ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ ನಗರಸಭೆ | ‘ಕಮಲ’ ಕಿಲಕಿಲ; ‘ಕೈ’ ವಿಲವಿಲ

ಮತ್ತೆ ಅಧಿಕಾರ ಹಿಡಿದ ಬಿಜೆಪಿ: ಅಧ್ಯಕ್ಷರಾಗಿ ಸುರೇಶ್‌, ಉಪಾಧ್ಯಕ್ಷರಾಗಿ ಮಮತಾ ಆಯ್ಕೆ: ಕಾಂಗ್ರೆಸ್‌ಗೆ ತೀವ್ರ ಮುಖಭಂಗ
Published : 10 ಸೆಪ್ಟೆಂಬರ್ 2024, 6:26 IST
Last Updated : 10 ಸೆಪ್ಟೆಂಬರ್ 2024, 6:26 IST
ಫಾಲೋ ಮಾಡಿ
Comments

ಚಾಮರಾಜನಗರ: ಬಹುಮತವಿದ್ದರೂ ಕೊಳ್ಳೇಗಾಲ ನಗರಸಭೆ ಹಾಗೂ ಗುಂಡ್ಲುಪೇಟೆ ಪುರಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ, ಚಾಮರಾಜನಗರ ನಗರಸಭೆಯನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಂಡಿದೆ.

ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕು ಎಂದು ಪಣತೊಟ್ಟು ಅಖಾಡಕ್ಕಿಳಿದಿದ್ದ ಕಾಂಗ್ರೆಸ್‌ ಸಂಸದ ಸುನೀಲ್ ಬೋಸ್‌ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ಅವರನ್ನು ಮಣಿಸುವ ಮೂಲಕ ನಗರಸಭೆಯಲ್ಲಿ ಮತ್ತೊಮ್ಮೆ ಕಮಲ ಅರಳುವಂತೆ ಮಾಡಿದೆ. ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐ ಮೈತ್ರಿಕೂಟ ಹೆಣೆದ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಅರಳಿದ ಕಮಲ:

ಸೋಮವಾರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ 29ನೇ ವಾರ್ಡ್‌ನ ಸುರೇಶ್ ಅಧ್ಯಕ್ಷರಾಗಿ, 22ನೇ ವಾರ್ಡ್‌ನ ಸದಸ್ಯೆ ಮಮತಾ ಬಾಲಸುಬ್ರಹ್ಮಣ್ಯ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಇಬ್ಬರೂ ತಲಾ 15 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.

ಕಾಂಗ್ರೆಸ್‌ಗೆ ಮುಖಭಂಗ:

ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 31ನೇ ವಾರ್ಡ್‌ನ ಆರ್‌.ಎಂ.ರಾಜಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 13ನೇ ವಾರ್ಡ್‌ ಸದಸ್ಯ ಅಬ್ರಾರ್ ಅಹಮದ್‌ ತಲಾ 14 ಮತಗಳನ್ನು ಪಡೆದು ಒಂದು  ಮತದಿಂದ ಪರಾಭವಗೊಂಡರು. 

‘ಕೈ’ ಕೊಟ್ಟ ಮೂವರು ಸದಸ್ಯರು:

ಕಾಂಗ್ರೆಸ್‌ನಿಂದ ಗೆದ್ದಿದ್ದ 1ನೇ ವಾರ್ಡ್‌ನ (ಸೋಮವಾರಪೇಟೆ) ಸದಸ್ಯೆ ಎಸ್.ನೀಲಮ್ಮ, 15ನೇ ವಾರ್ಡ್‌ (ಬಾಬು ಜಗಜೀವನರಾಂ ಬಡಾವಣೆ) ಸದಸ್ಯ ಆರ್‌.ಪಿ.ನಂಜುಡಸ್ವಾಮಿ, 24ನೇ ವಾರ್ಡ್‌ (ಜಾಲಹಳ್ಳಿ ಹುಂಡಿ) ಸದಸ್ಯೆ ಭಾಗ್ಯಮ್ಮ ಚುನಾವಣೆಗೆ ಗೈರು ಹಾಜರಾಗಿದ್ದರಿಂದ ಹಾಗೂ 16ನೇ ವಾರ್ಡ್ (ರೈಲ್ವೆ ಬಡಾವಣೆ) ಸದಸ್ಯೆ ಬಿ.ಎಸ್‌. ಚಂದ್ರಕಲಾ ಅಡ್ಡ ಮತದಾನ ಮಾಡಿದ್ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಬೇಕಾಯಿತು. ಸ್ವಪಕ್ಷೀಯರೇ ಕಾಂಗ್ರೆಸ್‌ ಗೆಲುವಿಗೆ ಅಡ್ಡಿಯಾದರು.

ತಲೆಕೆಳಗಾದ ಲೆಕ್ಕಾಚಾರ:

ಕಾಂಗ್ರೆಸ್‌ನ 8, ಎಸ್‌ಡಿಪಿಐ 6, ಓರ್ವ ಪಕ್ಷೇತರ ಸದಸ್ಯ, ಸಂಸದರು, ಶಾಸಕರ ಮತಗಳೊಂದಿಗೆ ಗೆಲುವಿಗೆ ಸರಳ ಬಹುಮತ ಹೊಂದಿದ್ದ ಕಾಂಗ್ರೆಸ್‌ ಲೆಕ್ಕಾಚಾರವನ್ನು ಪಕ್ಷದ ಸದಸ್ಯರೇ ತಲೆಕೆಳಗೆ ಮಾಡಿದರು. 17ರ ಮ್ಯಾಜಿಕ್ ನಂಬರ್‌ ಮುಟ್ಟಲು ಹೊರಟ ಕಾಂಗ್ರೆಸ್‌ 15 ಮತಗಳನ್ನು ಪಡೆಯಲಷ್ಟೆ ಶಕ್ತವಾಯಿತು. ಈ ಮೂಲಕ ಬಿಜೆಪಿ ಸತತ ಎರಡನೇ ಬಾರಿಗೆ ನಗರಸಭೆಯ ಅಧಿಕಾರ ಚುಕ್ಕಾಣಿ ಹಿಡಿಯಿತು.

ಸಂಭ್ರಮಾಚರಣೆ:

ಬಿಜೆಪಿ ಗೆಲುವು ಘೋಷಣೆಯಾಗುತ್ತಿದ್ದಂತೆ ಹೊರಗೆ ನಿಂತಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದರು. ಪರಸ್ಪರ ಸಿಹಿ ತಿನಿಸಿ ಗೆಲುವಿನ ಖುಷಿ ಅನುಭವಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷೆಗೆ ಹೂವಿನ ಮಾಲೆ ಹಾಕಿ ಮೆರವಣಿಗೆ ನಡೆಸಿದರು.

ವೀಲ್‌ಚೇರ್‌ನಲ್ಲಿ ಬಂದು ಮತದಾನ:

ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಸದಸ್ಯ ಮಹದೇವಯ್ಯ ವೀಲ್‌ಚೇರ್‌ನಲ್ಲಿಯೇ ಮತದಾನ ಮಾಡಲು ಬಂದಿದ್ದರು. ಬಳಿಕ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಹಾಕಿ ತೆರಳಿದರು.

ಮತದಾನ ಮಾಡಲು ವೀಲ್‌ಚೇರ್‌ನಲ್ಲಿ ಬಂದ ಬಿಜೆಪಿ ಸದಸ್ಯ ಮಹದೇವಯ್ಯ
ಮತದಾನ ಮಾಡಲು ವೀಲ್‌ಚೇರ್‌ನಲ್ಲಿ ಬಂದ ಬಿಜೆಪಿ ಸದಸ್ಯ ಮಹದೇವಯ್ಯ
ಸುರೇಶ್‌ ಚಾಮರಾಜನಗರ ನಗರಸಭೆ ಅಧ್ಯಕ್ಷ
ಸುರೇಶ್‌ ಚಾಮರಾಜನಗರ ನಗರಸಭೆ ಅಧ್ಯಕ್ಷ
ಸುನೀಲ್‌ ಬೋಸ್‌
ಸುನೀಲ್‌ ಬೋಸ್‌
ಸಿ.ಪುಟ್ಟರಂಗಶೆಟ್ಟಿ
ಸಿ.ಪುಟ್ಟರಂಗಶೆಟ್ಟಿ
ಸಿ.ಎಸ್‌.ನಿರಂಜನಕುಮಾರ್‌
ಸಿ.ಎಸ್‌.ನಿರಂಜನಕುಮಾರ್‌

ಕೈ ಎತ್ತುವ ಮೂಲಕ ಮತದಾನ ಮಾಡಿದ ಸದಸ್ಯರು 31 ಸದಸ್ಯರ ಬಲ: 27 ಸದಸ್ಯರಿಂದ ಮತದಾನ ಒಂದು ಮತದಿಂದ ಸೋಲನುಭವಿಸಿದ ಕಾಂಗ್ರೆಸ್‌

ಚುನಾವಣೆ ಪ್ರಕ್ರಿಯೆ ಹೀಗಿತ್ತು...

ಜಿಲ್ಲಾಧಿಕಾರಿ ನಿರ್ದೇಶನದಂತೆ ಸೋಮವಾರ ಚಾಮರಾಜನಗರ ನಗರಸಭೆಗೆ ಚುನಾವಣೆ ನಿಗದಿಪಡಿಸಲಾಗಿತ್ತು. ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 1 ರಿಂದ 1.10ರವರೆಗೆ ನಾಮಪತ್ರಗಳ ಪರಿಶೀಲನೆ 1.10ರಿಂದ 1.15ರವೆಗೆ ನಾಪಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. 1.15 ರಿಂದ ಮತದಾನ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ತಲಾ ಎರಡು ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐನಿಂದ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರು. ತಲಾ 15 ಮತಗಳನ್ನು ಪಡೆದ ಬಿಜೆಪಿಯ ರಾಜಪ್ಪ ಹಾಗೂ ಮಮತಾ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಮಹೇಶ್‌ ಫಲಿತಾಂಶ ಘೋಷಿಸಿದರು.

ಕಾಂಗ್ರೆಸ್ ಪರ ಮತ ಹಾಕಿದವರು

ಚಿನ್ನಮ್ಮ (ವಾರ್ಡ್‌ ನಂ 14) –ಕಲಾವತಿ (ವಾರ್ಡ್‌ ನಂ 13) –ಎನ್‌.ಶಾಂತಿ (ವಾರ್ಡ್‌ ನಂ 18) –ಮಹೇಶ್‌ (ವಾರ್ಡ್‌ ನಂ 9) –ಮೊಹಮ್ಮದ್ ಅಮೀಕ್ (ವಾರ್ಡ್‌ ನಂ 3) –ಅಬ್ರಾರ್ ಅಹಮದ್‌ (ವಾರ್ಡ್‌ ನಂ 12) –ತೌಸಿಯಾ ಬಾನು (ವಾರ್ಡ್ ನಂ 5) –ಅಪ್ಸರ್ ಪಾಷಾ (ವಾರ್ಡ್‌ ನಂ 6) –ಕಲೀಂ ಉಲ್ಲ(ವಾರ್ಡ್ ನಂ 4) –ಪುಟ್ಟರಂಗ ಶೆಟ್ಟಿ(ಶಾಸಕರು) –ಸುನೀಲ್ ಬೋಸ್‌(ಸಂಸದರು)

ಅಡ್ಡ ಮತದಾನ ಮಾಡಿದವರು

ಬಿ.ಎಸ್‌.ಚಂದ್ರಕಲಾ(16ನೇ ವಾರ್ಡ್) –ಮಹದೇವಯ್ಯ (30ನೇ ವಾರ್ಡ್‌)

ಚುನಾವಣೆಗೆ ಗೈರಾದವರು

ಎಸ್.ನೀಲಮ್ಮ (1ನೇ ವಾರ್ಡ್‌) ಆರ್‌.ಪಿ.ನಂಜುಡಸ್ವಾಮಿ (15ನೇ ವಾರ್ಡ್‌) ಭಾಗ್ಯಮ್ಮ (24ನೇ ವಾರ್ಡ್‌)

ಬಿಜೆಪಿ ಪರ ಮತ ಹಾಕಿದವರು

ಸುದರ್ಶನ ಗೌಡ (ವಾರ್ಡ್‌ ನಂ 21) ಸುರೇಶ್‌ (ವಾರ್ಡ್‌ ನಂ 28) ಮಮತಾ ಬಾಲಸುಬ್ರಹ್ಮಣ್ಯ (ವಾರ್ಡ್‌ ನಂ 22) ಸಿ.ಎಂ.ಆಶಾ (ವಾರ್ಡ್‌ ನಂ 7) ಗೌರಿ (ವಾರ್ಡ್‌ ನಂ 2) ಸಿ.ಎಂ.ಶಿವರಾಜ್‌ (19ನೇ ವಾರ್ಡ್‌) ಗಾಯತ್ರಿ (ವಾರ್ಡ್‌ ನಂ 23 ) ಪಿ.ಸುಧಾ(ವಾರ್ಡ್‌ ನಂ 28) ಎಂ.ಎಸ್‌.ಕುಮುದಾ(ವಾರ್ಡ್‌ ನಂ 26) ಲೋಕೇಶ್ವರಿ (ವಾರ್ಡ್‌ ನಂ 25) ಸಿ.ಜಿ.ಚಂದ್ರಶೇಖರ್ (ವಾರ್ಡ್‌ ನಂ 20) ಕೆ.ರಾಘವೇಂದ್ರ (ವಾರ್ಡ್‌ ನಂ 8) ಮಂಜುನಾಥ್‌ (ವಾರ್ಡ್‌ ನಂ 11) ಎಂ.ಮನೋಜ್ ಪಟೇಲ್‌ (ವಾರ್ಡ್‌ ನಂ 10) ಚಂದ್ರಕಲಾ (ವಾರ್ಡ್‌ ನಂ 16)

‘ಕುತಂತ್ರ ರಾಜಕಾರಣ’ ಕಾಂಗ್ರೆಸ್‌ನಿಂದ ಗೆದ್ದಿದ್ದ ಮೂವರು ಸದಸ್ಯರು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಿದ ಬಿಜೆಪಿ ಕುತಂತ್ರ ರಾಜಕಾರಣ ಮಾಡಿದೆ. ಪಕ್ಷದ ವಿಪ್‌ ಉಲ್ಲಂಘಿಸಿದ ಮೂವರು ಸದಸ್ಯರ ಸದಸ್ಯತ್ವ ಅನರ್ಹತೆಗೊಳಿಸಲು ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಪಕ್ಷದಿಂದಲೂ ಉಚ್ಛಾಟಿಸುವಂತೆ ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡಲಾಗುವುದು. ರಾಜಕಾರಣ ಹೊರತಾಗಿ ಚಾಮರಾಜನಗರದ ಅಭಿವೃದ್ಧಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರು ಶ್ರಮಿಸಬೇಕು.
–ಸುನೀಲ್ ಬೋಸ್‌ ಸಂಸದ
‘ತಕ್ಕ ಪಾಠ’ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಅಡ್ಡಮತದಾನ ಮಾಡಿದ ಸದಸ್ಯೆಗೆ ಹಾಗೂ ಚುನಾವಣೆಗೆ ಗೈರಾದ ಮೂವರ ವಿರುದ್ಧ ಉಚ್ಛಾಟನೆ ಹಾಗೂ ಸದಸ್ಯತ್ವ ಅನರ್ಹತೆಯ ಕ್ರಮ ಜರುಗಿಸಲಾಗುವುದು. ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸಲಾಗುವುದು.
–ಪುಟ್ಟರಂಗಶೆಟ್ಟಿ ಶಾಸಕ
- ‘ಕಾಂಗ್ರೆಸ್‌ ಕುತಂತ್ರಕ್ಕೆ ಫಲ ಸಿಗಲಿಲ್ಲ’ ಗುಂಡ್ಲುಪೇಟೆ ಪುರಸಭೆ ಹಾಗೂ ಕೊಳ್ಳೇಗಾಲ ನಗರಸಭೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ಪಿತೂರಿ ಮಾಡಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಚಾಮರಾಜನಗರ ನಗರಭೆಯಲ್ಲೂ ಅಧಿಕಾರ ಹಿಡಿಯಲು ಜಿಲ್ಲಾಧಿಕಾರಿ ಮೂಲಕ ಬಿಎಸ್‌ಪಿ ಸದಸ್ಯನ ಸದ್ಯತ್ವ ಅನರ್ಹಗೊಳಿಸಿತು. ಆದರೆ ಕಾಂಗ್ರೆಸ್‌ನ ಕುತಂತ್ರ ರಾಜಕಾರಣ ಫಲ ನೀಡಲಿಲ್ಲ. ಬಿಜೆಪಿ ವಿಜಯ ಪತಾಕೆ ಹಾರಿಸಿದೆ.
–ಸಿ.ಎಸ್‌.ನಿರಂಜನಕುಮಾರ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
- ಸಮರ್ಪಕ ಕಸ ವಿಲೇವಾರಿಗೆ ಒತ್ತು ನಗರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಹಾಗೂ ಸಮರ್ಪಕ ಕಸ ವಿಲೇವಾರಿಗೆ ಒತ್ತು ನೀಡಲಾಗುವುದು. ಆಡಳಿತ ಯಂತ್ರಕ್ಕೆ ಚುರುಕು ನೀಡಲಾಗುವುದು.
–ಸುರೇಶ್ ನಗರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT