ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪರೀಕ್ಷೆಗೆ ತೆರಳಲು ಸಮಸ್ಯೆ: ಸೋಂಕು ಉಲ್ಬಣ

ರೋಗ ಲಕ್ಷಣಗಳಿದ್ದರೂ ವಾಹನಗಳಿಲ್ಲದೇ ಸೋಂಕಿತರ ಪರದಾಟ: ಸಮಸ್ಯೆ ಪರಿಹರಿಸಲು ಮನವಿ
Last Updated 7 ಮೇ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ರೋಗ ಲಕ್ಷಣಗಳು ಕಂಡು ಬಂದರೂ ಸಾರ್ವಜನಿಕ ಸಾರಿಗೆ ಇಲ್ಲದೆ ಇರುವುದರಿಂದ ಕೊರೊನಾ ಪರೀಕ್ಷೆಗೆ ಮುಂದಾಗುತ್ತಿಲ್ಲ. ಇದರಿಂದ ಕೋವಿಡ್ ಉಲ್ಬಣಗೊಂಡು ಮೃತಪಡುವ ಸೋಂಕಿತರ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ.

ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಜನರು ಸೋಂಕಿನ ಲಕ್ಷಣ ಕಂಡು ಬಂದರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್ ಪರೀಕ್ಷೆಗಾಗಿ ತಾಲ್ಲೂಕು ಕೇಂದ್ರಗಳಿಗೆ ಬರಲು ಬಸ್‌ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ಗ್ರಾಮೀಣ ಭಾಗದಲ್ಲಿ ಇದೀಗ ಬಸ್‌ಗಳಾಗಲಿ, ಖಾಸಗಿ ವಾಹನಗಳಾಗಲಿ ಸಂಚರಿಸುತ್ತಿಲ್ಲ. ವ್ಯಾಪಿಸುತ್ತಿರುವ ಸೋಂಕಿಗೆ ಒಳಗಾದ ಜನರು ಪರೀಕ್ಷೆಗಾಗಿ ತಮ್ಮದೇ ವಾಹನವನ್ನು ಅವಲಂಬಿಸಬೇಕಿದೆ. ಆದರೆ, ಬಹಳಷ್ಟು ಮಂದಿ ಬಡವರು, ಕೂಲಿ ಕಾರ್ಮಿಕರು ಇರುವುದರಿಂದ ಇವರಿಗೆ ಪರೀಕ್ಷೆಗೆ ಬರಲು ಸಮಸ್ಯೆಯಾಗಿದೆ.

ಬೈಕ್, ಕಾರು ಹೊಂದಿರುವವರು ಸೋಂಕಿನ ಲಕ್ಷಣವುಳ್ಳವರನ್ನು ತಾಲ್ಲೂಕು ಕೇಂದ್ರಗಳಿಗೆ ಕರೆ ತರಲು ಹಿಂದೇಟು ಹಾಕುತ್ತಿದ್ದಾರೆ. ದೂರದ ಹಳ್ಳಿಗಳಿಗೆ ಆಟೊಗಳೂ ಹೋಗುತ್ತಿಲ್ಲ. ವಿಶೇಷವಾಗಿ ಲಾಕ್‌ಡೌನ್‌ ಜಾರಿ ಬಂದ ಬಳಿಕ ಗ್ರಾಮೀಣ ಭಾಗದ ಜನರು ಕೊರೊನಾ ಸೋಂಕಿನ ಪರೀಕ್ಷೆಗೆ ಪರದಾಡುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲ್ಲಿನ ಆಲೂರು ಗ್ರಾಮದ ರೈತ ಶಿವಕುಮಾರಸ್ವಾಮಿ, ‘ನಾವು ಮೈಸೂರಿಗೆ ನಿತ್ಯ ರೈಲಿನಲ್ಲಿ ಹೋಗಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತೇವೆ. ನಮ್ಮ ಬಳಿ ಬೈಕ್ ಇಲ್ಲ. ನಮ್ಮ ಸ್ನೇಹಿತರ ಬಳಿ ಬೈಕ್ ಇದ್ದರೂ ಜ್ವರ ಎಂದಾಕ್ಷಣ ಹತ್ತಿಸಿಕೊಳ್ಳದೇ ಬೇರೆ ಏನೋ ನೆವ ಹೇಳುತ್ತಾರೆ. ಈಗ ನಾವು ಹೇಗೆ ಪರೀಕ್ಷಿಸಿಕೊಳ್ಳಬೇಕು’ ಎಂದು ಪ್ರಶ್ನಿಸುತ್ತಾರೆ.

ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ಸರಕು ಸಾಗಣೆ ಆಟೊ ಇಟ್ಟಿರುವವರ ಬಳಿ ಅಂಗಲಾಚಬೇಕಿದೆ. ಅವರು ಮನಸ್ಸು ಮಾಡಿ ಕರೆದುಕೊಂಡು ಹೋದರಷ್ಟೇ ಪರೀಕ್ಷೆ ಸಾಧ್ಯ. ಇಲ್ಲದಿದ್ದರೆ, ಆಂಬುಲೆನ್ಸ್‌ಗೆ ಹತ್ತುವ ಸ್ಥಿತಿ ಬರುವವರೆಗೂ ಸೋಂಕಿತರು ಪರೀಕ್ಷೆಗೆ ಬರುವುದಿಲ್ಲ.

ಒಂದು ವೇಳೆ ಹೇಗೋ ಪರೀಕ್ಷೆ ಮಾಡಿಸಿಕೊಂಡರೂ ಪಾಸಿಟಿವ್ ಬಂದಾಕ್ಷಣ ಆರೋಗ್ಯ ಇಲಾಖೆಯ ಯಾವ ಕಾರ್ಯಕರ್ತರೂ ಇವರ ಬಳಿ ಬರುವುದಿಲ್ಲ. ಮೊಬೈಲ್‌ಗೆ ಬರುವ ಮೆಸೇಜ್ ಆಧಾರಿಸಿ ಇವರೇ ಆಸ್ಪತ್ರೆಗೆ ಬರಬೇಕಿದೆ. ಇವೆಲ್ಲವೂ ಸೋಂಕು ಉಲ್ಬಣಕ್ಕೆ ಮುಖ್ಯ ಕಾರಣವಾಗಿದೆ.

ಬೈಕ್‌ನಲ್ಲಿ ಕರೆದುಕೊಂಡು ಹೋದವರಿಗೂ ಸೋಂಕು!
ಕೋವಿಡ್ ಪರೀಕ್ಷೆಗಾಗಿ ಬೈಕಿನಲ್ಲಿ ಕರೆದುಕೊಂಡು ಹೋಗುವವರಿಗೂ ಸೋಂಕು ಹರಡುತ್ತಿದೆ. ಇದರಿಂದ ಬಹಳಷ್ಟು ಗ್ರಾಮಗಳಲ್ಲಿ ಸೋಂಕಿನ ಲಕ್ಷಣವುಳ್ಳವರನ್ನು ಪರೀಕ್ಷೆಗೆ ಕರೆದುಕೊಂಡು ಹೋಗುವುದನ್ನೇ ನಿಲ್ಲಿಸಲಾಗಿದೆ. ಕನಿಷ್ಠ ಪಕ್ಷ ಸೋಂಕಿನ ಪರೀಕ್ಷೆಗಾಗಿ ಆರೋಗ್ಯ ಇಲಾಖೆ ವತಿಯಿಂದ ವಾಹನಗಳನ್ನು ದಿನಕ್ಕೊಮ್ಮೆಯಾದರೂ ಗ್ರಾಮಗಳಿಗೆ ನಿಯೋಜಿಸುವಂತೆ ಕಿರಗಸೂರಿನ ಮಹೇಶ್ ಮನವಿ ಮಾಡುತ್ತಾರೆ.

‘ಕಳೆದ ವರ್ಷದಂತೆ ಈ ವರ್ಷವೂ ಸೋಂಕಿತರ ಮನೆಗೆ ಮಾತ್ರೆಗಳನ್ನು ತಲುಪಿಸಬೇಕು, ಸೋಂಕಿತರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಗ್ರಾಮಗಳಿಂದ ಕರೆದುಕೊಂಡು ಹೋಗಬೇಕು’ ಎಂದು ಅವರು ಕೋರಿದ್ದಾರೆ.

3 ದಿನದಲ್ಲಿ 30 ಸಾವು
ಜಿಲ್ಲೆಯಲ್ಲಿ ಕೋವಿಡ್‌ಗೆ ಕಳೆದ 3 ದಿನಗಳಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಗುರುವಾರ 14 ಮಂದಿ ಮೃತಪಟ್ಟಿದ್ದರೆ, ಬುಧವಾರ ಮತ್ತು ಮಂಗಳವಾರ ತಲಾ 8 ಮಂದಿ ಸಾವನ್ನಪ್ಪಿದ್ದರು.

ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣವೂ ಸೇರಿದಂತೆ ಇತರೆ ಕಾರಣಗಳಿಂದ ಭಾನುವಾರ 24 ಮಂದಿ ಸಾವಿಗೀಡಾಗಿದ್ದರು. ಇದರಿಂದ ಮೇ 2 ರಿಂದ ಒಟ್ಟು 54 ಜನರು ಮೃತಪಟ್ಟಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT