ಬುಧವಾರ, ಜುಲೈ 28, 2021
24 °C
ಮುಂಬೈ ಕುಟುಂಬವನ್ನು ರಾತ್ರಿ ಇರಿಸಿರುವ ಸ್ಥಳದ ಬಗ್ಗೆ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿದ್ದ ವ್ಯಕ್ತಿ

ತಪ್ಪು ಮಾಹಿತಿ: ಚಾಮರಾಜನಗರ ಸೋಂಕಿತನ ಮಾವನಿಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮುಂಬೈನಿಂದ ಬಂದಿದ್ದ ಕೊರೊನಾ ವೈರಸ್‌ ಸೋಂಕಿತ ವೈದ್ಯಕೀಯ ವಿದ್ಯಾರ್ಥಿ, ಆತನ ತಾಯಿ ಹಾಗೂ ಅಣ್ಣನನ್ನು ಬೆಂಗಳೂರು ರೈಲು ನಿಲ್ದಾಣದಿಂದ ಜಿಲ್ಲೆಗೆ ಕರೆದುಕೊಂಡು ರಾತ್ರಿ ಇರಿಸಿದ್ದ ಸ್ಥಳದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಆತನ ಮಾವನಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಂ.ಸಿ.ರವಿ ಅವರು ನೋಟಿಸ್‌ ನೀಡಿದ್ದಾರೆ. 

ಮೂರು ದಿನದೊಳಗಾಗಿ ಸೂಕ್ತ ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ಪ್ರಕೃತಿ ನಿರ್ವಹಣಾ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಸೂಚನೆಯ ಮೇರೆಗೆ ನೋಟಿಸ್‌ ಜಾರಿ ಮಾಡಲಾಗಿದೆ. 

ಮುಂಬೈನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿ ಹಾಗೂ ಉಳಿದ ಇಬ್ಬರನ್ನು ಅವರ ಮಾವ ಜೂನ್‌ 5ರಂದು ತಮ್ಮ ಕಾರಿನಲ್ಲಿ ಜಿಲ್ಲೆಗೆ ಕರೆದುಕೊಂಡು ಬಂದಿದ್ದರು. ಸತ್ತೇಗಾಲದ ಬಳಿಯ ಜಾಗೇರಿಯಲ್ಲಿ ಮನೆಯನ್ನು ಹೊಂದಿರುವ ಇವರು, ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಪಾಲಿಮೇಡಿನಲ್ಲಿರುವ ಅವರ ಮನೆಯಲ್ಲಿ ಇರಿಸಿದ್ದಾಗಿ ಮೊದಲು ಹೇಳಿದ್ದರು. ಅಲ್ಲದೇ ತನ್ನ ಪತ್ನಿ ಹಾಗೂ ಮಕ್ಕಳು ತೋಮಿಯರ್‌ ಪಾಳ್ಯದಲ್ಲಿ ಇರುವುದಾಗಿ ಹೇಳಿಕೆ ನೀಡಿದ್ದರು. 

ಇದರ ಆಧಾರದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಎರಡು ಕಡೆಗೂ ತೆರಳಿ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಆದರೆ, ವಾಸ್ತವದಲ್ಲಿ ಸೋಂಕಿತ ವ್ಯಕ್ತಿ ಹಾಗೂ ಅವರ ಕುಟುಂಬವನ್ನು ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳ್ಳಿ ಗ್ರಾಮದಲ್ಲಿ ಇರಿಸಿದ್ದ ಹಾಗೂ ಪತ್ನಿ ಹಾಗೂ ಮಕ್ಕಳು ಜಾಗೇರಿಯ ಕರಾಚಿಕಟ್ಟೆಯಲ್ಲಿ ಇದ್ದಿದ್ದು ಖಚಿತ ಪಟ್ಟಿತ್ತು. 

ಆರಂಭದಿಂದಲೂ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದ ವಿದ್ಯಾರ್ಥಿಯ ಮಾವ, ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದರು. ಅವರು ಹೇಳಿದ ಜಾಗಕ್ಕೆಲ್ಲ ತೆರಳಿ ವಿಚಾರಣೆ ನಡೆಸಿದ್ದರು. ಪಾಲಿಮೇಡುಗೆ ಅವರು ಬಂದಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಅವರು ಯಾರೂ ಬಂದಿಲ್ಲ ಎಂಬುದನ್ನೂ ಎಂದು ಹೇಳಿದ್ದರು. 

ಈ ವ್ಯಕ್ತಿಯು ಭಿನ್ನ ಹೇಳಿಕೆ ನೀಡಿ ಗ್ರಾಮಸ್ಥರಲ್ಲಿ ಗೊಂದಲ ಹುಟ್ಟುಹಾಕಿದ್ದ ಬಗ್ಗೆ ‘ಪ್ರಜಾವಾಣಿ’ಯ ಜೂನ್‌ 9ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.