ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ನಗರಸಭೆಯ ಮೊದಲ ವಾಣಿಜ್ಯ ಸಂಕೀರ್ಣ ಉದ್ಘಾಟನೆ

₹2.90 ಕೋಟಿ ವೆಚ್ಚದಲ್ಲಿ ‌ ನಿರ್ಮಾಣ, ಕಾಮಗಾರಿ ಮುಗಿಯಲು ಎರಡೂವರೆ ವರ್ಷ
Last Updated 6 ಸೆಪ್ಟೆಂಬರ್ 2020, 12:43 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ನಗರಸಭೆ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಸೋಮವಾರ ಉದ್ಘಾಟನೆಯಾಗಲಿದೆ.ನಗರಸಭೆ ನಿರ್ಮಿಸಿರುವ ಮೊದಲ ವಾಣಿಜ್ಯ ಸಂಕೀರ್ಣ‌ ಇದು.

ಪೌರಾಡಾಳಿತ ಸಚಿವ ನಾರಾಯಣ ಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ₹2.90 ಕೋಟಿ ವೆಚ್ಚದಲ್ಲಿ ಈ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ.

ತಳಮಹಡಿ, ನೆಲಮಹಡಿ ಹಾಗೂ‌ ಮೊದಲ ಮಹಡಿಯನ್ನು‌ ಹೊಂದಿರುವ ಕಟ್ಟಡವು ಒಟ್ಟು 1,148.52 ಚದರ ಮೀಟರ್ ವಿಸ್ತೀರ್ಣವಿದೆ. ನೆಲಮಹಡಿ 381.84 ಚ.ಮೀ ವಿಸ್ತೀರ್ಣವಿದ್ದರೆ ಉಳಿದ ಎರಡು ಮಹಡಿಗಳು ತಲಾ 382.84 ಚ.ಮೀ ವಿಸ್ತೀರ್ಣ ಹೊಂದಿವೆ.

2016-17ನೇ ಸಾಲಿನಲ್ಲೇ ಹಣ ಬಿಡುಗಡೆಯಾಗಿತ್ತು. ಆದರೆ, ಕಾಮಗಾರಿ ಪ್ರಾರಂಭವಾಗಿರಲಿಲ್ಲ. 2018ರ ಮಾರ್ಚ್ನಲ್ಲಿ ಗುತ್ತಿಗೆ ನೀಡಲಾಗಿತ್ತು. ಎರಡೂವರೆ ವರ್ಷಗಳ ಬಳಿಕ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ.

ಏನೆಲ್ಲ‌ ಇದೆ?: ಕಟ್ಟಡದಲ್ಲಿ ಎರಡು ಮಹಡಿಗಳು‌ ಮಾತ್ರ ವಾಣಿಜ್ಯ ಉದ್ದೇಶಕ್ಕೆ ನೀಡಬಹುದಾಗಿದೆ. ಚಿನ್ನದ ಅಂಗಡಿ, ಬಟ್ಟೆಯಂಗಡಿ ಮುಂತಾದ ದೊಡ್ಡ ಮಳಿಗೆಗಳನ್ನು ತೆರೆಯಬಹುದಾಗಿದೆ.

ತಳ‌ಮಹಡಿಯಲ್ಲಿ ವಾಹನ ನಿಲುಗಡೆ, ಸಾಮಗ್ರಿಗಳ ದಾಸ್ತಾನು‌ ಕೊಠಡಿ, ಲಿಫ್ಟ್ ಕೊಠಡಿ ಹಾಗೂ ಶೌಚಾಲಯ ಇದೆ. ನೆಲಮಹಡಿ ಮತ್ತು‌ ಮೊದಲ ಮಹಡಿಗಳಲ್ಲಿ ಶಾಪಿಂಗ್ ಮಾಲ್, ಲಿಫ್ಟ್ ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ

ಬಾಡಿಗೆ ₹2.99 ಲಕ್ಷ ನಿಗದಿ: 'ನಗರ ಸಭೆಯಿಂದ ನಿರ್ಮಿಸಲಾಗಿರುವ ಮೊದಲ ವಾಣಿಜ್ಯ ಸಂಕೀರ್ಣ ಇದು. ಟೆಕ್ಸ್ ಟೈಲ್, ಚಿನ್ನದ ಅಂಗಡಿ ಸೇರಿದಂತೆ ದೊಡ್ಡ ಮಟ್ಟಿನ ಮಳಿಗೆಗಳನ್ನು ತೆರೆಯಲು ಬಯಸುವವರಿಗೆ ಇದು ಅನುಕೂಲ' ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

'ಕೆಲವರು ಈಗಾಗಲೇ ಬಾಡಿಗೆಯ ಬಗ್ಗೆ ವಿಚಾರಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯು ಇಡೀ ಕಟ್ಟಡಕ್ಕೆ ತಿಂಗಳಿಗೆ ₹2.99 ಲಕ್ಷ ಬಾಡಿಗೆ ನಿಗದಿ ಪಡಿಸಿದೆ. ಠೇವಣಿ ಮೊತ್ತಕ್ಕೆ ಹರಾಜು ಪ್ರಕ್ರಿಯೆ ನಡೆಸಲಾಗುವುದು' ಎಂದು ಅವರು ಹೇಳಿದರು.

'ನಗರದಲ್ಲಿ ಮಾಲ್ ಆರಂಭಿಸಲು ಬಯಸಿರುವ ಉದ್ಯಮಿಗಳು ಈಗಾಗಲೇ ಕಟ್ಟಡವನ್ನು ಕೇಳಿದ್ದಾರೆ. ಕೆಲವು ಬಟ್ಟೆ ಅಂಗಡಿಯವರೂ ಆಸಕ್ತಿ ತೋರಿಸಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಮತ್ತೊಂದು ವಾಣಿಜ್ಯ ಸಂಕೀರ್ಣ: ನಗರಸಭೆಯು ಸಂತೇಮರಹಳ್ಳಿ ವೃತ್ತದ ಬಳಿ ಬಹು ಮಹಡಿಗಳ ಮತ್ತೊಂದು ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದೆ. ₹4.5 ಕೋಟಿ ವೆಚ್ಚದಲ್ಲಿ ಇದರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಖಾಸಗಿ ಬಸ್‌ ನಿಲ್ದಾಣವೂ ಪೂರ್ಣ

ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಬಳಿ‌ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯೂ ಪೂರ್ಣಗೊಂಡಿದ್ದು, ಅದು ಕೂಡ ಸೋಮವಾರ ಬಳಕೆಗೆ ಮುಕ್ತವಾಗಲಿದೆ. ₹2.5 ಕೋಟಿ‌ ವೆಚ್ಚದಲ್ಲಿ ನಿರ್ಮಿಸಿರುವ ನಿಲ್ದಾಣ ಕಳೆದ ವರ್ಷವೇ ಲೋಕಾರ್ಣೆಯಾಗಬೇಕಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಕಳೆದ ವರ್ಷದ ನವೆಂಬರ್ 1ರ ವೇಳೆಗೆ ಉದ್ಘಾಟನೆಯಾಗಬೇಕು ಎಂದು ಗಡುವು ನೀಡಿದ್ದರು. ನಿಲ್ದಾಣದ ಬಹುತೇಕ‌‌ ಕಾಮಗಾರಿಗಳು ಮುಗಿದಿದ್ದರೂ, ಚರಂಡಿ, ಕುಡಿಯುವ ನೀರು, ಆಸನ ವ್ಯವಸ್ಥೆ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳು ಬಾಕಿಯಾಗಿದ್ದವು.

22 ಬಸ್‌ಗಳಿಗೆ‌ ನಿಲುಗಡೆ ವ್ಯವಸ್ಥೆ, ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ನಿಲ್ದಾಣದಲ್ಲಿದೆ ಹಾಗೂ ನಿಲ್ದಾಣದ ಸುತ್ತಲೂ ಕಾಂಕ್ರೀಟ್ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT