ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ರೆಸಾರ್ಟ್‌, ಹೋಂಸ್ಟೇಗಳಲ್ಲಿ ಜನಜಂಗುಳಿ

ಕ್ರಿಸ್‌ ಮಸ್‌, ಹೊಸ ವರ್ಷಾಚರಣೆಯ ಸಂಭ್ರಮ, ಜ.5ರವರೆಗೂ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರು
Published 26 ಡಿಸೆಂಬರ್ 2023, 8:28 IST
Last Updated 26 ಡಿಸೆಂಬರ್ 2023, 8:28 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಕ್ರಿಸ್‌ಮಸ್‌, ವರ್ಷಾಂತ್ಯ ಮತ್ತು ಹೊಸ ವರ್ಷಾಚರಣೆ ಅಂಗವಾಗಿ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟಿದ್ದು, ರೆಸಾರ್ಟ್‌, ಹೋಂ ಸ್ಟೇ, ವಸತಿಗೃಹಗಳು ಭರ್ತಿಯಾಗಿವೆ. ದೇವಾಲಯಗಳಿಗೂ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದೆ.

ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿರುವ ರೆಸಾರ್ಟ್‌, ಹೋಂಸ್ಟೇ, ಲಾಡ್ಜ್‌, ವಸತಿಗೃಹಗಳಲ್ಲಿ ಎಲ್ಲೂ ಕೊಠಡಿಗಳು ಖಾಲಿ ಇಲ್ಲ.  ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ವ್ಯಾಪ್ತಿಯ ರೆಸಾರ್ಟ್‌, ಹೋಂಸ್ಟೇಗಳಲ್ಲಿ ಜನಸಂದಣಿ ಕಂಡು ಬರುತ್ತಿದೆ. ಬಂಡೀಪುರ ಸಫಾರಿ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟಗಳಿಗೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಬಂಡೀಪುರ ಮಾರ್ಗವಾಗಿ ಊಟಿಗೆ ಹೋಗುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು, ಹೆದ್ದಾರಿಯಲ್ಲಿ ವಾಹನ ದಟ್ಟಣೆ ಕಂಡು ಬರುತ್ತಿದೆ.

ಯಳಂದೂರು ತಾಲ್ಲೂಕಿನ ಬಿಳಿಬಿರಿರಂಗನಬೆಟ್ಟದಲ್ಲಿನ ಹೋಂ ಸ್ಟೇಗಳು, ಅತಿಥಿಗೃಹಗಳು, ಕೆ.ಗುಡಿಯ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಕೂಡ ಭರ್ತಿಯಾಗಿವೆ. ಜನವರಿ 5ರವರೆಗೂ ಪ್ರವಾಸಿಗರು ಕಾಯ್ದಿರಿಸಿದ್ದಾರೆ. ಹನೂರು ತಾಲ್ಲೂಕಿನ ಗೋಪಿನಾಥಂನಲ್ಲಿರುವ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ನ ಮಿಸ್ಟ್ರಿ ಟ್ರಯಲ್‌ ಕ್ಯಾಂಪ್‌ನಲ್ಲೂ ಪ್ರವಾಸಿಗರು ಭರ್ತಿಯಾಗಿದ್ದಾರೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿಗೂ ಮೂರು ದಿನಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇನ್ನೂ ಒಂದೆರಡು ದಿನ ಇದೇ ಪರಿಸ್ಥಿತಿ ಇರಬಹುದು ಎಂದು ಹೇಳುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

‘ನೆರೆಯ ನೀಲಗಿರಿ, ಊಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ರೆಸಾರ್ಟ್ ತುಂಬಿದ್ದು ದರ ಎಂದಿಗಿಂತ ಹತ್ತು ಪಟ್ಟು ಹೆಚ್ಚು ಮಾಡಿದ್ದಾರೆ. ಅ ಕಾರಣದಿಂದಾಗಿ ಕೆಲವರು ಬಂಡೀಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭ್ರಮಾಚರಣೆಗೆ ಬರುತ್ತಾರೆ’ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಸ್ಥಳೀಯ ಹೋಂ ಸ್ಟೇ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ವರ್ಷಾಚರಣೆಗೆ ನಿಯಮಗಳು: ಹೊಸ ವರ್ಷಾಚರಣೆಗೆ ಇನ್ನು ನಾಲ್ಕು ದಿನಗಳ ಬಾಕಿ ಇರುವಂತೆಯೇ ಬಂಡೀಪುರದ ಕಾಡಂಚಿನಲ್ಲಿರುವ ರೆಸಾರ್ಟ್‌, ಹೋಂ ಸ್ಟೇಗಳಲ್ಲಿ ಹೊಸ ವರ್ಷಾಚರಣೆ ಮಾಡಲು ಸಕಲ ಸಿದ್ಧತೆಗಳು ನಡೆದಿವೆ. ನೂರಾರು ಪ್ರವಾಸಿಗರು ಈಗಾಗಲೇ ಕೊಠಡಿ ಕಾಯ್ದಿರಿಸಿದ್ದಾರೆ.

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಾಡಿನಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇಲಾಖೆ ಅರಣ್ಯ ಇಲಾಖೆಗೆ ಈಗಾಗಲೇ ನಿಯಮಗಳನ್ನು ರೂಪಿಸಿದೆ.

‘ಕಾಡಂಚಿನಲ್ಲಿ ಬರುವ ರೆಸಾರ್ಟ್ ಮತ್ತು ಹೋಂ ಸ್ಟೇ ಗಳಲ್ಲಿ ಸಂಭ್ರಮಾಚರಣೆ ನೆಪದಲ್ಲಿ ಡಿಜೆ ಸೌಂಡ್ಸ್, ವಿದ್ಯುತ್ ದೀಪಾಲಾಂಕಾರ ಮತ್ತು ಗದ್ದಲ ಮಾಡಬಾರದು’ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.‌

ಗುಂಡ್ಲುಪೇಟೆ ತಾಲ್ಲೂಕಿನ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಲು ಸಾಲುಗಟ್ಟಿ ನಿಂತಿರುವ ಪ್ರವಾಸಿಗರು.
ಗುಂಡ್ಲುಪೇಟೆ ತಾಲ್ಲೂಕಿನ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಲು ಸಾಲುಗಟ್ಟಿ ನಿಂತಿರುವ ಪ್ರವಾಸಿಗರು.

2 ದಿನ ವಸತಿ ಗೃಹ ಬಂದ್ 

ಬಂಡೀಪುರದಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ವಸತಿ ಗೃಹಗಳಲ್ಲಿ ಡಿ.31 ಮತ್ತು ಜ.1 ರಂದು ಪ್ರವಾಸಗರಿಗೆ ವಸತಿ ಗೃಹಗಳನ್ನು ನೀಡದಿರಲು ನಿರ್ಧರಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಈ ರೀತಿ ಮಾಡುತ್ತಿದೆ.

  ‘ವರ್ಷಾಂತ್ಯದ ಕೊನೆಯ ದಿನಗಳಲ್ಲಿ ಬಂಡೀಪುರ ಕಾಡಂಚಿನಲ್ಲಿ ಇರುವ ಖಾಸಗಿ ವಸತಿ ಗೃಹಗಳು ಹಾಗೂ ಹೋಂ ಸ್ಟೇ ಗಳಿಗೂ ಸಹ ಸಂಭ್ರಮಾಚರಣೆಗಳು ನಡೆಯದಂತೆ ಅರಣ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ನಿಯಮಗಳನ್ನು ರೂಪಿಸಬೇಕು’ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಕಾಡಂಚಿನಲ್ಲಿರುವ ಖಾಸಗಿ ರೆಸಾರ್ಟ್ ಮತ್ತು ವಸತಿ ನಿಲಯದಲ್ಲಿ ಸಂಭ್ರಮಾಚರಣೆಗೆ ಎರಡು ದಿನಗಳ ಕಾಲ ನಿರ್ಬಂಧ ಹೇರಬೇಕು ಎಂದು ಬಂಡೀಪುರ ಹುಲಿ ನಿರ್ದೇಶಕ ರಮೇಶ್ ಕುಮಾರ್ ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ. 

ಸಂಭ್ರಮಾಚರಣೆ ನೆಪದಲ್ಲಿ ಗದ್ದಲ ಮಾಡಿದರೆ ಅಂತಹವರ ವಿರುದ್ಧ ಕ್ರಮವಹಿಸಲಾಗುತ್ತದೆ. ನಿಗಾ ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
–ಪಿ.ರಮೇಶ್ ಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT