ಭಾನುವಾರ, ಜುಲೈ 25, 2021
25 °C
ಜಿಲ್ಲಾಡಳಿತ ಭವನದ ಮುಂದೆ ವಾಟಾಳ್‌ ನಾಗರಾಜ್‌, ಬೆಂಬಲಿಗರ ಪ್ರತಿಭಟನೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವಿದ್ಯಾರ್ಥಿ ಭವಿಷ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸೇರಿದಂತೆ ಎಲ್ಲ ರೀತಿಯ ಪರೀಕ್ಷೆಗಳನ್ನು ರದ್ದುಪಡಿಸಬೇಕು ಕನ್ನಡ ಚಳವಳಿಯ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ‌ನಾಗರಾಜ್ ಒತ್ತಾಯಿಸಿದರು.

ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂದೆ ಅವರು ಗುರುವಾರ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಡವೇ ಬೇಡ’, ‘ವಿದ್ಯಾರ್ಥಿಗಳನ್ನು ಹಾಗೆಯೇ ತೇರ್ಗಡೆ ಮಾಡಿ’ ಎಂದು ಘೋಷಣೆ ಕೂಗಿದರು. 

ನಂತರ ಮಾತನಾಡಿದ ಅವರು, ‘ಆರಂಭದಲ್ಲಿ ಸರ್ಕಾರ ಕೋವಿಡ್‌ ನಿಯಂತ್ರಣಕ್ಕೆ ಒಳ್ಳೆಯ ನಿರ್ಧಾರಗಳನ್ನು ಮಾಡಿತ್ತು. ಈಗ ನಿಯಮಗಳನ್ನು ಸಡಿಲಿಕೆ ಮಾಡಿರುವುದರಿಂದ ಸಂತೆಯ ರೀತಿ ಆಗಿದೆ.  ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಇಂತಹ ಸಂದರ್ಭದಲ್ಲಿ ಸರ್ಕಾರ ಎಸ್ಸೆಸ್ಸೆಲ್ಸಿ, ಎಂಜಿನಿಯರಿಂಗ್‌, ಮೆಡಿಕಲ್ ಕಾಲೇಜು ನಡೆಸುವುದಾಗಿ ಹೇಳುತ್ತಾ ವಿದ್ಯಾರ್ಥಿಗಳ ಜೀವದೊಂದಿಗೆ ಚೆಲ್ಲಾಟ ಆಡುತ್ತಿದೆ’ ಎಂದರು.

ಮಕ್ಕಳು, ವಯೋವೃದ್ಧರು ಮನೆಯಿಂದ ಹೊರಗೆ ಬರಬೇಡಿ ಎಂದು ಹೇಳುತ್ತಲೇ, ಸರ್ಕಾರವೇ ಪರೀಕ್ಷೆ ನಡೆಸುವುದು ಎಷ್ಟು ಸರಿ? ತಮಿಳುನಾಡು, ತೆಲಂಗಾಣ ರಾಜ್ಯಗಳು ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಪರೀಕ್ಷೆ ರದ್ದು ಮಾಡಿ ಹಿಂದಿನ ತರಗತಿಯಲ್ಲಿ ತೆಗೆದುಕೊಂಡಿರುವ ಅಂಕಗಳ ಮಾನದಂಡದಲ್ಲಿ ವಿದ್ಯಾರ್ಧಿಗಳನ್ನು ತೇರ್ಗಡೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು. 

ಪ್ಯಾಕೇಜ್ ಘೋಷಿಸಿ: ‘ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಸರ್ಕಾರದ ಪೋಷಕರೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಾಲಾ, ಕಾಲೇಜು ನಡೆಸುತ್ತಿದ್ದು, ಜನರ ದರೋಡೆ ಮಾಡುತ್ತಿದ್ದಾರೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಎಲ್ಲ ಶುಲ್ಕವನ್ನು ಭರಿಸಲು ಸರ್ಕಾರ ಪ್ಯಾಕೇಜ್‌ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದರು.‌

ನಾಗೇಶ್, ಚಾ.ರಂ.ಶ್ರೀನಿವಾಸಗೌಡ, ಗು.ಪುರುಷೋತ್ತಮ್, ‌ವರದನಾಯಕ, ಶಿವಲಿಂಗಮೂರ್ತಿ, ಬಸವಣ್ಣ, ನಂದೀಶ್, ಅಜಯ್, ಮಹೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು