ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡಿಯುವ ನೀರಿಗೆ ಕೊರತೆಯಾಗಬಾರದು: ಚಾಮರಾಜನಗರ ಡಿ.ಸಿ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ; ಅಧಿಕಾರಿಗಳಿಗೆ ಸೂಚನೆ
Published 13 ಫೆಬ್ರುವರಿ 2024, 16:24 IST
Last Updated 13 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಚಾಮರಾಜನಗರ: ಬೇಸಿಗೆ ವೇಳೆ ಜಿಲ್ಲೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಮಂಗಳವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ‘ತುರ್ತು ಪರಿಹಾರಕ್ಕಾಗಿ ಕೈಗೆತ್ತಿಕೊಳ್ಳಲಾಗುತ್ತಿರುವ ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕ್ರಿಯಾ ಯೋಜನೆ ಅನುಸಾರ ಕಾಮಗಾರಿ ನಡೆಯಬೇಕು. ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗಬಹುದಾದ ಗ್ರಾಮಗಳು ಹಾಗೂ ಪಟ್ಟಣ ಪ್ರದೇಶಗಳಿದ್ದಲ್ಲಿ ಈಗಿನಿಂದಲೇ ನೀರು ಒದಗಿಸಲು ಸಿದ್ದತಾ ಕ್ರಮಗಳನ್ನು ಮಾಡಿಕೊಳ್ಳಬೇಕು’ ಎಂದರು. 

‘ಶುದ್ದ ಕುಡಿಯುವ ನೀರು ಪೂರೈಕೆಯಾಗಬೇಕು. ಓವರ್‌ ಹೆಡ್‌ ಟ್ಯಾಂಕ್, ತೊಂಬೆ, ಇನ್ನಿತರ ಕುಡಿಯುವ ನೀರಿನ ಸಂಗ್ರಹಾಗಾರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶುದ್ದ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿ ಇರಬೇಕು. ನೀರಿನ ಮಾದರಿಗಳನ್ನು ಪರೀಕ್ಷಿಸಿ ಕುಡಿಯಲು ಯೋಗ್ಯವೇ ಎಂದು ಖಾತರಿ ಪಡಿಸಿಕೊಳ್ಳಬೇಕು. ಅಧಿಕಾರಿಗಳು ಖುದ್ದು ಪರಿಶೀಲಿಸಿ, ಆರೋಗ್ಯ ಇಲಾಖೆ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಕುಡಿಯುವ ನೀರಿನ ಮಾದರಿ ಪರೀಕ್ಷೆ ವರದಿಗಳನ್ನು ಪಡೆದುಕೊಳ್ಳಬೇಕು’  ಎಂದರು.

‘ಬೇಸಿಗೆಯಲ್ಲಿ ಕಾಣಿಸಿಕೊಳ್ಳಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ವಿಶೇಷ ಕಣ್ಗಾವಲು ಇಡಬೇಕು. ಕಲುಷಿತ ನೀರು ಮತ್ತು ಆಹಾರದಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ವ್ಯಾಪಕವಾದ ಕ್ರಮಗಳಿಗೆ ಮುಂದಾಗಬೇಕು. ನೈರ್ಮಲ್ಯ ವ್ಯವಸ್ಥೆ ಹಾಗೂ ಆರೋಗ್ಯ ಕಾಳಜಿಗಾಗಿ ಪಾಲಿಸಬೇಕಿರುವ ಸಲಹೆಗಳನ್ನು ಜನರಿಗೆ ನೀಡಬೇಕು’ ಎಂದರು.

ಸಭೆ ಕರೆಯಿರಿ:

‘ತಾಲ್ಲೂಕುಗಳಲ್ಲಿಯೂ ತಹಶೀಲ್ದಾರರು ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಇನ್ನು 10 ದಿನಗಳೊಳಗೆ ಕರೆದು ಕುಡಿಯುವ ನೀರು, ಮೇವು, ಕೃಷಿ ಚಟುವಟಿಕೆಗಳಂತಹ ಇನ್ನಿತರ ಪ್ರಮುಖ ವಿಷಯಗಳನ್ನು ಚರ್ಚಿಸಿ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಈ ಕುರಿತ ವರದಿಯನ್ನು ಸಲ್ಲಿಸಬೇಕು’ ಶಿಲ್ಪಾ ನಾಗ್ ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ತಹಶೀಲ್ದಾರರಾದ ಬಸವರಾಜು, ಮಂಜುಳ, ಗುರುಪ್ರಸಾದ್, ರಮೇಶ್ ಬಾಬು, ಜಯಪ್ರಕಾಶ್, ಜಂಟಿ ಕೃಷಿ ನಿರ್ದೇಶಕ ಎಸ್.ಎಸ್. ಆಬಿದ್, ತೋಟಗಾರಿಕೆ ಉಪನಿರ್ದೇಶಕ ಶಿವಪ್ರಸಾದ್, ಪಶುಸಂಗೋಪನೆ ಇಲಾಖೆಯ  ಉಪನಿರ್ದೇಶಕ ಡಾ. ಹನುಮೇಗೌಡ, ಡಿಎಚ್‌ಒ ಡಾ.ಎಸ್.ಚಿದಂಬರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಧುಸೂದನ್ ಇತರರು ಇದ್ದರು. 

‘ಸರ್ಕಾರಿ ಜಾಗದಲ್ಲಿ ಮೇವು ಬೆಳೆಸಿ’
‘ಜಾನುವಾರುಗಳಿಗೆ ಅವಶ್ಯವಿರುವ ಪ್ರಮಾಣದಲ್ಲಿ ಮೇವು ದಾಸ್ತಾನು ಮಾಡಿಕೊಳ್ಳಬೇಕು. ಅಗತ್ಯವಿರುವೆಡೆ ಸರ್ಕಾರಿ ಭೂಮಿಗಳಲ್ಲಿ ಮೇವು ಬೆಳೆಯಲು ಕ್ರಮವಹಿಸಬೇಕು. ಈಗಾಗಲೇ ಮೇವಿನ ಬೀಜದ ಪೊಟ್ಟಣಗಳನ್ನು ವಿತರಿಸಿರುವ ಪ್ರದೇಶಗಳಲ್ಲಿ ಯಾವ ಪ್ರಮಾಣದಲ್ಲಿ ಮೇವು ಬೆಳೆಯಲಾಗುತ್ತಿದೆ ಎಂಬ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ‍‍ಪಶು ಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT