ಗುರುವಾರ , ಆಗಸ್ಟ್ 11, 2022
21 °C
ಡಾ.ಬಿ.ಆರ್.ಅಂಬೇಡ್ಕರ್‌ 64ನೇ ಮಹಾ ಪರಿನಿರ್ವಾಣ ದಿನ ಆಚರಣೆ, ಪ್ರತಿಮೆಗೆ ಮಾಲಾರ್ಪಣೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ

‘ಅಂಬೇಡ್ಕರ್‌: ಆಧುನಿಕ ಭಾರತದ ಮಹೋನ್ನತ ನಾಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಜನರಿನ್ನೂ ಅರ್ಥ ಮಾಡಿಕೊಂಡಿಲ್ಲ. ಅವರೊಬ್ಬ ಆಧುನಿಕ ಭಾರತದ ಮಹೋನ್ನತ ನಾಯಕ ಎಂಬುದನ್ನು ಸಮಾಜ ಇನ್ನೂ ಒಪ್ಪಿಕೊಂಡಿಲ್ಲ. ಈ ಕಾರಣಕ್ಕಾಗಿಯೇ ಇದನ್ನು ಪದೇ ಪದೇ ಹೇಳಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಅವರ 64ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ, ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ‘ಅಂಬೇಡ್ಕರ್‌ ಅವರ ಬಗ್ಗೆ ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚು. ಅವರನ್ನು ಅಪಾರ್ಥ ಮಾಡಿಕೊಂಡವರೇ ಹೆಚ್ಚು ಜನರಿದ್ದಾರೆ. ದೇಶವನ್ನು ಸಮಾನತೆಯ ಆಧಾರದಲ್ಲಿ ಸಾಮಾಜಿಕ, ರಾಜಕೀಯ, ಅರ್ಥಿಕ ಕ್ಷೇತ್ರಗಳಲ್ಲಿ ಸದೃಢಗೊಳಿಸಿದ ಅವರು, ಆಧುನಿಕ ಭಾರತದ ನಿರ್ಮಾತೃ ಆಗಿದ್ದಾರೆ. ಅವರೆಂದೂ ತಮಗಾಗಿ, ತಮ್ಮ ಕುಟುಂಬಕ್ಕಾಗಿ ಬದುಕಲಿಲ್ಲ. ಕೌಟುಂಬಿಕ ಸುಖವನ್ನು ತ್ಯಾಗ ಮಾಡಿ ಇಡೀ ಸಮಾಜ, ಸಮುದಾಯದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು’ ಎಂದರು. 

‘ಆದರೆ, ನಮ್ಮ ಸಮಾಜ ಅವರನ್ನು ಒಪ್ಪಿಕೊಳ್ಳಲಿಲ್ಲ. ಭಾರತೀಯರು ಆಳದಲ್ಲಿ ಇನ್ನೂ ಸಂಪ್ರದಾಯ ಶೀಲರು. ಆಧುನಿಕ ಉಡುಗೆ ತೊಡುಗೆ ಧರಿಸಿದರೂ ಮನಸ್ಸಿನಲ್ಲಿ ಇನ್ನೂ ಸನಾತನ ಆಲೋಚನೆಗಳಿವೆ. ಸಾಂಪ್ರದಾಯಿಕ ಸಮಾಜವು ಶೋಷಿತ ಸಮಾಜದ ಬುದ್ದಿವಂತರ ವೈಚಾರಿಕತೆ, ಪ್ರಬುದ್ಧತೆಯನ್ನು ಒಪ್ಪಿಕೊಳ್ಳುವುದಿಲ್ಲ. ಗೌತಮ ಬುದ್ಧ, ಬಸವಣ್ಣ, ಪೆರಿಯಾರ್‌, ನಾಲ್ವಡಿ ಕೃಷ್ಣ ರಾಜ ಒಡೆಯರ್‌ ಅವರನ್ನು ವಿರೋಧಿಸಿದಂತೆ ಅಂಬೇಡ್ಕರ್‌ ಅವರನ್ನೂ ವಿರೋಧಿಸಿದೆ’ ಎಂದರು.

‘ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಿಂದ ಶೋಷಿತ ವರ್ಗದವರು ಮಾತ್ರ ಸೌಲಭ್ಯಗಳನ್ನು ಪಡೆದಿಲ್ಲ. ಎಲ್ಲಾ ಸಮುದಾಯಗಳಲ್ಲಿಯೂ ಸೌಲಭ್ಯ, ಸವಲತ್ತುಗಳ ಫಲಾನುಭವಿಗಳಿದ್ದಾರೆ. ಹೀಗಾಗಿ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಅವರ ಬಗ್ಗೆ ಓದಬೇಕು’ ಎಂದರು.  

ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಅವರು ಮಾತನಾಡಿ, ‘ದೇಶದಲ್ಲಿ ಅಸಮಾನತೆ ಸಂಪೂರ್ಣವಾಗಿ ಹೋಗಲಾಡಿಸುವವರೆಗೆ ಅಂಬೇಡ್ಕರ್‌ ಅವರು ಜೀವಂತವಾಗಿರುತ್ತಾರೆ. ಅವರ ತತ್ವ, ಆದರ್ಶಗಳು ಎಲ್ಲಿರಿಗೂ ದಾರಿ ದೀಪ’ ಎಂದರು.

ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಮಾತನಾಡಿ, ‘ಅಂಬೇಡ್ಕರ್‌ ಅವರು ನುಡಿದಂತೆ ನಡೆದವರು. ಅವರು ಶ್ರೇಷ್ಠ ನಾಯಕ ಮಾತ್ರ ಅಲ್ಲ, ಮಹಾನಾಯಕ’ ಎಂದು ಬಣ್ಣಿಸಿದರು. 

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಅವರು ಮಾತನಾಡಿದರು. 

ಮಾಲಾರ್ಪಣೆ: ಇದಕ್ಕೂ ಮೊದಲು, ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ನಗರಸಭೆ ಅಧ್ಯಕ್ಷೆ  ಆಶಾ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ. ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೊಯರ್ ನಾರಾಯಣರಾವ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್ ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಬಸವರಾಜು, ಪದಾಧಿಕಾರಿಗಳು ಸೇರಿದಂತೆ ಇತರರು ಮಾಲಾರ್ಪಣೆ ಮಾಡಿದರು.

ಬಳಿಕ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. 

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾಗಿರಥಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ಎಚ್.ಕೆ.ಗಿರೀಶ್ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಕೆ.ಎಂ. ನಾಗರಾಜು, ಸಂಘಸೇನಾ, ರಾಮಸಮುದ್ರ ಬಸವರಾಜು, ಬ್ಯಾಡಮೂಡ್ಲು ಬಸವಣ್ಣ, ರಾಮಸಮುದ್ರ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕೇಶವಮೂರ್ತಿ ಇದ್ದರು. 

ಜಾನಪದ ಗಾಯಕರಾದ ಸಿ.ಎಂ.ನರಸಿಂಹಮೂರ್ತಿ ಅವರು ಅಂಬೇಡ್ಕರ್ ಕುರಿತ ಜಾಗೃತಿ ಗೀತೆಯನ್ನು ಪ್ರಸ್ತುತ ಪಡಿಸಿದರು. 

ಅಂಬೇಡ್ಕರ್ ಸಂದೇಶಗಳ ಸ್ತಬ್ಧ ಚಿತ್ರದ ಮೆರವಣಿಗೆ

ಚಾಮರಾಜನಗರ:ಡಾ.ಬಿ.ಆರ್.ಅಂಬೇಡ್ಕರ್ ಅವರ 64 ನೇ ಪರಿನಿರ್ವಾಣ ದಿನದ ಅಂಗವಾಗಿ ಅವರ ಸಂದೇಶಗಳನ್ನು ಹೊಂದಿದ್ದ ಸ್ತಬ್ಧ ಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಿತು.

ಭಾರತೀಯ ಬೌದ್ಧ ಮಹಾಸಭಾ ಮತ್ತು ಸಮತಾ ಸೈನಿಕ ದಳ ಜಿಲ್ಲಾ ಸಮಿತಿ, ದೀಪಾಂಕರ ಬುದ್ಧ ವಿಹಾರದ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಗ್ಗೆ ಸಾರನಾಥ ಬೌದ್ಧ ವಿಹಾರದ ಮುಂಭಾಗ ಮೆರವಣಿಗೆಗೆ ನಗರದ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಹಾಗೂ ಕಾಂಗ್ರೆಸ್‌ ಮುಖಂಡ ಎಸ್.ನಂಜುಂಡಸ್ವಾಮಿ ಅವರು ಪುಷ್ಪಾರ್ಚನೆ ನೆರವೇರಿಸಿ ಚಾಲನೆ ನೀಡಿದರು.

ಮೆರವಣಿಗೆಯು ಕರಿನಂಜನಪುರ ರಸ್ತೆ, ಡೀವಿಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ತೆರಳಿ ಜಿಲ್ಲಾಡಳಿತ ಭವನ ತಲುಪಿತು. ನಂತರ ಅಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಂದ ಮಾಲಾರ್ಪಣೆ ಮಾಡಿಸಲಾಯಿತು.

ಸಮತಾ ಸೈನಿಕ ದಳ ಜಿಲ್ಲಾ ಸಮಿತಿಯ ಹಾಗೂ ಭಾರತೀಯ ಬೌದ್ಧ ಮಹಾಸಭಾದ ಪದಾಧಿಕಾರಿಗಳು, ದೀಪಾಂಕರ ಬುದ್ಧ ವಿಹಾರದ ಉಪಾಸಕರು ಪಾಲ್ಗೊಂಡಿದ್ದರು. ಯಳಂದೂರು ಬುದ್ಧ ವಿಹಾರದ ಬಂತೇ ಬುದ್ಧರತ್ನ, ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಪುಟ್ಟಸ್ವಾಮಿ, ಸೈನಿಕ ದಳದ ಮಲ್ಲಿಕಾರ್ಜುನ, ಉಮೇಶ್‌ಕುದರ್ ಇತರರು ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.