ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌ ಚುನಾವಣೆ- ಗಡಿ ಜಿಲ್ಲೆಗಿಲ್ಲ ಪ್ರಾತಿನಿಧ್ಯ, ಗೆದ್ದವರೊಬ್ಬರೇ!

ವಿಧಾನಪರಿಷತ್‌ ಚುನಾವಣೆ; ಮೈಸೂರು ಜಿಲ್ಲೆಯವರಿಗೇ ಪಕ್ಷಗಳ ಮಣೆ
Last Updated 14 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಚಾಮರಾಜನಗರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಮೈಸೂರು–ಚಾಮರಾಜನಗರ ದ್ವಿದಸ್ಯ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವಾಗ ಮೂರೂ ರಾಜಕೀಯ ಪಕ್ಷಗಳು (ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌) ಮೈಸೂರು ಜಿಲ್ಲೆಯವರಿಗೇ ಮಣೆ ಹಾಕುತ್ತಾ ಬಂದಿವೆ.

1988ರಿಂದ ಇದುವರೆಗೆ ಈ ದ್ವಿಸದಸ್ಯತ್ವ ಕ್ಷೇತ್ರಕ್ಕೆ ಐದು ಚುನಾವಣೆ ಹಾಗೂ ಒಂದು ಉಪಚುನಾವಣೆ ನಡೆದಿದೆ. ಜಿಲ್ಲೆಯಿಂದ ಈವರೆಗೆ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ.

2010ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಅವರು ಕಾಂಗ್ರೆಸ್‌ನ ಎನ್‌.ಮಂಜುನಾಥ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಮಲ್ಲಿಕಾರ್ಜುನಪ್ಪ ಅವರು ಕೂಡ ಆರು ವರ್ಷಗಳ ಪೂರ್ಣ ಅವಧಿಯನ್ನು ಪೂರೈಸಲಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯತ್ವಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಹಾಗಾಗಿ, 2013ರಲ್ಲಿ ಉಪ‍ ಚುನಾವಣೆ ನಡೆಸಬೇಕಾಯಿತು.

ಸ್ಪರ್ಧಿಸಿದವರೂ ಒಬ್ಬರೇ: ಗೆದ್ದವರು ಮಾತ್ರವಲ್ಲ; ಈ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದರಿಂದ ಸ್ಪರ್ಧಿಸಿದವರೂ ಮಲ್ಲಿಕಾರ್ಜುನಪ್ಪ ಅವರೊಬ್ಬರೆ ಎಂದು ಹೇಳುತ್ತಾರೆ ಮೂರೂ ಪಕ್ಷಗಳ ಮುಖಂಡರು.

ಕಾಂಗ್ರೆಸ್‌ ಪಕ್ಷವು ಜಿಲ್ಲೆಯ ಯಾರೊಬ್ಬರಿಗೂ ಇದುವರೆಗೆ ಟಿಕೆಟ್‌ ನೀಡಿಲ್ಲ. ಮಲ್ಲಿಕಾರ್ಜುನಪ್ಪ ಅವರನ್ನು ಬಿಟ್ಟು ಬಿಜೆಪಿಯೂ ಜಿಲ್ಲೆವರಿಗೆ ಬಿ.ಫಾರಂ ಕೊಟ್ಟಿಲ್ಲ. ಜಿಲ್ಲೆಯಲ್ಲಿ ಹೆಚ್ಚು ಪ್ರಬಲವಾಗಿಲ್ಲದ ಜೆಡಿಎಸ್‌ ಕೂಡ ಮೈಸೂರು ಜಿಲ್ಲೆಯವರನ್ನೇ ಕಣಕ್ಕಿಳಿಸುತ್ತಾ ಬಂದಿದೆ.

‘ಮೂರೂ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಮಾತ್ರ ಒಬ್ಬರಿಗೆ ಟಿಕೆಟ್‌ ನೀಡಿದೆ. ಮೈಸೂರು ಜಿಲ್ಲೆಯವರೇ ಸ್ಪರ್ಧಿಸಿದ್ದಾರೆ. ಜಿಲ್ಲೆಯಿಂದ ಪಕ್ಷೇತರರಾಗಿ ಸ್ಪರ್ಧಿಸಿರುವವರೂ ವಿರಳ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಣದ ಪೈಪೋಟಿ: ಗಡಿಯ ಜಿಲ್ಲೆಯ ರಾಜಕೀಯ ಪಕ್ಷಗಳ ಮುಖಂಡರು ಕೂಡ ವಿಧಾನಪರಿಷತ್‌ ಚುನಾವಣೆಗೆ ಹೆಚ್ಚು ಆಸಕ್ತಿ ಹೊಂದಿಲ್ಲ. ಪ್ರತಿ ಬಾರಿ ಟಿಕೆಟ್‌ಗಾಗಿ ಯಾರೂ ಪೈಪೋಟಿ ನಡೆಸುವುದು ಕಾಣುವುದಿಲ್ಲ.

‘ಈ ಬಾರಿ ಯಾರಾದರೂ ಸ್ಪರ್ಧಿಸಲು ಬಯಸಿದ್ದೀರಾ ಎಂದು ಕೇಳಿದಾಗ ಯಾರೊಬ್ಬರೂ ಮುಂದೆ ಬರಲಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಹಿರಿಯ ನಾಯಕ
ರೊಬ್ಬರು ತಿಳಿಸಿದರು.

ಒಟ್ಟು ಮತದಾರರಲ್ಲಿ ಮೈಸೂರು ಜಿಲ್ಲೆಯವರೇ ಸಿಂಹಪಾಲು ಇರುವುದರಿಂದ ಪಕ್ಷಗಳು ಅಲ್ಲಿಯವರಿಗೇ ಒತ್ತು ನೀಡುತ್ತಾ ಬಂದಿವೆ ಎಂದು ಹೇಳುತ್ತಾರೆ ಕಾಂಗ್ರೆಸ್‌ ಮುಖಂಡರು.

2,770 ಮತದಾರರು:ಈ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಮತದಾನದ ಹಕ್ಕು ಇದೆ.

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಇನ್ನೂ ಚುನಾವಣೆ ನಡೆಯದಿರುವುದರಿಂದ ಈ ಬಾರಿ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾತ್ರ ಮತದಾನ ಮಾಡಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 130 ಗ್ರಾಮ ಪಂಚಾಯಿತಿ ಇದ್ದು, ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಪಂಚಾಯಿತಿಯ ಅವಧಿ ಮುಕ್ತಾಯವಾಗಿದ್ದು, ಇನ್ನಷ್ಟೇ ಚುನಾವಣೆ ನಡೆಯಬೇಕಾಗಿದೆ. ಹಾಗಾಗಿ, 129 ಗ್ರಾಮ ಪಂಚಾಯಿತಿಗಳ ಸದಸ್ಯರು, ಚಾಮರಾಜನಗರ ನಗರಸಭೆ ಮತ್ತು ಕೊಳ್ಳೇಗಾಲ ನಗರಸಭೆಯ ಸದಸ್ಯರು, ಗುಂಡ್ಲುಪೇಟೆಯ ಪುರಸಭೆ, ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿಯ ಸದಸ್ಯರು ಸೇರಿದಂತೆ ಒಟ್ಟು 2,770 ಮತದಾರರು ಇದ್ದಾರೆ.

31 ಸದಸ್ಯ ಬಲದ ಚಾಮರಾಜನಗರ ನಗರಸಭೆಯಲ್ಲಿ ಸದಸ್ಯರೊಬ್ಬರ ನಿಧನದಿಂದ ಒಂದು ಸ್ಥಾನ ಖಾಲಿ ಇದೆ. ಕೊಳ್ಳೇಗಾಲ ನಗರಸಭೆಯ 31 ಸದಸ್ಯರ ಪೈಕಿ ಏಳು ಮಂದಿ ಅನರ್ಹರಾಗಿದ್ದಾರೆ. ಹಾಗಾಗಿ, ಇವರಿಗೆ ಮತದಾನದ ಅವಕಾಶ ಇಲ್ಲ.

–––

2010ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಮಂಜುನಾಥ್‌ ವಿರುದ್ಧ ಗೆದ್ದಿದ್ದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಜಿಲ್ಲೆಯಿಂದ ಇದುವರೆಗೆ ನಾನೊಬ್ಬ ಮಾತ್ರ ಆಯ್ಕೆಯಾಗಿದ್ದೇನೆ
ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಬಿಜೆಪಿ ಮುಖಂಡ

–––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT