ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25, 26ರಂದು ಬಿ.ಎಸ್‌.ಯಡಿಯೂರಪ್ಪ ಮಹದೇಶ್ವರ ಬೆಟ್ಟಕ್ಕೆ

₹13.85 ಕೋಟಿಯ ಎಂಟು ಯೋಜನೆಗಳಿಗೆ ಚಾಲನೆ, ₹109.93 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
Last Updated 13 ನವೆಂಬರ್ 2020, 15:45 IST
ಅಕ್ಷರ ಗಾತ್ರ

ಚಾಮರಾಜನಗರ: ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಬರಲಿದ್ದು, ಇದೇ 25 ಮತ್ತು 26ರಂದು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

25ರಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಿದ್ದು, 26ರಂದು ₹13.84 ಕೋಟಿ ವೆಚ್ಚದ ಎಂಟು ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ತಾಳಬೆಟ್ಟದಿಂದ ಬೆಟ್ಟದವರಿಗೆ ಮೆಟ್ಟಿಲುಗಳ ನಿರ್ಮಾಣ ಸೇರಿದಂತೆ ₹109.93 ಕೋಟಿ ವೆಚ್ಚದ ಒಂಬತ್ತು ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್ ಅವರು ಶುಕ್ರವಾರ ಮುಖ್ಯಮಂತ್ರಿಗಳ ಭೇಟಿ ಸಂಬಂಧ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಕಾರ್ಯಕ್ರಮದ ಯಶಸ್ಸಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್‌ ಕುಮಾರ್‌ ಅವರು, ‘ಮುಖ್ಯಮಂತ್ರಿ ಅವರು ಜಿಲ್ಲೆಗೆ ಭೇಟಿ ನೀಡುವುದಕ್ಕಾಗಿ ಹಲವು ಸಮಯದಿಂದ ಕಾಯುತ್ತಿದ್ದೆವು. ಇದೇ 25ಕ್ಕೆ ಮಹದೇಶ್ವರ ಬೆಟ್ಟಕ್ಕೆ ಬರಲಿದ್ದಾರೆ. ಪ್ರಾಧಿಕಾರದ ಸಭೆ ನಡೆಸಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಹೊಸ ಯೋಜನೆಗಳಿಗೆ ಶಂಕು ಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ’ ಎಂದರು.

‘26ರಂದು ರಂಗಮಂದಿರದಲ್ಲಿ ಕೋವಿಡ್‌ ನಿಯಮಾವಳಿಗೆ ಒಳಪಟ್ಟು ಕಾರ್ಯಕ್ರಮ ನಡೆಯಲಿದೆ. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ. ಗರಿಷ್ಠ 200 ಆಹ್ವಾನಿತರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆವಕಾಶ ಇದೆ’ ಎಂದರು.

ಎಲ್ಲ ಪ್ರದೇಶಗಳೂ ಶ್ರೇಷ್ಠ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಚಾಮರಾಜನಗರಕ್ಕೆ ಕರೆದುಕೊಂಡು ಬರುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘25 ಮತ್ತು 26ರ ಭೇಟಿ ಬೆಟ್ಟದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತ’ ಎಂದರು.

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಭಯ ಇನ್ನೂ ಮುಖ್ಯಮಂತ್ರಿ ಅವರಿಗೆ ಇದೆಯೇ ಎಂದು ಕೇಳಿದ್ದಕ್ಕೆ, ‘ಖಂಡಿತವಾಗಿಯೂ ಭಯ ಇಲ್ಲ. ಸರ್ಕಾರ ನಡೆಸುತ್ತಿರುವವರಿಗೆ ಯಾವ ಸ್ಥಳವೂ ಕನಿಷ್ಠ ಅಲ್ಲ. ಎಲ್ಲ ಜಿಲ್ಲಾ ಕೇಂದ್ರಗಳೂ ಸಮಾನ ಶ್ರೇಷ್ಠವೇ. ಚಾಮರಾಜನಗರಕ್ಕೂ ಮುಖ್ಯಮಂತ್ರಿ ಅವರು ಬರಲಿದ್ದಾರೆ’ ಎಂದರು.

ಉದ್ಘಾಟನೆಗೊಳ್ಳಲಿರುವ ಯೋಜನೆಗಳು: 720 ಜನರು ತಂಗುವ ಡಾರ್ಮಿಟರಿ ಕಟ್ಟಡ (₹4.86 ಕೋಟಿ ವೆಚ್ಚ), ಅಂತರಗಂಗೆ ಸಮೀಪ ಶುದ್ಧ ನೀರಿನ ಕಲ್ಯಾಣಿ (₹4.27 ಕೋಟಿ), ವಾಣಿಜ್ಯ ಸಂಕೀರ್ಣ ಪಕ್ಕದಲ್ಲಿ ಆಧುನಿಕ ಸುಸಜ್ಜಿತ ಉಪಾಹಾರ ಮಂದಿರ (₹2.15 ಕೋಟಿ), ವಾಣಿಜ್ಯ ಸಂಕೀರ್ಣದಲ್ಲಿ ಮಾಹಿತಿ ಕೇಂದ್ರ (₹45 ಲಕ್ಷ), 65 ಶೌಚಾಲಯಗಳು (₹1.23 ಕೋಟಿ), ಪಾರ್ಕಿಂಗ್‌ ಯಾರ್ಡ್‌ ಬಳಿಯ ಶೌಚಾಲಯ ಕಟ್ಟಡ (₹25 ಲಕ್ಷ), ದೇವಸ್ಥಾನದ ಒಳ ಪ್ರಾಂಗಣದಲ್ಲಿರುವ ನವೀಕೃತ ಕೊಠಡಿ (₹12.50 ಲಕ್ಷ), ನಾಗಮಲೆ ಭವನದಲ್ಲಿ ವಿಡಿಯೊ ಕಾನ್ಫರೆನ್ಸ್‌ ಹಾಲ್‌ (₹50 ಲಕ್ಷ)

ಶಂಕುಸ್ಥಾಪನೆಗೊಳ್ಳಲಿರುವ ಯೋಜನೆಗಳು: 512 ಕೊಠಡಿಗಳ ಅತಿಥಿಗೃಹ ನಿರ್ಮಾಣ ಕಾಮಗಾರಿ (₹45 ಕೋಟಿ ವೆಚ್ಚ), ದೇವಸ್ಥಾನದ ಹಿಂಭಾಗದಲ್ಲಿ ತಿರುಪತಿ ಮಾದರಿಯಲ್ಲಿ ಸರತಿ ಸಂಕೀರ್ಣ ನಿರ್ಮಣ ಕಾಮಗಾರಿ (₹24 ಕೋಟಿ), ತಾಳಬೆಟ್ಟದಿಂದ ಮಹದೇಶ್ವರಸ್ವಾಮಿ ದೇವಸ್ಥಾನದವರೆಗೆ ಕಾಲ್ನಡಿಗೆ ಮಾರ್ಗದಲ್ಲಿ ಗ್ರ್ಯಾನೈಟ್‌ ಮೆಟ್ಟಿಲು ನಿರ್ಮಾಣ (₹22 ಕೋಟಿ), 30 ಜನರು ತಂಗುವ ಡಾರ್ಮಿಟರಿ ಕಟ್ಟಡ ನಿರ್ಮಾಣ ಕಾಮಗಾರಿ (₹7.90 ಕೋಟಿ), ದೊಡ್ಡಕೆರೆ ಅಭಿವೃದ್ಧಿ (₹4.80 ಕೋಟಿ), ದಾಸೋಹ ಭವನದಿಂದ ಶಾಶ್ವತ ಹೆಲಿಪ್ಯಾಡ್‌ವರೆಗೆ ರಸ್ತೆ ಅಭಿವೃದ್ಧಿ (₹3 ಕೋಟಿ), ಕತ್ತಿಪವಾಡದಿಂದ ತಂಬಡಗೇರಿ ಮೂಲಕ ಎಸ್‌ಬಿಎಂ ವೃತ್ತದವರೆಗೆ ಕಾಂಕ್ರೀಟ್‌ ರಸ್ತೆ (₹1.35 ಕೋಟಿ), ಪೊಲೀಸ್‌ ವಸತಿ ಗೃಹಕ್ಕೆ ಹೋಗುವ ರಸ್ತೆ ಅಭಿವೃದ್ಧಿ (₹98 ಲಕ್ಷ), ಹೆಚ್ಚುವರಿ ಲಾಡು ತಯಾರಿಸುವ ಕಟ್ಟಡ ನಿರ್ಮಾಣ (₹90 ಲಕ್ಷ).

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೂ ಆಗಿರುವ ಸುರೇಶ್‌ ಕುಮಾರ್ ಅವರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸರ್ಕಾರಿ ಪ್ರೌಢ ಶಾಲೆಯ ಮೂವರಿಗೆ ಹಾಗೂ ಪಿಯು ಕಾಲೇಜುಗಳ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಂಬತ್ತು ವಿದ್ಯಾರ್ಥಿಗಳಿಗೆ (ವಿಭಾಗವಾರು ತಲಾ ಮೂವರು) ಇಲಾಖೆ ವತಿಯಿಂದ ಲ್ಯಾಪ್‌ಟಾಪ್‌ ವಿತರಿಸಿದರು.

ಲ್ಯಾಪ್‌ಟ್ಯಾಪ್‌ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು: ರೂಪಶ್ರೀ ಕೆ.ಎನ್‌ (610 ಅಂಕ), ಸರ್ಕಾರಿ ಪ್ರೌಢ ಶಾಲೆ ಸಂತೇಮರಹಳ್ಳಿ, ಪಲ್ಲವಿ ಎಸ್‌. (602 ಅಂಕ), ಸರ್ಕಾರಿ ಪ್ರೌಢ ಶಾಲೆ ರಾಮಾಪುರ, ರೋಜಾ ಎಚ್‌.ಎಸ್‌ (597), ಸರ್ಕಾರಿ ಪ್ರೌಢ ಶಾಲೆ ಹೆಗ್ಗೊಠಾರ.

ಪಿಯುಸಿ ವಿದ್ಯಾರ್ಥಿಗಳು: ಕಲಾವಿಭಾಗದಲ್ಲಿ ಬಿಂದು ಎಂ. (526 ಅಂಕ) ಸರ್ಕಾರಿ ಪಿಯು ಕಾಲೇಜು ಗುಂಡ್ಲುಪೇಟೆ, ಆನಂದರಾಜ್‌ ಎಸ್.‌ (523) ಸರ್ಕಾರಿ ಪಿಯು ಕಾಲೇಜು ಹಂಗಳ, ಮಧು.ಕೆ (548) ಸರ್ಕಾರಿ ಪಿಯು ಕಾಲೇಜು ಬಂಡಳ್ಳಿ. ವಾಣಿಜ್ಯ ವಿಭಾಗದಲ್ಲಿ ಮಹದೇವಸ್ವಾಮಿ (563)ಡಿ.ಬಿ.ಸರ್ಕಾರಿ ಪಿಯು ಕಾಲೇಜು ಗುಂಡ್ಲುಪೇಟೆ, ನಿಸರ್ಗ ಎಂ. (535) ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಚಾಮರಾಜನಗರ, ವಿಶಾಲಾಕ್ಷಿ ವಿ. (547) ಸರ್ಕಾರಿ ಪದವಿ ಪೂರ್ವ ಕಾಲೇಜು ಆಲೂರು. ವಿಜ್ಞಾನ ವಿಭಾಗದಲ್ಲಿ ಮಧುರಾ ಎಂ (567) ಎಸ್‌ವಿಕೆ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಕೊಳ್ಳೇಗಾಲ, ಪುನೀತ್‌ ಕುಮಾರ್ ಎಸ್‌. (550) ಸರ್ಕಾರಿ ಪಿಯು ಕಾಲೇಜು ಚಂದಕವಾಡಿ ಮತ್ತು ಚೈತ್ರಶ್ರೀ.ಎನ್‌ (479) ಸರ್ಕಾರಿ ಪಿಯು ಕಾಲೇಜು ಚಂದಕವಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT