ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಲ್ಲೂರು | ಪಂಕ್ತಿಸೇವೆಗೆ ಜನಸಾಗರ; ಬಾಡೂಟದ ಘಮಲು

ಜಾತ್ರೆಯ ನಾಲ್ಕನೇ ದಿನ, ಮಾಂಸದೂಟ ಸಿದ್ಧಪಡಿಸಿ ಎಡೆ ಅರ್ಪಿಸಿದ ಭಕ್ತರು
Last Updated 9 ಜನವರಿ 2023, 19:31 IST
ಅಕ್ಷರ ಗಾತ್ರ

ಹನೂರು: ಕಣ್ಣು ಹಾಯಿಸಿದಷ್ಟು ದೂರವೂ ಹರಡಿಕೊಂಡಿದ್ದ ಜನ ಸಾಗರ. ಎಲ್ಲೆಂದರಲ್ಲಿ ತಲೆ ಎತ್ತಿದ್ದ ಬಿಡಾರಗಳು. ಇಡೀ ಊರನ್ನೇ ಆವರಿಸಿದ್ದ ಬಾಡೂಟದ ಘಮಲು...

ಇದು ಕೊಳ್ಳೇಗಾಲ ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ನಾಲ್ಕನೇ ದಿನವಾದ ಸೋಮವಾರ ನಡೆದ ಪಂಕ್ತಿಸೇವೆಯಲ್ಲಿ ಕಂಡು ಬಂದ ಚಿತ್ರಣ.

ಶುಕ್ರವಾರ ರಾತ್ರಿ ಚಂದ್ರಮಂಡ ಲೋತ್ಸವ ಮೂಲಕ ಶುಭಾರಂಭಗೊಂಡ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ ಪಂಕ್ತಿಸೇವೆಗೆ ಟೆಂಪೊ, ಗೂಡ್ಸ್ ಆಟೊ, ಟ್ರ್ಯಾಕ್ಟರ್, ಲಾರಿ, ದ್ವಿಚಕ್ರ ವಾಹನ, ಬಸ್‌ಗಳಲ್ಲಿ ಬಂದ ಸಾವಿರಾರು ಭಕ್ತರು ದೇವಾಲಯದ ಸುತ್ತಲಿನ ಆವರಣದಲ್ಲಿ ಬಿಡಾರ ಹೂಡಿದ್ದರು. ತಲ ತಲಾಂತರದಿಂದಲೂ ನಡೆದುಕೊಂಡು ಬಂದಿರುವ ಜಾತ್ರೆಯಲ್ಲಿ ದೂಳು, ಅವ್ಯವಸ್ಥೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ನೀಲಗಾರ ವಿಧಾನಗಳೊಡನೆ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಾಲ್ಗೊಂಡರು.

ನೆತ್ತಿಯನ್ನು ಸುಡುತ್ತಿದ್ದ ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಂತರ ಮಧ್ಯಾಹ್ನ ಬಿಡಾರಗಳಿಗೆ ತೆರಳಿ ಸಾಮೂಹಿಕ ಸಹಪಂಕ್ತಿಯಲ್ಲಿ ಬಾಡೂಟ ಸವಿದರು. ಬೆಳಿಗ್ಗೆಯಿಂದಲೇ ಜಾತ್ರೆಗೆ ಸಾಕಷ್ಟು ವಾಹನಗಳು ಬಂದಿದ್ದರಿಂದ ಸಂಚಾರ ದಟ್ಟಣೆಯಾಯಿತು. ಸಹಸ್ರಾರು ಭಕ್ತರು ಏಕಾಏಕಿ ದೇವರ ಪೂಜೆಗೆ ಮುಂದಾದ ಪರಿಣಾಮ ಬಾರಿ ನೂಕು ನುಗ್ಗಲು ಉಂಟಾಯಿತು. ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಹಳೆಮಠ ಹಾಗೂ ಹೊಸಮಠಗಳ ಆವರಣದಲ್ಲಿ ಜಮಾಯಿಸಿದ್ದ ಭಕ್ತರು ತಮ್ಮ ನೆಚ್ಚಿನ ದೇವರಿಗೆ ಧೂಪ ಹಾಕಿ ನಮಿಸಿದರು. ನೀಲಗಾರ ದೀಕ್ಷೆ ಪಡೆದ ನೀಲಗಾರರು ಪ್ರತಿ ಬಿಡಾರಗಳಿಗೂ ತೆರಳಿ ಪಂಕ್ತಿಸೇವೆಗೆ ಚಾಲನೆ ನೀಡಿದರು. ದೂರದ ಊರುಗಳಿಂದ ವಾರಕ್ಕೂ ಮುಂಚೆ ಬಂದು ವಾಸ್ತವ್ಯ ಹೂಡಿದ್ದ ಭಕ್ತರು ಪಂಕ್ತಿಸೇವೆ ಮುಗಿಯುತ್ತಿದ್ದಂತೆ ತಮ್ಮ ಊರುಗಳಿಗೆ ತೆರಳಿದರು.

ಮಂಗಳವಾರ ಜಾತ್ರೆಯ 5ನೇ ದಿನ ಮುತ್ತತ್ತಿರಾಯನ ಸೇವೆ ಜರುಗ ಲಿದೆ. ಆ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

ದೂರವಾದ ಆತಂಕ: ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಂಕ್ತಿಸೇವೆ ಹೆಸರಿನಲ್ಲಿ ಪ್ರಾಣಿ ಬಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿ ಪ್ರಾಣಿ ಬಲಿಗೆ ಅವಕಾಶ ನೀಡಬಾರದು ಎಂಬ ತೀರ್ಪು ಕೂಡ ಹೊರ ಬಿದ್ದಿತ್ತು. ಹೈಕೋರ್ಟ್‌ ತೀರ್ಪಿನ ಅನ್ವಯ ಜಿಲ್ಲಾಡಳಿತ ಪ್ರತಿ ಬಾರಿ ಪ್ರಾಣಿ ಬಲಿ ನಿಷೇಧ ಆದೇಶ ಹೊರಡಿಸುತ್ತದೆ. ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಬಿಗಿ ಬಂದೋಬಸ್ತ್‌ ಕೈಗೊಳ್ಳು ತ್ತಾರೆ.

ಚಿಕ್ಕಲ್ಲೂರಿನಲ್ಲಿ ಬಲಿಪೀಠ ಇಲ್ಲ. ಅಲ್ಲಿ ಪ್ರಾಣಿ ಬಲಿ ನೀಡುವ ಪದ್ಧತಿ ಇಲ್ಲ ಎಂಬುದು ಭಕ್ತರ ವಾದ.

‘ಮಾಂಸಾಹಾರ ನಮ್ಮ ಹಕ್ಕು. ಮಾಂಸದಿಂದ ಅಡುಗೆ ಮಾಡಿ ಕಂಡಾ ಯಕ್ಕೆ ಎಡೆಕೊಟ್ಟು ಒಟ್ಟಾಗಿ ಕುಳಿತು ಆಹಾರ ಸೇವಿಸುವ ಪಂಕ್ತಿಸೇವೆ ಪರಂ ಪರೆ ಶತಮಾನಗಳಿಂದ ನಡೆದುಕೊಂಡು ಬಂದಿದೆ’ ಎಂಬುದು ಭಕ್ತರ ನಿಲುವು.

ಈ ಬಾರಿಯೂ ಪಂಕ್ತಿಸೇವೆಗೆ ಮುಕ್ತ ಅವಕಾಶ ನೀಡಬೇಕು ಎಂದು ಭಕ್ತರು ಪ್ರತಿಭಟನೆ ನಡೆಸಿದ್ದರು. ಜಿಲ್ಲಾಡಳಿತದ ಆದೇಶದ ಪಾಲನೆಗಾಗಿ ಪೊಲೀಸರು ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು. ವಾಹನಗಳಲ್ಲಿ ಕುರಿ, ಕೋಳಿ ಮೇಕೆಗಳನ್ನು ದೇವಾ ಲಯಕ್ಕೆ ತರುವುದನ್ನು ತಪ್ಪಿಸಲು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ತಪಾಸಣೆ ಯನ್ನೂ ಕೈಗೊಂಡಿದ್ದರು.

ಸಹಭೋಜನ
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ತಾವು ಹಾಕಿದ್ದ ಡೇರೆಗಳ ವ್ಯಾಪ್ತಿಯಲ್ಲೇ ಆಡು, ಕುರಿ, ಕೋಳಿಗಳ ಮಾಂಸಗಳಿಂದ ಆಹಾರವನ್ನು ಸಿದ್ಧಪಡಿಸಿ ಎಡೆ ಅರ್ಪಿಸಿ, ಒಟ್ಟಾಗಿ ಕುಳಿತು ಭೋಜನ ಮಾಡಿದರು.

ಹಲವು ಭಕ್ತರು ಹೊರಗಡೆಯಿಂದ ಮಾಂಸ ತಂದಿದ್ದರೆ, ಇನ್ನೂ ಕೆಲವರು ದೇವಾಲಯದಿಂದ ಸಾಕಷ್ಟು ದೂರದಲ್ಲಿ ಕುರಿ, ಆಡು, ಕೋಳಿಗಳನ್ನು ವಧಿಸಿ ಮಾಂಸದ ಅಡುಗೆ ಸಿದ್ಧಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT