ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.17– 20ರವರೆಗೆ ಸರಳ ಜಿಲ್ಲಾ ದಸರಾ

ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ; ಅಗತ್ಯ ಸಿದ್ಧತೆಗೆ ಸೂಚನೆ
Last Updated 6 ಅಕ್ಟೋಬರ್ 2020, 15:23 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ದಸರಾ ಭಾಗವಾಗಿ ಜಿಲ್ಲೆಯಲ್ಲೂ ಇದೇ 17ರಿಂದ 20ರವರೆಗೆ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ದಸರಾ ಮಹೋತ್ಸವ ಕಾರ್ಯಕ್ರಮ ಅನುಷ್ಠಾನ ಕುರಿತಂತೆ ಮಂಗಳವಾರ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ ಅವರು, ‘ಕೋವಿಡ್-19 ಕಾರಣಕ್ಕೆ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಣೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸೋಂಕು ಹೆಚ್ಚಾಗುತ್ತಿರುವುದರಿಂದ ಬಹಳ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳೊಂದಿಗೆ ಹಬ್ಬದ ಆಚರಣೆ ಮಾಡಬೇಕಿದೆ. ವಿಶೇಷವಾಗಿ ಸ್ವಚ್ಛತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಸುರಕ್ಷಿತ ಅಂತರ ಕಾಪಾಡುವುದು, ಮಾಸ್ಕ್ ಧರಿಸುವಂತಹ ಕ್ರಮಗಳನ್ನು ಹಬ್ಬದ ಸಂದರ್ಭದಲ್ಲೂ ಪಾಲನೆ ಮಾಡಬೇಕಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಅಕ್ಟೋಬರ್ 17ರಿಂದ 20ರವರೆಗೆ, ನಾಲ್ಕು ದಿನಗಳ ಕಾಲ ದಸರಾ ಮಹೋತ್ಸವ ನಡೆಸಲು ಉದ್ದೇಶಿಸಲಾಗಿದೆ. ಮೊದಲ ದಿನದಂದು ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಈ ಹಿಂದಿನಂತೆ ಸಂಪ್ರದಾಯ ಬದ್ಧವಾಗಿ ಪೂಜಾ ವಿಧಿ ವಿಧಾನದೊಂದಿಗೆ ದಸರಾಗೆ ಚಾಲನೆ ನೀಡಲಾಗುತ್ತದೆ. ಸಂಜೆ 7ರಿಂದ ಒಂದು ಗಂಟೆ ಕಾಲ ಸ್ಥಳೀಯ ಕಲಾವಿದರಿಂದ ದೇವಾಲಯದ ಆವರಣದೊಳಗೆ ನಿರ್ಮಿಸಲಾಗುವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ’ ಎಂದರು.

ವಿಶೇಷ ಪೂಜೆ: ‘ನವರಾತ್ರಿ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಮುಜರಾಯಿ ಹಾಗೂ ಇತರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಸೇವಾ ಕೈಂಕರ್ಯಗಳು ನಡೆಸುವ ಮೂಲಕ ನಾಡಹಬ್ಬದ ವಾತಾವರಣ ರೂಪಿಸಬೇಕು. ಪ್ರಮುಖ ಪ್ರಸಿದ್ಧ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನೆರವೇರಬೇಕು. ಸ್ಥಳೀಯ ಸಂಸ್ಥೆ, ಕಂದಾಯ ಇಲಾಖೆ ಹಾಗೂ ತಹಶೀಲ್ದಾರ್ ಅವರು ಈ ಎಲ್ಲ ಸಿದ್ಧತೆಗೆ ಪೂರಕವಾಗಿ ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧರಣೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಂದ್ರ, ಜಿಲ್ಲಾ ಅರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್, ತಹಶೀಲ್ದಾರ್ ಚಿದನಂದ ಗುರುಸ್ವಾಮಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

100 ಆಸನ ವ್ಯವಸ್ಥೆ, ವರ್ಚ್ಯುವಲ್‌ ಪ್ರಸಾರ

‘ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ವೇದಿಕೆಯನ್ನು ಸಿದ್ಧಪಡಿಸಬೇಕು. ಹೆಚ್ಚು ಜನ ಸಂದಣಿಗೆ ಅವಕಾಶವಿಲ್ಲದ್ದರಿಂದ 100 ಆಸನಗಳಿಗಷ್ಟೇ ವ್ಯವಸ್ಥೆ ಕಲ್ಪಿಸಬೇಕು. ದೇವಸ್ಥಾನದ ಹೊರಭಾಗದಲ್ಲಿ ದೊಡ್ಡ ಎಲ್ಇಡಿ ಪರದೆ ಅಳವಡಿಸಿ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಬೇಕು. ವರ್ಚ್ಯುವಲ್‌ ಮೂಲಕ ಜನರು ಮನೆಯಲ್ಲಿಯೇ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ಸ್ಥಳೀಯ ಕೇಬಲ್ ಚಾನೆಲ್‌ಗಳು, ಯು ಟ್ಯೂಬ್ ಚಾನೆಲ್‌ಗಳು, ಫೇಸ್‌ಬುಕ್ ಲೈವ್ ಮೂಲಕ ನೇರ ಪ್ರಸಾರ ವೀಕ್ಷಿಸಲು ಸಿದ್ಧತೆ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ದೀಪಾಲಂಕಾರ: ‘ಎಲ್ಲ ಸರ್ಕಾರಿ ಕಟ್ಟಡಗಳಿಗೆ ಆಯಾ ಸಂಬಂಧಿಸಿದ ಇಲಾಖೆಯ ವತಿಯಿಂದ ದೀಪಾಲಂಕಾರ, ತಳಿರು ತೋರಣಗಳ ವ್ಯವಸ್ಥೆ ಮಾಡಿಕೊಂಡು ಶೃಂಗಾರಗೊಳಿಸಬೇಕು. ಪ್ರಮುಖ ರಸ್ತೆ, ವೃತ್ತ ಹಾಗೂ ಉದ್ಯಾನಗಳಿಗೆ ದೀಪಾಲಂಕಾರದ ವ್ಯವಸ್ಥೆ ಮಾಡಬೇಕು. ಖಾಸಗಿ ಕಟ್ಟಡಗಳು, ಹೋಟೆಲ್, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಉದ್ಯಮ ಸಂಸ್ಥೆಗಳ ಮಾಲೀಕರು ತಮ್ಮ ವಾಣಿಜ್ಯ ಕಟ್ಟಡ ಮಳಿಗೆಗಳಿಗೆ ದೀಪಾಲಂಕಾರ ಮಾಡಿಕೊಂಡು ದಸರಾಗೆ ಮೆರಗು ನೀಡಬೇಕು, ಉದ್ಯಾನ, ಪ್ರಮುಖ ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಯೋಜನೆ ಮಾಡಲು ಖಾಸಗಿ ವಾಣಿಜ್ಯ ಉದ್ಯಮದಾರರಿಗೂ ಅವಕಾಶ ಇದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT