ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವೇರಿ ಕೂಗು’: ಸೆ.3ರಂದು ಚಾಲನೆ

ಈಶಾ ಫೌಂಡೇಶನ್‌ ಅಭಿಯಾನ, ಕಾವೇರಿ ಕೊಳ್ಳದಲ್ಲಿ 242 ಕೋಟಿ ಗಿಡಗಳನ್ನು ನೆಡುವ ಗುರಿ
Last Updated 29 ಆಗಸ್ಟ್ 2019, 14:20 IST
ಅಕ್ಷರ ಗಾತ್ರ

ಚಾಮರಾಜನಗರ: ಈಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಅವರು ಆರಂಭಿಸಿರುವ ‘ಕಾವೇರಿ ಕೂಗು’ ಎಂಬ ಅಭಿಯಾನಕ್ಕೆ ಇದೇ ಸೆ.3ರಂದು ತಲಕಾವೇರಿಯಲ್ಲಿ ಆರಂಭವಾಗಲಿದೆ.

ಈಶಾ ಫೌಂಡೇಷನ್‌ ಸ್ವಯಂ ಸೇವಕ ಬಿ.ಎಸ್‌.ಸುಬ್ರಹ್ಮಣ್ಯ ಅವರು ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.

‘ಸದ್ಗುರು ಅವರು 2017ರಲ್ಲಿ ನದಿಗಳನ್ನು ರಕ್ಷಿಸಿ (ರ‍್ಯಾಲಿ ಫಾರ್‌ ರಿವರ್ಸ್) ಎಂಬ ಅಭಿಯಾನ ಆರಂಭಿಸಿದ್ದರು. ಎರಡನೇ ಹಂತದಲ್ಲಿ ‘ಕಾವೇರಿ ಕೂಗು’ ಎಂಬ ಅಭಿಯಾನ ಘೋಷಿಸಿದ್ದಾರೆ. ಕಾವೇರಿ ಕೊಳ್ಳದ ಶೇ 87ರಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಕಾವೇರಿ ನದಿಯಲ್ಲಿ ಶೇ 46ರಷ್ಟು ನೀರು ಕಡಿಮೆಯಾಗಿದೆ. ವರ್ಷದಲ್ಲಿ 90ರಿಂದ 100 ದಿನಗಳಷ್ಟು ಮಾತ್ರ ನದಿಯಲ್ಲಿ ನೀರು ಹರಿಯುತ್ತಿದೆ’ ಎಂದು ಹೇಳಿದರು.

‘ಕಾವೇರಿ ನ‌ದಿಯನ್ನು ಮತ್ತೆ ಪುನಶ್ಚೇತನಗೊಳಿಸುವ ಅಗತ್ಯವಿದೆ. ಕಾವೇರಿ ಕೊಳ್ಳ 83 ಸಾವಿರ ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ಪ್ರದೇಶದ ಮೂರನೇ ಒಂದು ಭಾಗದಲ್ಲಿ ಕೃಷಿ ಅರಣ್ಯ ನಿರ್ಮಾಣವಾಗದಿದ್ದರೆ, ನಮ್ಮ ರಾಜ್ಯ ಕೂಡ ಮರಳುಗಾಡು ಇರುವ ರಾಜಸ್ಥಾನ ಆಗಲಿದೆ’ ಎಂದರು.

‘ಹಾಗಾಗಿ, ನದಿಯ ಜಲಾನಯನ ಪ್ರದೇಶಗಳಲ್ಲಿ 12 ವರ್ಷಗಳಲ್ಲಿ 240 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಮೊದಲ ನಾಲ್ಕು ವರ್ಷಗಳಲ್ಲಿ 72 ಕೋಟಿ ಗಿಡಗಳನ್ನು ರೈತರು ತಮ್ಮ ಜಮೀನುಗಳಲ್ಲಿ ನೆಡಲಿದ್ದಾರೆ’ ಎಂದರು.

‘25 ಕಿ.ಮೀ ವ್ಯಾಪ್ತಿಯಲ್ಲಿ ರೈತರಿಗೆ ಗಿಡಗಳನ್ನು ಸಿಗುವಂತೆ ಮಾಡಲಾಗುವುದು. ಇಷ್ಟು ಗಿಡಗಳನ್ನು ಬೆಳೆಸುವ ಜವಾಬ್ದಾರಿ ನಮ್ಮದು. ನೀರಾವರಿ ಹೊಂದಿರುವ ರೈತರು ಉಚಿತವಾಗಿ ಜಮೀನು ನೀಡಿದರೆ, ಅಲ್ಲಿ ನಾವು ಗಿಡಗಳನ್ನು ಬೆಳೆಸುತ್ತೇವೆ’ ಎಂದರು.

ರೈತ ಸಂಪರ್ಕ: ‘ಈಗಾಗಲೇ ಅಭಿಯಾನದ ಬಗ್ಗೆ 7 ಸಾವಿರ ಗ್ರಾಮಗಳಿಗೆ ತೆರಳಿ, ರೈತರನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ನೀಡಲಾಗಿದೆ. 2.70 ಲಕ್ಷ ಜನರನ್ನು ನಾವು ತಲುಪಿದ್ದೇವೆ. ಹಲವು ರೈತರು ಅಭಿಯಾನ ಭಾಗವಾಗಲು ಒಪ್ಪಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ಸಂತೇಮರಹಳ್ಳಿ, ದೇಶವಳ್ಳಿ, ಕೆಸ್ತೂರು, ಕೊತ್ತಲವಾಡಿ, ಉಡಿಗಾಲ, ಹೊನ್ನಹಳ್ಳಿ, ನಾಗವಲ್ಲಿ, ಚಂದಕವಾಡಿ, ಜ್ಯೋತಿಗೌಡನಪುರ, ಕುದೇರು ಸೇರಿದಂತೆ ಹಲವು ಹಳ್ಳಿಗಳಿಗೆ ಭೇಟಿ ನೀಡಿ ರೈತರನ್ನು ಸಂಪರ್ಕಿಸಲಾಗಿದೆ’ ಎಂದರು.

ಫೌಂಡೇಶನ್‌ ಸ್ವಯಂ ಸೇವಕರಾದ ಋಷಬ್‌ ಕುಮಾರ್‌ ಕಶ್ಯಪ್, ಉದಯರವಿ, ಮಮತಾ ಇದ್ದರು.

ಒಂದು ಗಿಡಕ್ಕೆ ₹42:‘ಕ್ರೌಂಡ್‌ ಸೋರ್ಸಿಂಗ್‌ ಮೂಲಕ ದಾನಿಗಳಿಂದ ಹಣ ಸಂಗ್ರಹಿಸಲಾಗುತ್ತದೆ. ಒಂದು ಗಿಡಕ್ಕೆ ₹42 ನೀಡಿದರೆ ಸಾಕು. kannada.cauverycalling.ogr ಮೂಲಕ ನೀಡಬಹುದು. ಗಿಡಗಳನ್ನು ಬೆಳೆಸಿ ರೈತರಿಗೆ ಉಚಿತವಾಗಿ ಹಂಚಲಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೂಡ ರೈತರಿಗೆ ಸಹಾಯಧನ ನೀಡುವ ಭರವಸೆ ನೀಡಿದ್ದಾರೆ’ ಎಂದು ಸುಬ್ರಹ್ಮಣ್ಯ ಹೇಳಿದರು.

ಬೈಕ್‌ ರ‍್ಯಾಲಿ: ‘ಅಭಿಯಾನದ ಅಂಗವಾಗಿ ಸದ್ಗುರು ನೇತೃತ್ವದಲ್ಲಿ ಸೆ.3ರಂದು ತಲಕಾವೇರಿಯಿಂದ ಬೈಕ್‌ ರ‍್ಯಾಲಿ ನಡೆಯಲಿದೆ. ರ‍್ಯಾಲಿಯು ಪು.ಪೂಹಾರ್‌ವರೆಗೆ ತೆರಳಿ ನಂತರ ಚೆನ್ನೈಗೆ ಪಯಣ ಬೆಳೆಸಲಿದೆ. ಈ ದಾರಿಯುದ್ದಕ್ಕೂ ಅಭಿಯಾನದ ಬಗ್ಗೆ ಜನ ಜಾ‌ಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳು ನಡೆಯಲಿವೆ. ಸದ್ಗುರು ಅವರು ಅಭಿಯಾನದ ಬಗ್ಗೆ ತಿಳಿಸಿಕೊಡಲಿದ್ದಾರೆ’ ಎಂದರು.

3ರಂದು ಮಡಿಕೇರಿ (ಕ್ರಿಸ್ಟಲ್‌ ಹಾಲ್‌) 4ರಂದು ಹುಣಸೂರು (ಗೌರಮ್ಮ ಪುಟ್ಟಸ್ವಾಮಪ್ಪ ಕನ್ವೆನ್ಷನ್‌ ಹಾಲ್‌), 5ರಂದು ಮೈಸೂರು (ಬಯಲು ರಂಗ ಮಂದಿರ ಮಾನಸ ಗಂಗೋತ್ರಿ), 6ರಂದು ಮಂಡ್ಯ (ಅಂಬೇಡ್ಕರ್‌ ಭವನ) ಮತ್ತು 8ರಂದು ಬೆಂಗಳೂರಿನಲ್ಲಿ (ತ್ರಿಪುರ ವಾಸಿನಿ, ಅರಮನೆ ಮೈದಾನ) ಬೃಹತ್‌ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT