ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಎಸ್. ಮಹದೇವ ಪ್ರಸಾದ್‌ ಸಾವನ್ನು ನೆನಪಿಸಿದ ಧ್ರುವನಾರಾಯಣ ಹಠಾತ್ ನಿಧನ

ಪ್ರಭಾವಿ ನಾಯಕ ಎಚ್‌.ಎಸ್‌.ಮಹದೇವ ಪ್ರಸಾದ್‌ ಸಾವನ್ನು ನೆನಪಿಸಿದ ಘಟನೆ
Last Updated 11 ಮಾರ್ಚ್ 2023, 14:18 IST
ಅಕ್ಷರ ಗಾತ್ರ

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರ ಹಠಾತ್‌ ಸಾವು ಜಿಲ್ಲೆಯ ಕಾಂಗ್ರೆಸ್‌ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಂಗೆಡಿಸಿದೆ.

ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ಎಚ್‌.ಎಸ್‌.ಮಹದೇವಪ್ರಸಾದ್‌ ಅವರು 2017ರ ಜನವರಿ 3ರ ಮುಂಜಾನೆ ಚಿಕ್ಕಮಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ ಹಠಾತ್‌ ಆಗಿ ನಿಧನರಾಗಿದ್ದರು. ಆಗಲೂ ಜಿಲ್ಲೆಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಘಾತ ಅನುಭವಿಸಿದ್ದರು.

ಧ್ರುವನಾರಾಯಣ ಅವರ ನಿಧನವು ಮಹದೇವ ಪ್ರಸಾದ್‌ ಸಾವನ್ನು ಮತ್ತೆ ನೆನಪಿಸುವಂತೆ ಮಾಡಿದೆ.

‘ನಮ್ಮ ಜಿಲ್ಲೆಯ ಹಣೆಬರಹವೋ ಏನೋ; ಪ್ರಮುಖ, ಪ್ರಭಾವಿ ನಾಯಕರು ಹಠಾತ್‌ ಆಗಿ ನಮ್ಮಿಂದ ಕಣ್ಮರೆಯಾಗುತ್ತಿದ್ದಾರೆ. ಅಂದು ಮಹದೇವಪ‍್ರಸಾದ್‌, ಇಂದು ಧ್ರುವನಾರಾಯಣ‘ ಎಂಬುದು ಶನಿವಾರ ಬಹುತೇಕ ಮುಖಂಡರು, ಕಾರ್ಯಕರ್ತರ ಬಾಯಿಂದ ಕೇಳಿ ಬಂದ ಮಾತು.

ಶನಿವಾರ ಬೆಳಿಗ್ಗೆ ನಿದ್ದೆಯಿಂದ ಎದ್ದಿದ್ದ ಎಲ್ಲ ಕಾಂಗ್ರೆಸ್‌ ಮುಖಂಡರಿಗೆ, ಆಪ್ತರಿಗೆ ಧ್ರುವನಾರಾಯಣ ಸಾವಿನ ಸುದ್ದಿ ಸುನಾಮಿಯಂತೆ ಅಪ್ಪಳಿಸಿತು.

ತೀವ್ರ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಆರಂಭದಲ್ಲಿ ಮುಖಂಡರಿಗೆ ಸಿಕ್ಕಿತ್ತು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು, ಮುಖಂಡರು ಮೈಸೂರಿಗೆ ಹೊರಟಾಗ ದಾರಿ ಮಧ್ಯೆ ನಿಧನವಾರ್ತೆಯೂ ಖಚಿತವಾಯಿತು. 8.45ರ ಸುಮಾರಿಗೆ ಕಾರ್ಯಕರ್ತರಿಗೂ ತಿಳಿಯಿತು.

ನಿಧನದ ಸುದ್ದಿಯನ್ನು ದೃಢಪಡಿಸಲು ಮುಖಂಡರಿಗೆ ಕರೆ ಮಾಡಿದರೆ, ಅಳುತ್ತಾ, ‘ಹೋಗಿಬಿಟ್ಟರು, ಮುಂದೇನೋ ಗೊತ್ತಿಲ್ಲ’ ಎಂದಷ್ಟೇ ಉತ್ತರಿಸಿದರು. ಹೆಚ್ಚಿನ ಮಾತು ಅವರ ಬಾಯಿಂದ ಹೊರಡಲಿಲ್ಲ.

‘ಧ್ರುವನಾರಾಯಣ ಅವರಿಗೆ ಹೃದಯಾಘಾತವಾಗಿದೆ ಎಂಬ ಮಾಹಿತಿ 6.45ಕ್ಕೆ ಬಂತು. 7.30ರ ಹೊತ್ತಿಗೆ ಕೊನೆಯುಸಿರೆಳೆದಿರುವ ವಾರ್ತೆ ಸಿಕ್ಕಿತು’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧ್ರುವನಾರಾಯಣ ಆರೋಗ್ಯವಾಗಿದ್ದರು. ನಂಜನಗೂಡು ಕ್ಷೇತ್ರದಾದ್ಯಂತ ಸುತ್ತಾಟ ಆರಂಭಿಸಿದ್ದರು. ಮಧುಮೇಹ ಇದ್ದರೂ, ನಿಯಂತ್ರಣದಲ್ಲಿತ್ತು. ಹಠಾತ್‌ ಆಗಿ ಅಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಈ ನೋವು ಮರೆಯಲು ಸಾಧ್ಯವೇ ಇಲ್ಲ’ ಎಂದು ಅವರ ಒಡನಾಡಿ, ಕಾಂಗ್ರೆಸ್‌ ಮುಖಂಡ ಕೆ.ಪಿ.ಸದಾಶಿವಮೂರ್ತಿ ಕಣ್ಣೀರಾದರು.

ಶಕ್ತಿ ತುಂಬಿದ್ದ ನಾಯಕ: ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ನಿಧನದ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದ ನಾಯಕ ಧ್ರುವನಾರಾಯಣ. ತಮ್ಮದೇ ಬೆಂಬಲಿಗರನ್ನು ಹೊಂದಿದ್ದರು. ಹಾಗಿದ್ದರೂ, ಬಣ ರಾಜಕೀಯ ಎಂದು ಮಾಡುತ್ತಿರಲ್ಲಿ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದರೂ, ತಕ್ಷಣ ಸ್ಪಂದಿಸಿ ಸರಿ ಮಾಡುತ್ತಿದ್ದರು.

ಮೈಸೂರಿಗೆ ದೌಡು: ಸಾವಿನ ಸುದ್ದಿ ತಿಳಿಯುತ್ತಲೇ ಚಾಮರಾಜನಗರ ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಮೈಸೂರಿಗೆ ದೌಡಾಯಿಸಿದರು. ಮೃತ ಶರೀರವನ್ನು ಕಂಡು ರೋದಿಸಿದರು.

ಪಕ್ಷಭೇದ ಮರೆತು ಕಂಬನಿ ಮಿಡಿದ ಜನ

ಧ್ರುವನಾರಾಯಣ ಅವರ ನಿಧನಕ್ಕೆ ಇಡೀ ಜಿಲ್ಲೆಯೇ ಪಕ್ಷಭೇದ, ಜಾತಿ ಭೇದ ಮರೆತು ಕಂಬನಿ ಮಿಡಿದಿದೆ.

ಕಾಂಗ್ರೆಸ್‌ ಮಾತ್ರವಲ್ಲದೇ ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ, ಎಎಪಿ ಮುಖಂಡರು ಕೂಡ ಸಾವಿಗೆ ಮರುಗಿದರು. ಕಾಂಗ್ರೆಸ್‌ ಕಾರ್ಯಕರ್ತರು ಮಾತ್ರವಲ್ಲದೇ, ಎಲ್ಲ ಪಕ್ಷಗಳ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೂಡ ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಧ್ರುವನಾರಾಯಣ ಚಿತ್ರ ಹಾಕಿ, ಶೋಕ ಸಂದೇಶಗಳನ್ನು ಬರೆದು, ಅಗಲಿದ ನಾಯಕನ ಆತ್ಮಕ್ಕೆ ಶಾಂತಿ ಕೋರಿದರು.

ಸಜ್ಜನ ರಾಜಕಾರಣಿಯಾಗಿದ್ದ ಕ್ರಿಯಾಶೀಲ ವ್ಯಕ್ತಿತ್ವದ, ಮೃದುಭಾಷಿ ಧ್ರುವನಾರಾಯಣ ಅವರ ಅಕಾಲಿಕ ಮರಣ ದುಃಖಕರ
-ಜಿ.ನಾರಾಯಣ ಪ್ರಸಾದ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT