ಸಂತೇಮರಹಳ್ಳಿ: ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಹುರಿಮೀಸೆ ಬಿಟ್ಟು ದೊಡ್ಡ ಕಿರೀಟದೊಂದಿಗೆ ಖಡ್ಗ ಝಳಪಿಸಿ ಡೋಲಿನ ಸದ್ದಿಗೆ ಹೆಜ್ಜೆ ಹಾಕುತ್ತಿದ್ದರೆ ನೋಡುಗರು ರೋಮಾಂಚನಗೊಳ್ಳುವಂತೆ ಮಾಡುತ್ತಾರೆ ಉಮ್ಮತ್ತೂರಿನ ವೀರಗಾಸೆ ಕಲಾವಿದ ಜಯಕುಮಾರ.
ಅವರಿಗೆ ಈಗ 43 ವರ್ಷ ವಯಸ್ಸು. ಬಾಲ್ಯದಿಂದಲೇ ವೀರಗಾಸೆ ಕಲೆಯನ್ನು ಮೈಗೂಡಿಸಿಕೊಂಡು 26 ವರ್ಷಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ, ನೆರೆಯ ರಾಜ್ಯಗಳಲ್ಲಿ ಕಲೆಯನ್ನು ಪ್ರದರ್ಶಿಸಿದ್ದಾರೆ.
ಅಜ್ಜ ಹಾಗೂ ತಂದೆ ಮರಿಸ್ವಾಮಿಯವರಿಂದ ಬಳುವಳಿಯಾಗಿ ಪಡೆದ ಈ ಕಲೆಯನ್ನು ಇವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆರಂಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಜಯಕುಮಾರ, ರಾಜ್ಯದ ವಿವಿಧೆಡೆ ಸಂಚರಿಸಿ ತಮ್ಮ ಕುಣಿತದ ಪ್ರಭಾವ ಹೆಚ್ಚಿಸಿದ್ದಾರೆ.
ಸುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕುಗಳಲ್ಲಿ ನಡೆಯುವ ಮದುವೆ, ಗೃಹಪ್ರವೇಶ, ಗಣೇಶ ವಿಸರ್ಜನೆ, ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ದೇವಸ್ಥಾನಗಳ ಸಂಪ್ರೋಕ್ಷಣೆ ಕಾರ್ಯಕ್ರಮಗಳಿಗೆ ಹಾಜರಾಗಿ ವೀರಗಾಸೆ ಕಲೆಯ ಪ್ರದರ್ಶನ ಮಾಡುತ್ತಿದ್ದರು. ಕಲೆಯಲ್ಲಿ ಸಾಧನೆ ಮಾಡುತ್ತಾ ಸಾಗಿದಂತೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವ ಬಸವ ಜಯಂತಿ, ಅಂಬೇಡ್ಕರ್, ವಾಲ್ಮೀಕಿ ಜಯಂತಿ, ಭಗೀರಥ ಜಯಂತಿ, ಅರಸು ಜಯಂತಿ, ಕನ್ನಡ ರಾಜ್ಯೋತ್ಸವ, ದಸರಾ ಸೇರಿದಂತೆ ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ವೀರಭದ್ರನ ವೇಷ ಧರಿಸಿ ಹೆಜ್ಜೆ ಹಾಕುತ್ತಿದ್ದಾರೆ.
ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಇತರೆ ಜಿಲ್ಲೆಗಳ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕಲಾ ಪ್ರೌಢಿಮೆ ಪ್ರದರ್ಶಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಪ್ರಸಿದ್ಧ ಕರಗ ಉತ್ಸವದಲ್ಲಿ ಪಾಲ್ಗೊಂಡು, ಹಾವೇರಿಯ ಹಂಸಭಾವಿಯಲ್ಲಿ ನಡೆದ ಕಲೋತ್ಸವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಲಾರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸುತ್ತೂರಿನಲ್ಲಿ ನಡೆಯುವ ಜಾತ್ರಾ ಮಹೋತ್ಸವ, ಮೈಸೂರಿನ ದಸರಾ ಜಂಬೂಸವಾರಿ ಹಾಗೂ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ, ಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಗಳಲ್ಲಿ ಇಂದಿಗೂ ಭಾಗಿಯಾಗುತ್ತಿದ್ದಾರೆ.
ನೆರೆಯ ತಮಿಳುನಾಡಿನ ಪಳನಿ ಹಾಗೂ ರಾಮೇಶ್ವರದಲ್ಲಿ ದೇವರ ಉತ್ಸವ ಕಾರ್ಯಕ್ರಮಗಳಲ್ಲೂ ಹೆಜ್ಜೆ ಹಾಕಿದ ಹೆಗ್ಗಳಿಕೆ ಜಯಕುಮಾರ್ ಅವರದು. ನವದೆಹಲಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲೂ ವೀರಭದ್ರನ ಕುಣಿತ ಪ್ರದರ್ಶಿಸಿ ಛಾಪು ಮೂಡಿಸಿದ್ದಾರೆ.
ಇವರ ನೃತ್ಯ ಸಿನಿಮಾ ರಂಗದಲ್ಲಿಯೂ ಗಮನ ಸೆಳೆದಿದೆ. ಶಿವರಾಜ್ ಕುಮಾರ್ ಅಭಿನಯದ ಜೋಗಿ, ಗಣೇಶ್ ಅಬಿನಯದ ಗಿಮಿಕ್, ಪುನೀತ್ ರಾಜ್‌ಕುಮಾರ್ ಅಭಿನಯದ ರಾಮ್ ಸೇರಿದಂತೆ ಹಲವು ಚಲನಚಿತ್ರಗಳಲ್ಲೂ ತಮ್ಮ ಕಲೆಯನ್ನು ತೋರಿಸಿದ್ದಾರೆ. ಅಖಿಲ ಕರ್ನಾಟಕ ಜಾನಪದ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಜಯಕುಮಾರ ಅವರಲ್ಲಿನ ಕಲೆಯನ್ನು ಗುರುತಿಸಿ ಸನ್ಮಾನ ಮಾಡಿವೆ.
ಈಗ ಕಲೆಯೇ ಜೀವನ ಚಿಕ್ಕಂದಿನಲ್ಲಿ ಆಸಕ್ತಿ ಹಾಗೂ ಹುರುಪಿನಿಂದ ವೀರಗಾಸೆ ಕುಣಿತವನ್ನು ಜಯಕುಮಾರ ಕಲಿತಿದ್ದರು. ಅದೀಗ ಅವರ ಜೀವನವೇ ಆಗಿದೆ. ‘ನನಗಿಂದು ಕಲೆಯೇ ಬದುಕು. ಆದರೆ ವೀರಗಾಸೆ ಕುಣಿತಕ್ಕೆ ಪ್ರೋತ್ಸಾಹ ಇಲ್ಲದೆ ನಶಿಸುವಂತಹ ಹಂತ ತಲುಪಿದೆ. ಈಗಿನ ಯುವ ಜನರಿಗೆ ಇದನ್ನು ಕಲಿಯುವ ಆಸಕ್ತಿಯೇ ಇಲ್ಲ. ಅಪರೂಪದ ಕಲೆಯನ್ನು ಉಳಿಸುವುದಕ್ಕಾಗಿ ಸರ್ಕಾರ ಕಲಾವಿದರಿಗೆ ಆಸಕ್ತರಿಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಇಂತಹ ಜಾನಪದ ಕಲೆ ಉಳಿಯುತ್ತದೆ’ ಎಂದು ಹೇಳುತ್ತಾರೆ ಜಯಕುಮಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.