ಗುರುವಾರ , ಅಕ್ಟೋಬರ್ 21, 2021
27 °C
ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ ಎಚ್ಚರಿಕೆ

ಅಕ್ರಮದ ವಿರುದ್ಧ ಕಾನೂನು ಕ್ರಮ: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ (ಚುಡಾ) ವ್ಯಾಪ್ತಿಗೆ ಬರುವ ನಗರಸಭೆ ಮತ್ತು ಗ್ರಾಮಗಳಲ್ಲಿ ಅಕ್ರಮ ಭೂ ವಿಂಗಡಣೆ ಮಾಡಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ ಮಂಗಳವಾರ ಎಚ್ಚರಿಸಿದರು. 

ಪ್ರಾಧಿಕಾರದ 75ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಕಾನೂನನ್ನು ಪಾಲಿಸದೆ ಸರ್ಕಾರಕ್ಕೆ ನಷ್ಟ ಉಂಟು ಮಾಡುವುದರ ಜೊತೆಗೆ ಅಭಿವೃದ್ಧಿಗೆ ಮಾರಕವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮ ಭೂ ವಿಂಗಡಣೆ ಮಾಡಿ ಮಾರಾಟ ಮಾಡುವವರಿಗೆ ನೋಟಿಸ್ ಜಾರಿ ಮಾಡಲಾಗುವುದು’ ಎಂದರು. 

‘ಪ್ರಾಧಿಕಾರದ ವತಿಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಆದರೂ ಕೆಲವರಿಂದ ನಗರಾಭಿವೃದ್ಧಿಗೆ ತೊಂದರೆಯಾಗುತ್ತಿದೆ. ಸಾಮಾನ್ಯ ಜನರಿಗೆ ಕಾನೂನು ಅರಿವು ಇಲ್ಲದಿರುವುದನ್ನು ದುರುಪಯೋಗಪಡಿಸಿಕೊಂಡು ವೈಯಕ್ತಿಕ ಲಾಭಕ್ಕಾಗಿ ಮಾರಾಟಗಾರರಿಂದ ಕೊಂಡುಕೊಳ್ಳುವವರಿಗೆ ತಪ್ಪು ಮಾಹಿತಿಗಳನ್ನು ನೀಡಿ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಜನ ಸಾಮಾನ್ಯರು ವಂಚನೆಗೊಳಗಾಗದೆ ಇಂತಹ ಸಂದರ್ಭಗಳಲ್ಲಿ ಸಂಪೂರ್ಣ ಮಾಹಿತಿ ತೆಗೆದುಕೊಂಡು ಜಾಗ ಖರೀದಿಸಬೇಕು. ಯಾವುದೇ ಒತ್ತಡಗಳಿಗೆ ಮಣಿದು ಕಡಿಮೆ ಹಣದಲ್ಲಿ ನಿವೇಶನ ಸಿಗುತ್ತದೆ ಎಂದು ಕೊಂಡುಕೊಳ್ಳುವುವರಿಂದ ಕಾನೂನು ತೊಡಕುಗಳು ಎದುರಾಗಿ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಅಕ್ರಮ ಭೂ ವಿಂಗಡಣೆಯಾಗಿರುವ ತುಂಡು-ತುಂಡು ಭೂಮಿ ಖರೀದಿಸುವುದಾಗಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಯಾರೂ ಮುಂದಾಗಬಾರದು. ಬಡಾವಣೆ ನಿರ್ಮಾಣ ಮಾಡಲು ಬಯಸುವವರು ಜಮೀನುಗಳನ್ನು ಕೊಂಡುಕೊಳ್ಳುವಾಗ ಅಗತ್ಯ ದಾಖಲೆಗಳ ಸಮೇತ ಕೂಲಂಕಷವಾಗಿ ಪರಿಶೀಲಿಸಿ ಕೊಂಡುಕೊಳ್ಳಬೇಕು’ ಎಂದರು.

ಅನುಮತಿ: ವಸತಿ, ವಾಣಿಜ್ಯ ಹಾಗೂ ಕೈಗಾರಿಕೆ ಉದ್ದೇಶದ ಆರು ವಿನ್ಯಾಸಗಳಿಗೆ ಸಭೆ ಅನುಮೋದನೆ ನೀಡಿತು. ಒಂದು ಭೂ ಉಪಯೋಗ ಬದಲಾವಣೆ ಹಾಗೂ ಒಂದು ಭೂ ಪರಿವರ್ತನೆ ವಿಷಯಗಳಿಗೆ ಸಭೆಯು ಒಪ್ಪಿಗೆ ನೀಡಿತು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಎಂ.ಎಸ್.ಪಂಕಜಾ, ನಗರಸಭೆ ಆಯುಕ್ತ ಕರಿಬಸವಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯರಾದ ಪರಶಿವಮೂರ್ತಿ ಎಸ್.ಆರ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಅನ್ನಪೂರ್ಣ, ಕೂಸಣ್ಣ, ಆರ್.ರಂಗಸ್ವಾಮಿ, ಕೆಂಪನಾಯ್ಕ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.