ಶುಕ್ರವಾರ, ಫೆಬ್ರವರಿ 21, 2020
18 °C
ಮಹದೇಶ್ವರ ಬೆಟ್ಟದ್ದೇ ಸಿಂಹಪಾಲು, ಪ್ರಕೃತಿ ಸೊಬಗು ಆಕರ್ಷಣೆಯ ಮೂಲ, ವಿದೇಶಿಯರ ಸಂಖ್ಯೆಯಲ್ಲೂ ಏರಿಕೆ

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಪ್ರವಾಸಿಗರ ಸಂಖ್ಯೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಗಡಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೇಶಿ ಪ್ರವಾಸಿಗರಲ್ಲದೆ, ವಿದೇಶಿ ಪ್ರವಾಸಿಗರ ಸಂಖ್ಯೆಯೂ ವೃದ್ಧಿಯಾಗುತ್ತಿದೆ. 

ಪ್ರವಾಸೋದ್ಯಮ ಇಲಾಖೆಯ ಬಳಿ ಇರುವ ಅಂಕಿ ಅಂಶಗಳ ಆಧಾರದಲ್ಲಿ ಹೇಳುವುದಾದರೆ, ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 20 ಲಕ್ಷದಷ್ಟು ಹೆಚ್ಚಾಗಿದೆ. 2017ರಲ್ಲಿ 47,83,009 ಮಂದಿ ಭೇಟಿ ನೀಡಿದ್ದರೆ, 2018ರಲ್ಲಿ ಈ ಸಂಖ್ಯೆ 60,14,779ಕ್ಕೆ ಏರಿತ್ತು. ಕಳೆದ ವರ್ಷ ಭೇಟಿ ನೀಡಿದವರ ಸಂಖ್ಯೆ 69,95,575 ಹೆಚ್ಚಿದೆ. 

ಮಹದೇಶ್ವರ ಬೆಟ್ಟದ್ದು ಸಿಂಹಪಾಲು

ಒಟ್ಟು ಪ್ರವಾಸಿಗರ ಸಂಖ್ಯೆಯಲ್ಲಿ ಸಿಂಹಪಾಲು ಮಂದಿ ಮಹದೇಶ್ವರ ಬೆಟ್ಟಕ್ಕೆ ಬಂದವರು. ಪವಾಡಪುರುಷ ಮಾದಪ್ಪನ ದರ್ಶನಕ್ಕೆ ಬರುವವರ ಸಂಖ್ಯೆಯಲ್ಲಿ ಪ್ರತಿ ತಿಂಗಳೂ ಹೆಚ್ಚಳವಾಗುತ್ತದೆ. 2018–2019ರ ನಡುವಿನ ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದವರ ಸಂಖ್ಯೆಯಲ್ಲಿ 15 ಲಕ್ಷದಷ್ಟು ಹೆಚ್ಚಳವಾಗಿದೆ. 2017ರಲ್ಲಿ 31.66 ಲಕ್ಷ ಮಂದಿ ಬೆಟ್ಟಕ್ಕೆ ಭೇಟಿ ನೀಡಿದ್ದರೆ, 2018ರಲ್ಲಿ 34.25 ಲಕ್ಷ ಮಂದಿ ಕ್ಷೇತ್ರಕ್ಕೆ ಬಂದಿದ್ದರು. ಕಳೆದ ವರ್ಷ ಈ ಸಂಖ್ಯೆ 49.32 ಲಕ್ಷಕ್ಕೆ ತಲುಪಿದೆ. 

ಪ್ರಕೃತಿಗೆ ಮಾರುಹೋದ ಜನ

ಮಹದೇಶ್ವರ ಬೆಟ್ಟದ ನಂತರ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಕನಕಗಿರಿ, ಭರಚುಕ್ಕಿ ಮುಂಚೂಣಿಯಲ್ಲಿವೆ. ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಕನಕಗಿರಿಗಳಲ್ಲಿ ದೇವಾಲಯಗಳಿದ್ದರೂ, ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿಗೂ ಭೇಟಿ ನೀಡುವವರ ಸಂಖ್ಯೆಯಲ್ಲೂ ಹೆಚ್ಚಳ ಆಗುತ್ತಿರುವುದು ಗಮನಾರ್ಹ. ಬಿಳಿಗಿರಿರಂಗನಬೆಟ್ಟಕ್ಕೆ 2019ರಲ್ಲಿ 8.13 ಲಕ್ಷ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ 5.02 ಲಕ್ಷ ಪ್ರವಾಸಿಗರು (ಡಿಸೆಂಬರ್‌ ಅಂಕಿ ಅಂಶ ಸಿಕ್ಕಿಲ್ಲ) ಭೇಟಿ ನೀಡಿದ್ದಾರೆ. 

ಮಳೆಗಾಲದಲ್ಲಿ ಹಾಗೂ ಕಾವೇರಿ ನದಿ ಮೈತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ಭರಚುಕ್ಕಿ ಜಲಪಾತ ವೀಕ್ಷಿಸಲು ಹೆಚ್ಚಿನ ಜನರು ಬರುತ್ತಾರೆ. ಎರಡು ವರ್ಷಗಳಿಂದೀಚೆಗೆ ಉತ್ತಮ ಮಳೆ ಆಗುತ್ತಿರುವುದರಿಂದ ಮಳೆಗಾಲ, ಚಳಿಗಾಲದಲ್ಲಿ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. 

ಪ್ರಾಕೃತಿಕವಾಗಿ ಆಕರ್ಷಣೀಯ ವಾಗಿದ್ದರೂ, ಹನೂರು ತಾಲ್ಲೂಕಿನ ತುತ್ತತುದಿಯತ್ತಿರುವ ಹೊಗೇನಕಲ್‌ ಜಲಪಾತಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆ. ಕಳೆದ ವರ್ಷ 40,013 ಮಂದಿಯಷ್ಟೇ ಹೊಗೇನಕಲ್‌ನ ಕೊರಕಲು ಕಲ್ಲುಗಳಲ್ಲಿ ಕಾವೇರಿ ನದಿಯ ರುದ್ರನರ್ತನವನ್ನು ಕಣ್ತುಂಬಿ ಕೊಂಡಿದ್ದಾರೆ. 

ಜಿಲ್ಲೆಯ ಮತ್ತೊಂದು ಆಕರ್ಷಣೀಯ ಕೇಂದ್ರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 2019ರಲ್ಲಿ ಭೇಟಿ ನೀಡಿದವರ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ ಕಾಡಿಗೆ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದ ಕಾರಣಕ್ಕೋ ಏನೋ, ಕಳೆದ ವರ್ಷ 1.34 ಲಕ್ಷ ಮಂದಿ ಭೇಟಿ ನೀಡಿದ್ದರು. 2018ರಲ್ಲಿ 1.44 ಲಕ್ಷ ಪ್ರವಾಸಿಗರು ಬಂಡೀಪುರದ ಸಫಾರಿಯ ಸಂತೋಷವನ್ನು ಸವಿದಿದ್ದರು. ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಸಫಾರಿ ವ್ಯವಸ್ಥೆ ಇದ್ದರೂ, ಇದು ಇನ್ನೂ ಹೆಚ್ಚು ಪ್ರವಾಸಿಗರ ಗಮನ ಸೆಳೆದಿಲ್ಲ. ವಾರ್ಷಿಕವಾಗಿ ಇಲ್ಲಿಗೆ ಭೇಟಿ ನೀಡುತ್ತಿರುವವ ಸಂಖ್ಯೆ 3,500 ದಾಟಿಲ್ಲ. ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಬಳಿಯ ಹುಲುಗನಮುರಡಿ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯೂ 49 ಸಾವಿರದ ಆಸುಪಾಸಿನಲ್ಲಿದೆ.

ವಿದೇಶಿಯರ ಸಂಖ್ಯೆ ಹೆಚ್ಚಳ

ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಬರುವ ವಿದೇಶಿಯರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕಳೆದ ವರ್ಷ 4,843 ಮಂದಿ ಭೇಟಿ ನೀಡಿದ್ದಾರೆ. 2018ಕ್ಕೆ ಹೋಲಿಸಿದರೆ 579 ಮಂದಿ ಹೆಚ್ಚು ವಿದೇಶಿಯರು ಜಿಲ್ಲೆಗೆ ಬಂದಿದ್ದಾರೆ. 

ಹೆಚ್ಚಿನ ವಿದೇಶಿ ಪ್ರಜೆಗಳು ಬಿಳಿಗಿರಿರಂಗನಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರಕ್ಕೆ ಭೇಟಿ ನೀಡುತ್ತಾರೆ.

ಪ್ರವಾಸಿ ತಾಣಗಳ ಅಭಿವೃದ್ಧಿ ಪಡಿಸಲಿ

ಪ‍್ರವಾಸೋದ್ಯಮ ಇಲಾಖೆಯು ಪ್ರಮುಖವಾಗಿ 9 ತಾಣಗಳನ್ನು ಮಾತ್ರ ಪಟ್ಟಿ ಮಾಡಿ, ಅಲ್ಲಿಗೆ ಭೇಟಿ ನೀಡುವವರ ಮಾಹಿತಿಯನ್ನು ಸಂಗ್ರಹಿಸಿಡುತ್ತದೆ. 

ಜಿಲ್ಲೆಯಲ್ಲಿ ಇನ್ನೂ ಹಲವು ಐತಿಹಾಸಿಕ ತಾಣಗಳಿದ್ದು, ಪ್ರವಾಸಿ ಕೇಂದ್ರಗಳಾಗಿ ಗುರುತಿಸುವ ಎಲ್ಲ ಅರ್ಹತೆಗಳೂ ಇವೆ. ತಾಣಗಳ ಬಗ್ಗೆ ಗೊತ್ತಿರುವವರು ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಅದು ದಾಖಲಾಗುತ್ತಿಲ್ಲ. 

ಈಗ ಇರುವ ಪ್ರವಾಸಿ ತಾಣಗಳಲ್ಲೇ ಕೆಲವು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಇವುಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದರೆ, ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳುತ್ತಾರೆ ಪ್ರವಾಸಿಗರು.

***

ಜಿಲ್ಲೆಯಲ್ಲಿ 40 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡುತ್ತಿದ್ದೇವೆ

-ಜನಾರ್ದನ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು