ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ದಸರಾ: ‌ಇಂದಿನಿಂದ ಸಾಂಸ್ಕೃತಿಕ ಕಲರವ

ಕಲಾ ತಂಡಗಳು, ಸ್ತಬ್ಧ ಚಿತ್ರಗಳ ಮೆರವಣಿಗೆ, ಕವಿಗೋಷ್ಠಿ, ನಾಟಕ ಪ್ರದರ್ಶನ
Last Updated 26 ಸೆಪ್ಟೆಂಬರ್ 2022, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ದಸರಾ ಅಂಗವಾಗಿ ಜಿಲ್ಲೆಯಲ್ಲಿ ನಡೆಯುವ ನಾಲ್ಕು ದಿನಗಳ ದಸರಾ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರದಿಂದ (ಸೆ.27) ನಾಲ್ಕು ದಿನಗಳ ಕಾಲ ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಕಲರವ ಮೇಳೈಸಲಿದೆ.

ಬೆಳಿಗ್ಗೆ 10.15ಕ್ಕೆ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾಗೆ ಸಾಂಪ್ರದಾಯಿಕ ಚಾಲನೆ ಸಿಗಲಿದೆ. ಸಂಜೆ 5.‌30ಕ್ಕೆ ವೇದಿಕೆ ಸಮಾರಂಭದಲ್ಲಿ ಅಧಿಕೃತವಾಗಿ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ.

ನಾಲ್ಕೂ ದಿನಗಳ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣದ ಮುಖ್ಯ ವೇದಿಕೆ, ವರನಟ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರ ಹಾಗೂ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಪ್ರತಿ ದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ.

ಪ್ರಧಾನ ವೇದಿಕೆಯಲ್ಲಿ ಮಧ್ಯಾಹ್ಗ 3.30ರಿಂದ 10 ಗಂಟೆಯ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದರೆ, ರಂಗ ಮಂದಿರ ಹಾಗೂ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಬೆಳಿಗ್ಗೆಯಿಂದ 9 ರಿಂದ ಸಂಜೆ 6.30ರವರೆಗೂ ಕವಿಗೋಷ್ಠಿ, ನಾಟಕ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ರಂಗ ಮಂದಿರದಲ್ಲಿ ಮಂಗಳವಾರ ಮತ್ತು ಬುಧವಾರ ಕವಿಗೋಷ್ಠಿಗಳು ನಡೆಯಲಿವೆ. ಅಲ್ಲದೇ ನಾಲ್ಕೂ ದಿನಗಳ ಕಾಲ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಪ್ರದರ್ಶನಗೊಳ್ಳಲಿವೆ. ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ರಂಗಭೂಮಿ ತಂಡಗಳು ಕಲಾಸಕ್ತರ ಮನ ತಣಿಸಲಿವೆ.

15 ನಿಮಿಷ: ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಪ್ರತಿ ದಿನ ಜಿಲ್ಲೆಯ ಜಾನಪದ ಕಲೆಗಳು ಪ್ರದರ್ಶನ ಕಾಣಲಿವೆ. ಪ್ರತಿ ದಿನವೂ 20ಕ್ಕೂ ಹೆಚ್ಚು ಜಾನಪದ ತಂಡಗಳು ಕಲೆಯನ್ನು ಪ್ರದರ್ಶಿಸಲಿವೆ. ಸೋಬಾನೆ ಪದ, ಗೊರವರ ಕುಣಿತ, ಕಂಸಾಳೆ, ನೀಲಗಾರರ ಪದ, ತಂಬೂರಿ ಪದ, ಡೊಳ್ಳು ಕುಣಿತ, ತೊಗಲು ಗೊಂಬೆಯಾಟ, ಭಜನೆ, ನೃತ್ಯ ರೂಪಕ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆಯಲಿವೆ.

ಪ್ರತಿ ತಂಡಕ್ಕೂ 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಕಾಲು ಗಂಟೆಯಲ್ಲಿ ಏನು ಪ‍್ರದರ್ಶನ ನೀಡಲು ಸಾಧ್ಯ ಎಂಬುದು ಬಹುತೇಕ ಕಲಾವಿದರ ಪ್ರಶ್ನೆ. ’ಎಲ್ಲ ಕಲಾವಿ‌ದರಿಗೂ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಸಮಯವನ್ನು ಕಡಿಮೆಗೊಳಿಸಲಾಗಿದೆ’ ಎಂಬುದು ಅಧಿಕಾರಿಗಳು ನೀಡುವ ಸಮಜಾಯಿಷಿ.

ಯುವ ಕವಿಗೋಷ್ಠಿ: ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಯುವಕವಿಗೋಷ್ಠಿ ನಡೆಯಲಿದೆ. ಸಾಹಿತಿ ಮಂಜು ಕೋಡಿಉಗನೆ ಉದ್ಘಾಟಿಸಲಿದ್ದಾರೆ.ಕವಿ ಡಾ. ಕೃಷ್ಣಮೂರ್ತಿ ಚಮರಂ ಅವರು ಆಶಯ ನುಡಿಗಳನ್ನಾಡುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಶೈಲಕುಮಾರ್ ಅವರು ಅಧ್ಯಕ್ಷತೆ ವಹಿಸುವರು.

ಕವಿಗಳಾದ ಮಹೇಶ್ ಇರಸವಾಡಿ, ಮಣಿಕಂಠ (ಆ.ಸಿ.ಮ), ಅನುರಾಧ ಸಿಂಗಾನಲ್ಲೂರು, ಎ. ಶಿವರಾಜು, ಕಾಂತರಾಜು ಮೌರ್ಯ, ಸೌಮ್ಯ ಹೆಗ್ಗಡಹಳ್ಳಿ, ಬಳೇಪೇಟೆ ಪ್ರಕಾಶ್, ಮಹೇಶ್ ಚಂದಿರಪ್ರಿಯ, ಕಲ್ಪನಾ ರವಿ, ನಾಗಮ್ಮ ಗುಂಬಳ್ಳಿ, ಸಿ. ರಾಜೇಂದ್ರ, ಮಹೇಶ್ವರಿ, ಎಸ್. ದಿಲೀಪ್ ನೀತಿನ್‌ಕುಮಾರ್, ಚಂದ್ರಶೇಖರ ಚಿಕ್ಕಲ್ಲೂರು, ಮಂಜುಳ ನಾಗರಾಜು, ಯೋಗೇಶ್ ಚಿಕ್ಕತುಪ್ಪೂರು, ಪ್ರೇಮ. ಜಿ. ಸಿದ್ದಯ್ಯನಪುರ, ಬಸವರಾಜು ಗುಂಬಳ್ಳಿ, ಸಿದ್ದು ಜನ್ನೂರು, ಕ.ಮಾ ನಾಗಶೆಟ್ಟಿ, ಕಾರ್ತಿಕ್ ನಾಯಕ್, ಅಜಯ್ ಅಂಬಳೆ, ಸುನಿಲ್‌ಕುಮಾರ್, ಪ್ರಸಾದ್ ಅರಳಿಪುರ, ಶಿವಶಂಕರಚಟ್ಟು ಅವರು ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಲಿದ್ದಾರೆ.

ಕಲಾತಂಡಗಳು, ಸ್ತಬ್ಧಚಿತ್ರಗಳ ಮೆರವಣಿಗೆ

ಜಿಲ್ಲಾ ದಸರಾದ ಮೊದಲ ದಿನ ಕಲಾ ತಂಡಗಳು ಹಾಗೂ ಸ್ತಬ್ಧ ಚಿತ್ರಗಳ ಅದ್ಧೂರಿ ಮೆರವಣಿಗೆ ನಗರದಲ್ಲಿ ನಡೆಯಲಿದೆ.

22ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಮಧ್ಯಾಹ್ನ 2 ಗಂಟೆಗೆ ಜಿಲ್ಲಾಡಳಿತ ಭವನದ ಮುಂಭಾಗ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಪ್ರಮುಖ ಬೀದಿಗಳಲ್ಲಿ ಸಾಗಿ ಚಾಮರಾಜೇಶ್ವರ ದೇವಾಲಯದಲ್ಲಿ ಮುಕ್ತಾಯಗೊಳ್ಳಲಿದೆ.

ಕಲಾತಂಡಗಳು: ನಂದಿ ಧ್ವಜ (ಹರವೆಯ ಪುಟ್ಟಮಲ್ಲಪ್ಪ ಮತ್ತು ತಂಡ), ನಾದಸ್ವರ (ಇರಸವಾಡಿಯ ಎನ್. ಮಲ್ಲೇಶ್ ತಂಡ, ಮರಿಯಾಲ ಮಹದೇವ್ ತಂಡ, ಅಂಬಳೆ ಆರ್. ನಂಜುಂಡಸ್ವಾಮಿ ತಂಡ, ಯಳಂದೂರು ಕಾವಿಬವಸವಯ್ಯ ತಂಡ, ಬಿಳಿಗಿರಿ ರಂಗಸ್ವಾಮಿ ಓಲಗರ ಕಲಾವಿದರ ಸಂಘ), ಬ್ಯಾಂಡ್‌ಸೆಟ್‌ ( ಮಲ್ಲಯ್ಯನಪುರ ಚಂದ್ರಶೇಖರ್ ಮತ್ತು ತಂಡ, ಶಾಂತರಾಜು ಅವರ ಆದರ್ಶ್ ಬ್ರಾಸ್ ಬ್ಯಾಂಡ್ ಸೆಟ್ ತಂಡ), ಡೊಳ್ಳು ಕುಣಿತ (ರಾಮಸಮುದ್ರ ಬಾಲು ಮತ್ತು ತಂಡ) ಬ್ಯಾಂಡ್‌ಸೆಟ್ (ಕೆಂಪನಪುರ ಮಹದೇವಸ್ವಾಮಿ ಜೈಭಾರತ್ ಬ್ಯಾಂಡ್ ಕಲಾತಂಡ), ನಾಸಿಕ್‌ಡೋಲ್ (ರಾಮಸಮುದ್ರ ಆರ್. ಮಹೇಶ್ ತಂಡ) ವೀರಗಾಸೆ (ಗುಂಬಳ್ಳಿ ಶಿವಕುಮಾರ್ ತಂಡ, ಬಿಸಲವಾಡಿ ಪ್ರಕಾಶ್ ತಂಡ),ಗೊರವರಕುಣಿತ (ರಾಮಸಮುದ್ರ ರಮೇಶ್ ತಂಡ, ರಾಮಸಮುದ್ರ ಆರ್.ಡಿ. ಶಂಕರ ತಂಡ) ಕಂಸಾಳೆ ನೃತ್ಯ ( ಆಲ್ಕೆರೆ ಅಗ್ರಹಾರ ಗುರುಪಾದಸ್ವಾಮಿ ತಂಡ, ರಾಮಸಮದ್ರ ಎಂ. ಮಹದೇವಸ್ವಾಮಿ ತಂಡ), ಬೀಸು ಕಂಸಾಳೆ (ದೊಡ್ಡಮೋಳೆ ಮಹೇಶ್ ತಂಡ) ಕೋಲಾಟ (ಹೊಂಡರಬಾಳು ಶ್ರೀನಿವಾಸಮೂರ್ತಿ ತಂಡ), ಸುಗ್ಗಿಕುಣಿತ (ರಾಮಸಮುದ್ರ ಚೇತನ್ ತಂಡ),ತಮಟೆವಾದನ (ಬಸವನಪುರ ಜ್ಯೋತಿ ಲಿಂಗಯ್ಯ ತಂಡ), ದೊಣ್ಣೆವರಸೆ (ರಾಮಸಮುದ್ರ ಬಂಗಾರಸ್ವಾಮಿ ತಂಡ), ಹುಲಿವೇಷ (ಬಂಡಿಗೆರೆ ಗುರುಮಲ್ಲಶೆಟ್ಟಿ ತಂಡ) ಕಲಾ ತಂಡಗಳು ಭಾಗವಹಿಸಲಿವೆ.

ರಾಮಸಮುದ್ರ ಜನರ ಅತೃಪ್ತಿ

ಬಿ.ರಾಚಯ್ಯ ಜೋಡಿ ರಸ್ತೆಗೆ ಪೂರ್ಣವಾಗಿ ದೀಪಲಂಕಾರ ಮಾಡದ್ದಕ್ಕೆ ರಾಮಸಮುದ್ರದ ಭಾಗದ ಮುಖಂಡರು ಹಾಗೂ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈವರೆಗೂ ರಾಮಸಮುದ್ರದಲ್ಲಿರುವ ಅಂಬೇಡ್ಕರ್‌ ಪ‍್ರತಿಮೆಯವರೆಗೆ ದೀಪಗಳ ಅಲಂಕಾರ ಮಾಡಲಾಗುತ್ತಿತ್ತು. ಈ ಬಾರಿ ಅಂಬೇಡ್ಕರ್‌ ಪ್ರತಿಮೆ ಹಾಗೂ ಅಲ್ಲಿನ ವೃತ್ತಕ್ಕೆ ಮಾತ್ರ ದೀಪಗಳನ್ನು ಹಾಕಲಾಗಿದೆ.

ಜೋಡಿ ರಸ್ತೆಯಲ್ಲಿರುವ ತಹಶೀಲ್ದಾರ್‌ ಕಚೇರಿಗೆ ದೀಪಾಲಂಕಾರ ಕೊನೆಯಾಗಿದೆ. ಅದನ್ನು ರಾಮಸಮುದ್ರದ ತುದಿಯವರೆಗೂ ವಿಸ್ತರಿಸಬೇಕು ಎಂಬುದು ಆ ಭಾಗದ ಜನರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT