ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಸಭಾಧ್ಯಕ್ಷ: ಪುಟ್ಟರಂಗಶೆಟ್ಟಿಗೆ ಒಲ್ಲದ ಮನಸ್ಸು

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳುವಂತೆ ಬೆಂಬಲಿಗರ ಒತ್ತಾಯ
Published 28 ಮೇ 2023, 15:40 IST
Last Updated 28 ಮೇ 2023, 15:40 IST
ಅಕ್ಷರ ಗಾತ್ರ

ಚಾಮರಾಜನಗರ: ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಬೇಸರಗೊಂಡಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉಪಸಭಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ನಿರಾಸಕ್ತಿ ತೋರಿಸುತ್ತಿದ್ದಾರೆ. 

ಅವರ ಬೆಂಬಲಿಗರು ಕೂಡ ಯಾವುದೇ ಕಾರಣಕ್ಕೂ ಆ ಹುದ್ದೆ ಒಪ್ಪದಂತೆ ಒತ್ತಡ ಹಾಕುತ್ತಿದ್ದಾರೆ.

ತಮ್ಮ ಊರು ಉಪ್ಪಿನಮೋಳೆಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುಟ್ಟರಂಗಶೆಟ್ಟಿ, ‘ನಾನು ಈ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ. ಬೆಂಬಲಿಗರು, ಕಾರ್ಯಕರ್ತರು ಒಪ್ಪದಂತೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ಉಪ ಸಭಾಧ್ಯಕ್ಷನಾದರೆ ಕ್ಷೇತ್ರದ ಜೊತೆಗಿನ ಸಂಪರ್ಕ ಕಡಿತವಾಗುತ್ತದೆ. ಮತದಾರರ ಬಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ನನಗೆ ಈ ಹುದ್ದೆ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ. ಅವರು, ಇಲ್ಲ ಒಪ್ಪಿಕೊಳ್ಳಲೇ ಬೇಕು ಎಂದು ಸೂಚಿಸಿದ್ದಾರೆ’ ಎಂದರು. 

ಈ ಮಧ್ಯೆ, ಉಪಸಭಾಧ್ಯಕ್ಷ ಸ್ಥಾನದ ಬದಲಿಗೆ ಯಾವುದಾದರೂ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವಂತೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಪುಟ್ಟರಂಗಶೆಟ್ಟಿಗೆ ಹೇಳಿದ್ದಾರೆ. ಒಂದರಡು ದಿನ ಕಳೆದ ನಂತರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಪುಟ್ಟರಂಗಶೆಟ್ಟಿ ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಕಟ್ಟು ನಿಟ್ಟಿನ ಸೂಚನೆ: ಈ ಮಧ್ಯೆ, ಉಪಸಭಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲೇ ಬೇಕು ಎಂದು ಸಿದ್ದರಾಮಯ್ಯ ಪುಟ್ಟರಂಗಶೆಟ್ಟಿಯವರಿಗೆ ಕಟ್ಟು ನಿಟ್ಟಾಗಿ ತಾಕೀತು ಮಾಡಿದ್ದಾರೆ ಎಂದು ಗೊತ್ತಾಗಿದೆ. 

ಸಂಭವನೀಯ ಸಚಿವರ ಪಟ್ಟಿಯಲ್ಲಿ ಪುಟ್ಟರಂಗಶೆಟ್ಟಿ ಹೆಸರಿತ್ತು. ಅವರು ದೆಹಲಿಯಿಂದ ಬೆಂಗಳೂರಿಗೆ ಬರುವುದರ ಒಳಗಾಗಿ ಅವರ ಹೆಸರು ಕೈಬಿಡಲಾಗಿತ್ತು.

‘ಅದೇ ದಿನ ರಾತ್ರಿ ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಉಪಸಭಾಧ್ಯಕ್ಷ ಸ್ಥಾನ ತಮಗೆ ಬೇಡ ಎಂದು ಹೇಳಿದ್ದಾರೆ. ಇದನ್ನು ಒಪ್ಪದ ಸಿದ್ದರಾಮಯ್ಯ, ಹುದ್ದೆಯನ್ನು ಒಪ್ಪಿಕೊಳ್ಳಲೇ ಬೇಕು ಎಂದು ಕೋಪದಲ್ಲೇ ಹೇಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ. 

ಒಪ್ಪುವ ಸಾಧ್ಯತೆ ಹೆಚ್ಚು: ‘ನಮ್ಮ ಶಾಸಕರಿಗೆ ಉಪಸಭಾಧ್ಯಕ್ಷರಾಗಲು ಮನಸ್ಸಿಲ್ಲ ನಿಜ. ಆದರೆ, ಅವರ ಹೆಸರನ್ನು ಹೈಕಮಾಂಡೇ ಆಯ್ಕೆ ಮಾಡಿದೆ. ಸಿದ್ದರಾಮಯ್ಯ ಕೂಡ ಖಂಡತುಂಡವಾಗಿ ಒಪ್ಪಿಕೊಳ್ಳಲೇ ಬೇಕು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಮಾತನ್ನು ಶೆಟ್ಟರು ಯಾವುದೇ ಕಾರಣಕ್ಕೂ ತೆಗೆದು ಹಾಕುವುದಿಲ್ಲ. ಹಾಗಾಗಿ, ಅವರು ಮನಸ್ಸಿಲ್ಲದಿದ್ದರೂ, ಆ ಹುದ್ದೆಯನ್ನು ಒಪ್ಪುವ ಸಾಧ್ಯತೆ ಹೆಚ್ಚು’ ಎಂದು ಪುಟ್ಟರಂಗಶೆಟ್ಟಿ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸುತ್ತೂರು ಸ್ವಾಮೀಜಿ ಭೇಟಿ: ಈ ಮಧ್ಯೆ, ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ಸುತ್ತೂರಿನ ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ನಂತರ ವಾಟಾಳು ಮಠಕ್ಕೂ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದರು. 

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಕೆಪಿಸಿಸಿ ಸದಸ್ಯ ಸೈಯದ್‌ ರಫಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್ ಅಸ್ಗರ್ ಮುನ್ನ, ಎಪಿಎಂಸಿ ಸದಸ್ಯ ಆಲೂರು ಪ್ರದೀಪ್, ಕಾಗಲವಾಡಿ ಚಂದ್ರು, ನಾಗವಳ್ಳಿ ನಾಗಯ್ಯ ಇದ್ದರು. 

ಗಣೇಶ್‌ ಪ್ರಸಾದ್‌
ಗಣೇಶ್‌ ಪ್ರಸಾದ್‌

ಸಚಿವ ಸ್ಥಾನಕ್ಕೆ ಅಂಬೇಡ್ಕರ್‌ ಸೇನೆ ಆಗ್ರಹ ಸತತ ನಾಲ್ಕನೇ ಬಾರಿ ಗೆದ್ದಿರುವ ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಂಬೇಡ್ಕರ್‌ ಸೇನೆ ಆಗ್ರಹಿಸಿದೆ.  ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅಂಬೇಡ್ಕರ್‌ ಸೇನೆಯ ಜಿಲ್ಲಾ ಅಧ್ಯಕ್ಷ ಗಣೇಶ್‌ ಪ್ರಸಾದ್‌ ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಗಡಿ ಜಿಲ್ಲೆಯನ್ನು ಕಡೆಗಣಿಸಿದೆ. ನಾಲ್ಕು ಕ್ಷೇತ್ರಗಳ ಪೈಕಿ ಮೂರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಹಾಗಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ’ ಎಂದು ಆರೋಪಿಸಿದರು.  ‘ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದ ವಿ.ಸೋಮಣ್ಣ ವಿರುದ್ದ ಗೆದ್ದು ಶಾಸಕರಾಗಿದ್ದಾರೆ. ಅವರ ಹೆಸರು ಸಚಿವ ಸಂಪುಟದ ಸಂಭಾವ್ಯ ಪಟ್ಟಿಯಲ್ಲಿದ್ದು ಕೊನೆಗಳಿಗೆಯಲ್ಲಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವ ಮೂಲಕ ಪುಟ್ಟರಂಗಶೆಟ್ಟರಿಗೆ ಹಾಗೂ ಚಾಮರಾಜನಗರ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಕೆಲವರಿಗೆ ಎರಡೆರಡು ಖಾತೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕನಿಷ್ಠ ಒಂದು ಖಾತೆಯನ್ನಾದರೂ ಪುಟ್ಟರಂಗಶೆಟ್ಟಿಯವರಿಗೆ ನೀಡಬೇಕು. ಇಲ್ಲದಿದ್ದರೆ ಮುಂಬರುವ ಜಿಲ್ಲಾ  ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಕಾಂಗ್ರೆಸ್‌ ಎದರಿಸಬೇಕಾಗುತ್ತದೆ ಎಂದರು. ಹೊರಗಡೆಯವರಿಗೆ ಉಸ್ತುವಾರಿ ಬೇಡ: ಜಿಲ್ಲೆಯಲ್ಲಿ ಮೂವರು ಶಾಸಕರಿದ್ದು ಜಿಲ್ಲೆಗೆ ಹೊರಗಡೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡುವುದು  ಖಂಡನೀಯ’ ಎಂದು ಗಣೇಶ್‌ ಪ್ರಸಾದ್ ಹೇಳಿದರು. ಅಂಬೇಡ್ಕರ್ ಸೇನೆಯ ತಾಲ್ಲೂಕು ಕಾರ್ಯಾಧ್ಯಕ್ಷ ಸ್ವಾಮಿ ಉಪಾಧ್ಯಕ್ಷ ಅಮಿತ್ ಮುಖಂಡರಾದ ಮಂಜು ಬಂಡಿಗೆರೆ ಕಲೀಂ ಹರದನಹಳ್ಳಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT