ಗುರುವಾರ , ಜನವರಿ 28, 2021
16 °C
ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಸಿ.ಎಂ. ಯಡಿಯೂರಪ್ಪ

ಮಹದೇಶ್ವರ ಬೆಟ್ಟ ಸುಂದರ ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸುಂದರ ಹಾಗೂ ಭಕ್ತಿ ಪೂರ್ವಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಗುರಿಯನ್ನು ರಾಜ್ಯ ಸರ್ಕಾರ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಹೇಳಿದರು. 

ಮಹದೇಶ್ವರ ಬೆಟ್ಟದಲ್ಲಿ ₹13.84 ಕೋಟಿ ವೆಚ್ಚದ ಎಂಟು ಯೋಜನೆಗಳಿಗೆ ಚಾಲನೆ ಹಾಗೂ ತಾಳಬೆಟ್ಟದಿಂದ ದೇವಾಲಯದವರೆಗೆ ಮೆಟ್ಟಿಲುಗಳ ಅಭಿವೃದ್ಧಿ ಸೇರಿದಂತೆ ₹109.93 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡುತ್ತದೆ. ಈಗಾಗಲೇ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಇನ್ನೂ ಹಲವು ಪ್ರಮುಖ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಈಗ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು. 

‘ಅಮಾವಾಸ್ಯೆ, ಜಾತ್ರೆಗಳ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ. ಭಕ್ತರಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಿ ಪವಿತ್ರ ಯಾತ್ರಾ ಸ್ಥಳವನ್ನಾಗಿ ಮಾಡುವ ಉದ್ದೇಶ ನಮ್ಮದು’ ಎಂದರು. 

ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ‘ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಬೇಡಿಕೆ ಇದೆ. ಈ ಕೇಂದ್ರವನ್ನು 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಭರವಸೆ ನೀಡಿದರು. 

ಸ್ವಚ್ಛತೆಗೆ ಒತ್ತು ನೀಡಿ: ‘ಮಹದೇಶ್ವರ ಸ್ವಾಮಿ ಕ್ಷೇತ್ರವು ಪ್ರಾಕೃತಿಕ ಸೊಬಗಿನಿಂದ ಕೂಡಿದ್ದು, ಈ ಸುಂದರ ಪರಿಸರವನ್ನು ಕಾಪಾಡುವುದು ನಮ್ಮ ಕರ್ತವ್ಯ. ಸುತ್ತಮುತ್ತಲಿನ ಪರಿಸರವನ್ನು ಪ್ಲಾಸ್ಟಿಕ್‌ಮುಕ್ತಗೊಳಿಸಬೇಕು’ ಎಂದು ಸಲಹೆ ನೀಡಿದರು. 

ಲೋಕೋಪಯೋಗಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಾತನಾಡಿ, ‘ಈಗ ಶಂಕು ಸ್ಥಾಪನೆ ನೀಡಿರುವ ಯೋಜನೆಗಳೂ ಸೇರಿದಂತೆ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳಿಗಹೆ ₹380 ಕೋಟಿ ಅನುದಾನ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲಾಗುವುದು’ ಎಂದರು. 

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ‘ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಮಹದೇಶ್ವರ ಬೆಟ್ಟಕ್ಕೆ ಪ್ರಾಧಿಕಾರ ರಚ‌ನೆ ಮಾಡುವ ಪ್ರಸ್ತಾವ ಮಾಡಿದ್ದರು. ನಂತರ ಪ್ರಾಧಿಕಾರ ಆಗಿ, ಈಗ ಅಭಿವೃದ್ಧಿ ನಡೆಯುತ್ತಿದೆ. ಇದೇ ವೇಗದಲ್ಲಿ ಅಭಿವೃದ್ಧಿಯಾದರೆ ಇನ್ನೂ ನಾಲ್ಕು ವರ್ಷಗಳಲ್ಲಿ ರಾಜ್ಯದ ಶ್ರೇಷ್ಠ ಧಾರ್ಮಿಕ ಕ್ಷೇತ್ರ ಆಗಲಿದೆ’ ಎಂದರು. 

ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಮಾತನಾಡಿ, ‘ಕ್ಷೇತ್ರವನ್ನು ಸುಂದರ ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಮಾಡುತ್ತೇವೆ. ಭಕ್ತಾದಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದರು.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಾಧಿಕಾರದ ವತಿಯಿಂದ ಕೈಗೊಂಡ ಸೇವಾ ಕಾರ್ಯಗಳನ್ನು ಅವರು ಪಟ್ಟಿ ಮಾಡಿದರು. 

ಪ್ರಾಧಿಕಾರದ 2021ನೇ ಸಾಲಿನ ಕ್ಯಾಲೆಂಡರ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. 

ಸಾಲೂರು ಮಠದ ಗುರುಸ್ವಾಮಿಗಳು, ಶಾಸಕರಾದ ಸಿ.ಎಸ್. ನಿರಂಜನ ಕುಮಾರ್, ಎನ್.ಮಹೇಶ್, ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪ ಕಾರ್ಯದರ್ಶಿ ಬಸವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಪ್ರಾಧಿಕಾರದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ನಾಗಮಲೆಗೆ ತೆರಳಲು ಅನುಕೂಲ ಕಲ್ಪಿಸಲು ಸಲಹೆ

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ‘ ಮಹದೇಶ್ವರಸ್ವಾಮಿಯು ಜಾತಿ ವ್ಯವಸ್ಥೆಯನ್ನು ಮೀರಿ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಅಚಲವಾದ ಶ್ರದ್ಧೆ ನಿಷ್ಠೆಯಿಂದ ಪ್ರತಿಯೊಬ್ಬರೂ ಸ್ವಾಮಿಯನ್ನು ಆರಾಧಿಸುತ್ತಾರೆ’ ಎಂದರು. 

‘ಬೆಟ್ಟಗುಡ್ಡ ಪ್ರದೇಶದಲ್ಲಿ ಕ್ಷೇತ್ರ ಇರುವುದರಿಂದ ಇಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವುದು ಅತ್ಯಂತ ಅವಶ್ಯಕ. ಈಗಾಗಲೇ ಹಲವು ಕೆಲಸಗಳು ನಡೆದಿವೆ ಇನ್ನಷ್ಟು ಆಗಬೇಕಿದೆ. ಕಾಲ್ನಡಿಗೆಯಲ್ಲಿ ಬರುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ಮೆಟ್ಟಿಲುಗಳನ್ನು ನಿರ್ಮಿಸುವ ಯೋಜನೆ ಈಗ ಅನುಷ್ಠಾನಕ್ಕೆ ಬರುತ್ತಿದೆ. ಅದೇ ರೀತಿ ನಾಗಮಲೆಗೂ ಸಹಸ್ರಾರು ಭಕ್ತರು ತೆರಳುತ್ತಾರೆ. ಅಲ್ಲಿಗೂ ಭಕ್ತರಿಗೆ ಸುಲಭವಾಗಿ ಹೋಗಿ ಬರಲು ಅನುಕೂಲ ಮಾಡಬೇಕು. ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ’ ಎಂದರು.  

ಕೃತಜ್ಞತೆ: ಸಾಲೂರು ಮಠದ ಶಾಂತ ಮಲ್ಲಿಕಾರ್ಜುನಸ್ವಾಮೀಜಿ ಅವರು ಮಾತನಾಡಿ, ಮಠಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಮಾಡಿರುವುದಕ್ಕೆ, ಮಠದ ಸಂಸ್ಕೃತ ಪಾಠಶಾಲೆಗೆ ಪ್ರಾಧಿಕಾರದಿಂದ ಕಟ್ಟಡ ನಿರ್ಮಿಸಲು ಹಾಗೂ ಸಾಹಿತ್ಯ ಸಂಸ್ಕೃತಿ ಅಧ್ಯಯನಕ್ಕಾಗಿ ಪ್ರಸರಾಂಗ ವಿಭಾಗ ಸ್ಥಾಪಿಸಲು ಅನುಮೋದನೆ ನೀಡಿರುವುದಕ್ಕೆ ಮುಖ್ಯಮಂತ್ರಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು