ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರಿಂದ ಹಾಲು ಖರೀದಿ ದರ ₹1 ಕಡಿತ

ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಳ: ಚಾಮುಲ್‌ ಆಡಳಿತ ಮಂಡಳಿ ನಿರ್ಧಾರ
Last Updated 11 ಮೇ 2020, 16:05 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟವು (ಚಾಮುಲ್‌) ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಇದೇ 16ರಿಂದ ₹1 ಕಡಿತಗೊಳಿಸಲು ನಿರ್ಧರಿಸಿದೆ. ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತಾಪಿ ವರ್ಗಕ್ಕೆ ಈ ನಿರ್ಧಾರದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿರುವ ಕಾರಣದಿಂದ ಖರೀದಿ ದರವನ್ನು ಕಡಿತಗೊಳಿಸಲಾಗಿದೆ ಎಂದು ಚಾಮುಲ್‌ ಆಡಳಿತ ಮಂಡಳಿ ಹೇಳಿದೆ.ಜನವರಿಯಿಂದೀಚೆಗೆ ಚಾಮುಲ್‌ ಖರೀದಿ ದರವನ್ನು ಲೀಟರ್‌ಗೆ ಒಟ್ಟು ₹4ನಷ್ಟು ಹೆಚ್ಚಿಸಿತ್ತು.

ಹಾಲು ಉತ್ಪಾದನೆ ಹೆಚ್ಚಾದಾಗ ದರ ಕಡಿತಗೊಳಿಸುವುದು, ಉತ್ಪಾದನೆ ಕಡಿಮೆ ಇದ್ದಾಗ ದರ ಹೆಚ್ಚು ಮಾಡುವುದು ಸಾಮಾನ್ಯ ಪ್ರಕ್ರಿಯೆ. ರಾಜ್ಯದ ಎಲ್ಲ ಹಾಲು ಒಕ್ಕೂಟಗಳು ಈ ನಿರ್ಧಾರ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಇದರಿಂದಾಗಿ ಜಿಲ್ಲೆಯ ಹಾಲು ಉತ್ಪಾದಕರಿಗೆ ಇದೇ 16ರಿಂದ ಲೀಟರ್‌ಗೆ ಕನಿಷ್ಠ ₹26 ಸಿಗಲಿದೆ. ಹಾಲು ಉತ್ಪಾದಕರ ಸಂಘಗಳಿಗೆ ₹28.50 ಸಿಗಲಿದೆ.

‘ಸದ್ಯ ನಾವು ಉತ್ಪಾದಕರಿಗೆ ಒಂದು ಲೀಟರ್‌ಗೆ ಕನಿಷ್ಠ ₹27 ಕೊಡುತ್ತಿದ್ದೇವೆ. ಉತ್ಪಾದಕ ಸಂಘಗಳಿಗೆ ₹29.50 ನೀಡುತ್ತಿದ್ದೇವೆ. 16ರಿಂದ ಈ ದರದಲ್ಲಿ ₹1 ಕಡಿತವಾಗಲಿದೆ’ ಎಂದು ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮಲ್ಲಿಕಾರ್ಜುನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವರ್ಷದ ಆರಂಭದಲ್ಲಿ ಒಕ್ಕೂಟವು ಪ್ರತಿ ಲೀಟರ್‌ ಹಾಲಿಗೆ ₹1.5 ಪ್ರೋತ್ಸಾಹ ಧನ ನೀಡಲು ನಿರ್ಧರಿಸಿತ್ತು. ಫೆ.1ರಿಂದ ಅನ್ವಯವಾಗುವಂತೆ ಖರೀದಿ ದರವನ್ನು ಲೀಟರ್‌ಗೆ ₹1.5ಯಷ್ಟು ಹೆಚ್ಚಿಸಿತ್ತು. ಅದೇ ತಿಂಗಳ 16ರಿಂದ ಲೀಟರ್‌ ಹಾಲಿನ ಖರೀದಿ ದರವನ್ನು ಮತ್ತೆ ₹1 ಹೆಚ್ಚಿಸಲಾಗಿತ್ತು.

ಮಾರಾಟ ಸಹಜ ಸ್ಥಿತಿಗೆ

ಲಾಕ್‌ಡೌನ್‌ ಸಡಿಲಿಕೆ ನಂತರ ಜಿಲ್ಲೆಯಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ಸಹಜ ಸ್ಥಿತಿಗೆ ಬಂದಿದೆ.ಸದ್ಯ ಜಿಲ್ಲೆಯಲ್ಲಿ ಪ್ರತಿ ದಿನ 31 ಸಾವಿರ ಲೀಟರ್‌ ಹಾಲು ಹಾಗೂ 8,000 ಲೀಟರ್‌ ಮೊಸರು ಮಾರಾಟವಾಗುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಇವೆರಡರ ಮಾರಾಟ ಕ್ರಮವಾಗಿ 27 ಸಾವಿರ ಲೀಟರ್, 6,000 ಲೀಟರ್‌ಗೆ ಕುಸಿದಿತ್ತು.

‘ಸದ್ಯ ಪ್ರತಿ ದಿನ 2.40 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. 31 ಸಾವಿರ ಲೀಟರ್‌ ಹಾಲು ಹಾಗೂ 8,000 ಲೀಟರ್‌ ಮೊಸರು ಮಾರಾಟವಾಗುತ್ತಿದೆ. 85 ಸಾವಿರ ಲೀಟರ್‌ಗಳಷ್ಟು ಗುಡ್‌ಲೈಫ್‌ ಹಾಲು ತಯಾರಿಸುತ್ತಿದ್ದೇವೆ. 40 ಸಾವಿರ ಲೀಟರ್‌ಗಳಷ್ಟು ಹಾಲನ್ನು ಕೇರಳದ ಹಾಲು ಒಕ್ಕೂಟಕ್ಕೆ ಮಾರಾಟ ಮಾಡುತ್ತಿದ್ದೇವೆ. ಉಳಿದ ಹಾಲಿನಲ್ಲಿ ಪುಡಿ ತಯಾರಿಸುತ್ತಿದ್ದೇವೆ’ ಎಂದು ಮಲ್ಲಿಕಾರ್ಜುನ್‌ ಅವರು ಮಾಹಿತಿ ನೀಡಿದರು.

ಸದ್ಯ ಜಿಲ್ಲೆಯಲ್ಲಿ ಪ್ರತಿ ದಿನ 2.40 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಈ ತಿಂಗಳಾಂತ್ಯಕ್ಕೆ ಅದು 2.80 ಲಕ್ಷ ಲೀಟರ್‌ಗೆ ಹೆಚ್ಚಾಗುವ ನಿರೀಕ್ಷೆ ಇದೆ -ಮಲ್ಲಿಕಾರ್ಜುನ್‌, ಚಾಮುಲ್‌ ಎಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT