ಚಾಮರಾಜನಗರ: ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 108ನೇ ಜಯಂತಿ ಮಹೋತ್ಸವದ ಅಂಗವಾಗಿ ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಮೈಸೂರಿನ ಜೆಎಸ್‌ಎಸ್ ಕಲಾ ಮಂಟಪ ಹಾಗೂ ಚಾಮರಾಜನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ನಡೆದ ನಾಲ್ಕು ದಿನಗಳ ಮಕ್ಕಳ ರಾಷ್ಟ್ರೀಯ ರಂಗೋತ್ಸವಕ್ಕೆ ಭಾನುವಾರ ತೆರೆ ಬಿದ್ದಿದೆ.
ಕೊನೆಯ ದಿನವಾದ ಭಾನುವಾರ ಬೆಂಗಳೂರಿನ ಬುಗುರಿ ತಂಡದ ಕಲಾವಿದರು, ‘ಸರ್, ಮೇಡಂ! ಇದು ಇಲ್ಲೆ ಎಂಗ ಡ್ರಾಮಾ ಎಂಗ ಡ್ರಾಮಾ ರೊಂಬಾ ಸೀರಿಯಸ್’ ಎಂಬ ತಮಿಳು ಮತ್ತು ಕನ್ನಡ ಭಾಷೆ ಮಿಶ್ರಿತ ನಾಟಕವನ್ನು ಅಭಿನಯಿಸಿ ಗಮನಸೆಳೆದರು.
ಇದರ ಬಳಿಕ, ಮಹಾರಾಷ್ಟ್ರದ ಗೋಷ್ಟರಂಗ್ ತಂಡದ ಕಲಾವಿದರು ‘ಬರ್ತ್‌ಡೇ ಚಾಕಲೇಟ್ ಮತ್ತು ಗೀತ್ ಕಾ ಕಮಾಲ್’ ಎಂಬ ಹಿಂದಿ ನಾಟಕವನ್ನು ಪ್ರದರ್ಶಿಸಿದರು.
ಮೊದಲ ಪ‍್ರಯತ್ನ: ಜಿಲ್ಲೆಯಲ್ಲಿ ನಾಟಕ ಪ್ರದರ್ಶನಗಳು ನಿಯಮಿತವಾಗಿ ನಡೆಯುತ್ತಿದ್ದರೂ, ರಾಷ್ಟ್ರೀಯ ಮಟ್ಟದ ನಾಟಕೋತ್ಸವ ನಡೆದಿರುವುದು ಇದೇ ಮೊದಲು. ಈ ಬಾರಿಯ ರಂಗೋತ್ಸವದಲ್ಲಿ ರಾಜ್ಯದ ತಂಡಗಳಲ್ಲದೆ ಅಹಮದಾಬಾದ್, ದೆಹಲಿ, ಮಹಾರಾಷ್ಟ್ರದ ತಂಡಗಳು ಭಾಗವಹಿಸಿದ್ದು ವಿಶೇಷ.
ತುಂಬಿದ ರಂಗಮಂದಿರ: ನಾಟಕೋತ್ಸವಕ್ಕೆ ಪ್ರೇಕ್ಷಕರ ಕೊರತೆ ಕಾಡಲಿಲ್ಲ. ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಕಲಾಸಕ್ತರು ಪ್ರತಿ ದಿನ ನಾಟಕ ವೀಕ್ಷಿಸಿದ್ದು, ರಂಗ ಮಂದಿರ ಬಹುತೇಕ ಭರ್ತಿಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.