ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಚಾಮರಾಜನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೂರು ವರ್ಷಗಳ ಹಿಂದೆ ವಂಚನೆ ಪ್ರಕರಣ ದಾಖಲಾಗಿದ್ದು ಶುಕ್ರವಾರ ವಿಚಾರಣೆಗೆ ಹಾಜರಾದರು.
ಪ್ರಕರಣದ ವಿವರ: ‘2018, 2019 ಹಾಗೂ 2020ರಲ್ಲಿ ತಲಾ ಒಂದು ಲಕ್ಷದಂತೆ ಸ್ನೇಹಮಯಿ ಕೃಷ್ಣಗೆ ಮೂರು ಲಕ್ಷ ಸಾಲ ನೀಡಿದ್ದು ಪ್ರಾಮಿಸರಿ ನೋಟ್ ಬರೆದುಕೊಟ್ಟಿದ್ದಾರೆ. ಪಡೆದ ಸಾಲ ಹಿಂತಿರುಗಿಸದೆ ವಂಚನೆ ಎಸಗಿದ್ದರಿಂದ ಪ್ರಕರಣ ದಾಖಲಿಸಿದ್ದು ಮೂರು ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ’ ಎಂದು ದೂರುದಾರ ಕರುಣಾಕರ ತಿಳಿಸಿದರು.
‘ಮೊದಲು ಸ್ವಲ್ಪ ಸಾಲ ಪಡೆದು ಬಡ್ಡಿ ಸಮೇತ ತೀರಿಸಿ ವಿಶ್ವಾಸ ಗಿಟ್ಟಿಸಿದ ಸ್ನೇಹಮಯಿ ಕೃಷ್ಣ ಬಳಿಕ ಮತ್ತೆ ಸಾಲ ಪಡೆದು ಹಿಂದಿರುಗಿಸಿಲ್ಲ. ಚೆಕ್ ಅಥವಾ ಆರ್‌ಟಿಜಿಎಸ್ ಮೂಲಕ ಹಣ ಪಡೆಯದೆ ನಗದು ರೂಪದಲ್ಲಿ ಪಡೆದಿದ್ದಾರೆ. ಇದೀಗ ನನ್ನ ವಿರುದ್ಧವೇ ಪರವಾನಗಿ ಇಲ್ಲದೆ ಫೈನಾನ್ಸ್ ಮಾಡುತ್ತಿರುವುದಾಗಿ ದೂರು ನೀಡಿದ್ದಾರೆ’ ಎಂದು ಕರುಣಾಕರ ತಿಳಿಸಿದರು.
ಆರೋಪಕ್ಕೆ ಪ್ರತಿಕ್ರಿಯೆ:
‘ಕರುಣಾಕರ ಬಳಿ ಸಾಲವಾಗಿ ಪಡೆದಿರುವುದು ₹ 50,000 ಮಾತ್ರ. ಆದರೂ, 3 ಲಕ್ಷ ಸಾಲ ಪಡೆದಿರುವುದಾಗಿ ಪ್ರಾಮಿಸರಿ ನೋಟ್ ಬರೆಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಪಡೆದ ಸಾಲಕ್ಕೆ ಬಡ್ಡಿ ಕಟ್ಟುತ್ತಾ ಬಂದಿದ್ದು ನ್ಯಾಯಾಧೀಶರ ಮುಂದೆಯೂ ಹೇಳಿಕೆ ದಾಖಲಿಸಿದ್ದೇನೆ. ಶೀಘ್ರ ಸತ್ಯಾಂಶ ಹೊರಬೀಳಲಿದೆ’ ಎಂದು ಸ್ನೇಹಮಹಿ ಕೃಷ್ಣ ಪ್ರತಿಕ್ರಿಯಿಸಿದರು.
‘ಕೆಲವರು ನೈತಿಕವಾಗಿ ಕುಗ್ಗಿಸುವ ಯತ್ನ ಮಾಡುತ್ತಿದ್ದಾರೆ. ನನ್ನ ವಿರುದ್ದ 22 ಪ್ರಕರಣ ದಾಖಲಾಗಿದ್ದು 9 ಪ್ರಕರಣಗಳು ಬೋಗಸ್, 8 ಪ್ರಕರಣಗಳಲ್ಲಿ ನಿರಪರಾಧಿ ಎಂದು ಸಾಬೀತಾಗಿದೆ. 3 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.