ಗುಂಡ್ಲುಪೇಟೆ: ‘ಸರ್ವರನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನಮ್ಮ ಸರ್ಕಾರದ ಗುರಿ. ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಜನರ ಜೀವನ ಮಟ್ಟವನ್ನು ಸುಧಾರಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ’ ಎಂದು ವಸತಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾನುವಾರ ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಗಳು ಮಾಡಿವೆ’ ಎಂದರು.
‘ಜನಸಾಮಾನ್ಯರಿಗೆ ನೆರವಾಗುವುದು ಸರ್ಕಾರದ ಉದ್ದೇಶ. ನಾಲ್ಕು ವರ್ಷಗಳ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಲ್ಲಿ 64 ಯೋಜನೆಗಳ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಲಾಗಿದೆ. ರಾಜ್ಯದಲ್ಲಿ ಬಡತನ ನಿರ್ಮೂಲನೆಗಾಗಿ, ಜನರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕಾಗಿದೆ. ಅದಕ್ಕಾಗಿ ಕೇಂದ್ರದಲ್ಲಿ ಮೋದಿ ಸರ್ಕಾರ ರಾಜ್ಯದಲ್ಲಿ ಬೊಮ್ಮಾಯಿ ಅವರ ಕೈ ಬಲಪಡಿಸೋಣ’ ಎಂದು ಕರೆ ನೀಡಿದರು.
ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ‘ಪ್ರಧಾನಿ ಮೋದಿ ಕೆಂಪುಕೋಟೆ ಮೇಲೆ ನಿಂತು ಪ್ರತಿ ಕುಟುಂಬದವರು ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಎಂದಾಗ, ಎಲ್ಲರೂ ಲೇವಡಿ ಮಾಡಿದ್ದರು. ಇದಕ್ಕೆ ಉತ್ತರ ಎಂಬಂತೆ ಈಗ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಿದೆ. ಉಜ್ವಲ ಉಚಿತ ಅನಿಲ ಸಂಪರ್ಕ, ಕಂದಾಯ ಇಲಾಖೆ ಸೇವೆಗಳು ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಲ್ಲಿ ಸಿಗುವ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆ, ಅಂಬೇಡ್ಕರ್ ಅಭಿವೃದ್ಧಿ ಸೇರಿ ವಿವಿಧ ನಿಗಮಗಳಿಂದ ಕೊಳವೆ ಬಾವಿ ಸೌಲಭ್ಯ, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲಾ ಇಲಾಖೆಗಳಿಂದ ಅರ್ಹರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಕೊಟ್ಟಿದೆ’ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಬಿ.ಎಸ್.ಯಡಿಯೂರಪ್ಪ ₹212 ಕೋಟಿ ಬಿಡುಗಡೆ ಮಾಡಿದ ಪರಿಣಾಮ ಇಂದು 22 ಕೆರೆಗಳು ತುಂಬಿ ಜಲಸಮೃದ್ಧಿ ಉಂಟಾಗಿದೆ. ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಯೋಜನೆ ಈಗಾಗಲೇ ಸಿದ್ದವಾಗಿದೆ. ಪಟ್ಟಣಕ್ಕೆ ಸಮರ್ಪಕ ನೀರು ಪೂರೈಸಲು ಕುಡಿಯುವ ನೀರಿನ ಎಕ್ಸ್‌ಪ್ರೆಸ್ ಪೈಪ್‍ಲೈನ್‌ಗೆ ₹156 ಕೋಟಿ ಅಂದಾಜಿನ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಕಬಿನಿ ಕುಡಿಯುವ ನೀರಿನ ಪೈಪ್‌ಲೈನ್ ಮಾರ್ಗದ 32 ಗ್ರಾಮಗಳಿಗೂ ಪ್ರತ್ಯೇಕವಾಗಿ ₹32 ಕೋಟಿ ವೆಚ್ಚದಲ್ಲಿ ಹೊಸ ಪೈಪ್‍ಲೈನ್ ಆಗಲಿದೆ’ ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಿಳೆಯರನ್ನು ಕೇಂದ್ರೀಕರಿಸಿ ಸೌಲಭ್ಯ ನೀಡುತ್ತಿವೆ. ಉಚಿತ ಕೋವಿಡ್ ಲಸಿಕೆ, ಸ್ವಚ್ಛ ಭಾರತ ಅಭಿಯಾನ, ಜಲಜೀವನ್ ಮಿಷನ್, ಪಿಎಂ ಕಿಸಾನ್, ರೈತ ವಿದ್ಯಾನಿಧಿ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿವೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ವಿವರಿಸುವ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎನ್.ನಾರಾಯಣಸ್ವಾಮಿ, ಕಾಡಾ ಅಧ್ಯಕ್ಷ ನಿಜಗುಣರಾಜು, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯ ಕಿರಣ್, ನಾಗೇಶ್, ಶಶಿಧರ್ ಪಿ.ದೀಪು, ಜಿಲ್ಲಾಧಿಕಾರಿ ಡಿ.ಎಸ್.ರಮೆಶ್, ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ಪೂವಿತಾ, ಎಸ್‌ಪಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸರಸ್ವತಿ, ಬಿಜೆಪಿ ಮುಖಂಡ ಪ್ರೊ.ಮಲ್ಲಿಕಾರ್ಜುನಪ್ಪ ಇದ್ದರು.
ಸಾವಿರಾರು ಮಂದಿ ಭಾಗಿ: ಸಮ್ಮೇಳನದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಜಿಲ್ಲೆಯಾದ್ಯಂತ ಪ್ರತಿ ಗ್ರಾಮದಿಂದಲೂ ಫಲಾನುಭವಿಗಳನ್ನು ಕರೆತರಲು ಜಿಲ್ಲಾಡಳಿತ ಬಸ್ ವ್ಯವಸ್ಥೆ ಮಾಡಿತ್ತು.
ಈ ಸಮ್ಮೇಳನ ಮತ್ತು ಮೈಸೂರಿನಲ್ಲಿ ಜೆಡಿಎಸ್ ಸಮಾವೇಶಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಹೋಗಿದ್ದರಿಂದ ಬಸ್‌ಗಳ ಕೊರತೆಯಾಗಿ ಪ್ರಯಾಣಿಕರು ಪರದಾಟ ನಡೆಸಬೇಕಾಯಿತು.
ಶಾಸಕರ ಗೈರು: ಕಾಂಗ್ರೆಸ್‌ನ ಶಾಸಕರಾದ ಚಾಮರಾಜನಗರ ಸಿ.ಪುಟ್ಟರಂಗಶೆಟ್ಟಿ ಹಾಗೂ ಹನೂರಿನ ಆರ್.ನರೇಂದ್ರ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
‘ಜಿಲ್ಲೆಯ ಅಭಿವೃದ್ಧಿಗೆ ಬದ್ಧ’
ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿರುವ ಪ್ರತಿಯೊಂದೂ ಕೆರೆಯಲ್ಲೂ ನೀರು ಇರಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿ ಎರಡು ಹಂತಗಳಲ್ಲಿ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ₹1500 ಕೋಟಿ ಯೋಜನೆ ಸಿದ್ಧವಾಗಿದೆ. ಸರ್ಕಾರ ಇದನ್ನು ಜಾರಿಗೊಳಿಸಲಿದೆ. ಅರಿಸಿನ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಈಗಾಗಲೇ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಸೋಮವಾರ ಈ ಬಗ್ಗೆ ತನ್ನ ನಿರ್ಧಾರ ಘೋಷಿಸಲಿದೆ’ ಎಂದು ಸೋಮಣ್ಣ ಹೇಳಿದರು.
‘ಜಲ ಜೀವನ ಮಿಷನ್ ಅಡಿಯಲ್ಲಿ 929 ಅಂಗನವಾಡಿಗಳಿಗೆ, 236 ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಮೊದಲ ಹಂತದ ಜಲ ಜೀವನ್ ಮಿಷನ್ ಮೊದಲ ಹಂತದಲ್ಲಿ 1,00,294 ಮನೆಗಳಿಗೆ ನೀರಿನ ಸಂಪರ್ಕ ನೀಡಿ ಶೇ 99.3ರಷ್ಟು ಗುರಿ ಸಾಧಿಸಲಾಗಿದೆ. ಎರಡನೇ ಹಂತದಲ್ಲಿ ಶೇ 65ರಷ್ಟು ಪ್ರಗತಿಯಾಗಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.