭೇಟಿ ನೀಡಿ, ಚಾಮರಾಜನಗರ, ಮೈಸೂರು ಸೇರಿದಂತೆ  ಸುತ್ತಮುತ್ತಲ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು.

‘ಚಾಮರಾಜನಗರ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ವಾತಾವರಣ ಇದ್ದುದರಿಂದ ಇದನ್ನು ‘ಎ’ ಎಂದು ಗುರುತಿಸಲಾಗಿತ್ತು. ಎಲ್ಲಿ ಪಕ್ಷ ಹೆಚ್ಚು ಮುನ್ನಡೆಯಲ್ಲಿ ಇರಲಿಲ್ಲವೋ, ಅಲ್ಲಿಗೆ ರಾಷ್ಟ್ರೀಯ ನಾಯಕರು ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ’ ಎಂದು ಹೇಳುತ್ತಾರೆ ಕಾಂಗ್ರೆಸ್‌ ಮುಖಂಡರು. 

ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರ ಆಕರ್ಷಣೆ

ಲೋಕಸಭಾ ಚುನಾವಣೆಗೆ ಹೋಲಿಸಿದರೆ ವಿಧಾನಸಭಾ ಚುನಾವಣೆಯಲ್ಲೇ ರಾಜಕೀಯ ಪಕ್ಷಗಳ ಪ್ರಚಾರ ಹೆಚ್ಚು ಅಬ್ಬರದಿಂದ ಕೂಡಿತ್ತು.  ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗೃಹ ಸಚಿವ ಅಮಿತ್‌ ಶಾ ಅವರು ಪ್ರಚಾರ ನಡೆಸಿದ್ದರೆ ಕಾಂಗ್ರೆಸ್‌ನಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕ ರಾಹುಲ್‌ ಗಾಂಧಿ ರ‍್ಯಾಲಿ ನಡೆಸಿದ್ದರು. ಎರಡೂ ಪಕ್ಷಗಳ ರಾಜ್ಯ ಮುಖಂಡರು ಪ್ರಮುಖ ನಾಯಕರು ಕೂಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ರ‍್ಯಾಲಿ ರೋಡ್‌ ಶೋ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು.

ಹನೂರು ಪಟ್ಟಣದಲ್ಲಿ ನಡೆದ ರೋಡ್‌ ಶೋನಲ್ಲಿ ವಿಜಯೇಂದ್ರ ಅವರು ಅಭ್ಯರ್ಥಿ ಬಾಲರಾಜು ಪರವಾಗಿ ಮತಯಾಚನೆ ಮಾಡಿದ್ದರು
ಹನೂರು ಪಟ್ಟಣದಲ್ಲಿ ನಡೆದ ರೋಡ್‌ ಶೋನಲ್ಲಿ ವಿಜಯೇಂದ್ರ ಅವರು ಅಭ್ಯರ್ಥಿ ಬಾಲರಾಜು ಪರವಾಗಿ ಮತಯಾಚನೆ ಮಾಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT